9fccaac9-a26e-42a2-82a2-21970e57f794

ವಿಕಸಿತ ಭಾರತ ಸಂಕಲ್ಪ ಯಾತ್ರೆ 

ಸಂಸದ ಸಂಗಣ್ಣ ಕರಡಿ ಅಭಿಮತ

ಅಯೋಧ್ಯೆ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ: ರಾಮಜನ್ಮ ಭೂಮಿ ಅಯೋಧ್ಯೆ ಸಮಗ್ರ ಅಭಿವೃದ್ಧಿಯಂತೆ ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರುತ್ತಿದ್ದಂತೆ ಹನುಮ ಜನ್ಮಭೂಮಿ ಅಂಜನಾದ್ರಿ ಮೊದಲ ಆದ್ಯತೆ ಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ತಾಲೂಕಿನ ತಾಳಕೇರಿ ಹಾಗೂ ಬೋದೂರು ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಂಜನಾದ್ರಿ ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರದ ಜನತೆ ಆಶೀರ್ವಾದದಿಂದ ಎರಡು ಬಾರಿ ಸಂಸದನಾಗಿ ಆಯ್ಕೆಯಾಗಿದ್ದೇನೆ. ಬಿಜೆಪಿ ಅವಧಿಯಲ್ಲಿ ಸರ್ಕಾರದಿಂದ 120 ಕೋಟಿ ರೂ., ಕೆಕೆಆರ್‌ಡಿಬಿಯಿಂದ 40 ಕೋಟಿ ರೂ. ಬಿಡುಗಡೆ ಮಾಡಿಸಲಾಯಿತು. ಆದರೆ, ಕಾಂಗ್ರೆಸ್ ಸರ್ಕಾರ ಅನುದಾನ ನೀಡದೇ ಮೂಗಿನ ಮೇಲೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಜನರ ಆಶೀರ್ವಾದದಿಂದ ಮತ್ತೊಮ್ಮೆ ಗೆಲುವು ಸಾಧಿಸಿದ ತಕ್ಷಣವೇ ಮೊದಲ ಆದ್ಯತೆ ಯಾಗಿ ಕೇಂದ್ರದಿಂದ ಸಾವಿರಾರು ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಅಯೋಧ್ಯೆಯಲ್ಲಿ ನಮ್ಮ ಸರ್ಕಾರವು ರೈಲ್ವೆ, ವಿಮಾನ ನಿಲ್ದಾಣ, ಹೆದ್ದಾರಿ ನಿರ್ಮಾಣ ಸೇರಿ ಸಾವಿರಾರು ಕೋಟಿ ರೂ. ಅನುದಾನ ಮೀಸಲಿಟ್ಟು ಅಭಿವೃದ್ಧಿ ಮಾಡಲಾಗುತ್ತಿದೆ. ಅದೇ ಮಾದರಿಯಲ್ಲಿ ಅಂಜನಾದ್ರಿ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ರೋಪ್ ವೇ, ಹೆದ್ದಾರಿ ನಿರ್ಮಾಣ, ಕೇಬಲ್ ಕಾರ್ ಅಳವಡಿಕೆ, ಯಾತ್ರಿ ನಿವಾಸ ಸೇರಿ ಸಾವಿರಾರು ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಪಡಿಸುತ್ತೇನೆ ಎಂದು ಭರವಸೆ ನೀಡಿದರು.
ಆರು ದಶಕದಿಂದ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ರೈಲ್ವೆ ಯೋಜನೆಗಳೇ ಅನುಷ್ಟಾನ ಆಗಿರಲಿಲ್ಲ. ಮೋದಿ ಸರ್ಕಾರ ಬಂದ 9 ವರ್ಷದಲ್ಲಿ ಲೋಕಸಭೆ ವ್ಯಾಪ್ತಿಯ 7 ತಾಲೂಕುಗಳಿಗೆ ರೈಲ್ವೆ ಹಳಿ ಹಾಕಲಾಗಿದೆ. ಕೆಲ ತಾಲೂಕು ಗಳಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ. ಇನ್ನು ಕೆಲ ತಾಲೂಕುಗಳಿಗೆ ಎರಡು ತಿಂಗಳಲ್ಲಿ ಕಾರ್ಯಾರಂಭ ಆಗಲಿವೆ ಎಂದರು.
ಗಿಣಿಗೇರಾ- ಮಹೆಬೂಬ್ ನಗರ ಸಂಪರ್ಕಿಸುವ ರೈಲ್ವೆ ಯೋಜನೆ ಕಾಂಗ್ರೆಸ್ ಸರ್ಕಾರ ಅನುದಾನ ನೀಡಿರಲಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಹೊಸ ಯೋಜನೆ ಬದಲಿಗೆ ಹಳೆ ಯೋಜನೆಗಳಿಗೆ ಅನುದಾನ ಇಟ್ಟು ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ಯೋಜನೆ ಪ್ರಸ್ತಾಪಿಸುವುದು ಮುಖ್ಯವಲ್ಲ. ಆ ಯೋಜನೆ ಪೂರ್ಣಗೊಳಿಸಬೇಕು. ಈ ಬದ್ಧತೆಯಿಂದ ಯೋಜನೆ ಪೂರ್ಣಗೊಳಿಸುವ ಕೆಲಸ ಮಾಡುತ್ತಿದ್ದೇವೆ. ವಿಶ್ವದಲ್ಲೇ ವೇಗವಾಗಿ ರೈಲ್ವೆ ಕಾಮಗಾರಿ ಅಭಿವೃದ್ಧಿ ಹೊಂದುತ್ತಿರುವ ದೇಶ ನಮ್ಮದಾಗಿದೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ದೂರದೃಷ್ಟಿಯೇ ಕಾರಣ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಉಪಾಧ್ಯಕ್ಷ ಶಿವಶಂಕರ ರಾವ್ ದೇಸಾಯಿ, ಬಿಜೆಪಿ ಮುಖಂಡರಾದ ಅರವಿಂದಗೌಡ ಪಾಟೀಲ್, ಅಯ್ಯನಗೌಡ ಕೆಂಚಮ್ಮನವರ್, ಗ್ರಾ.ಪಂ. ಅಧ್ಯಕ್ಷೆ ಹನುಮವ್ವ ದೊಡ್ಡಪ್ಪ ,ಉಪಾಧ್ಯಕ್ಷೆ ಹನುಮವ್ವ ವಿರುಪಣ್ಣ ಅರಳಹಳ್ಳಿ, ಮುಖಂಡರಾದ ಶರಣಪ್ಪ ಶಂಕ್ರಪ್ಪ , ಹಾಗೂ ಗ್ರಾ.ಪಂ.ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು,ತಾಳಕೇರಿ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

  ಅಯೋಧ್ಯೆ- ಅಂಜನಾದ್ರಿ ಗೆ ರೈಲ್ವೆ ಸಂಪರ್ಕ

ಶ್ರೀರಾಮ ಜನ್ಮಭೂಮಿ ಅಯೋಧ್ಯೆ – ಹನುಮ ಜನ್ಮಭೂಮಿ ಅಂಜನಾದ್ರಿ ಗೆ ರೈಲ್ವೆ ಸಂಪರ್ಕ ಹಾಗೂ ಗಂಗಾವತಿ ರೈಲು ನಿಲ್ದಾಣದಿಂದ ಅಂಜನಾದ್ರಿ ವರೆಗೆ ಕೇಬಲ್ ಕಾರ್ ನಿರ್ಮಿಸಲು ಕೇಂದ್ರ ಸರ್ಕಾರದ ಮೊದಲ ಅದ್ಯತೆ ಆಗಿದೆ. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಸಕ್ತಿಯಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣವೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಂಸದರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!