ವೈದ್ಯರ ಸಲಹೆ ಇಲ್ಲದೆ  ಔಷಧಿಗಳನ್ನು ಸೇವಿಸಬೇಡಿ

                                                 ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರೆಡ್ಡಿ

ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೧೯- ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಚಾಲ್ತಿಯಲ್ಲಿರುವ ರೋಗ ನಿರೋಧಕ ಔಷಧಿಗಳನ್ನು ವೈದ್ಯರ ಸಲಹೆ ಇಲ್ಲದೆ ಸೇವಿಸಬಾರದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸವರೆಡ್ಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಆಂಟಿಮೈಕ್ರೋಬಿಯಲ್ ಜಾಗೃತಿ ಸಪ್ತಾಹ ಅಂಗವಾಗಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಜ್ಞಾವಿಧಿ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗಂಭೀರ ಕಾಯಿಲೆಗಳ ರೋಗ ನಿಯಂತ್ರಣಕ್ಕಾಗಿ ಬ್ಯಾಕ್ಟೀರಿಯ ವೈರಸ್‍ಗಳು, ಶೀಲಿಂಧ್ರಗಳು ಮತ್ತು ಸೂಕ್ಷ್ಮಾಣು ಜೀವಿಗಳನ್ನು ಔಷಧಿ ರೂಪದಲ್ಲಿ ಬಳಸಲಾಗುತ್ತದೆ. ಕೆಲವು ಬಾರಿ ಅಗತ್ಯವಿಲ್ಲದ ಔಷಧಿಗಳನ್ನು ಬಳಸಿದಾಗ ಅಥವಾ ಹೆಚ್ಚು ಡೋಸ್ ಬಳಸಿದಾಗ ಔಷಧಿಗಳು ದುಷ್ಪರಿಣಾಮಕಾರಿಯಾಗಿ ಬದವಲಾವಣೆಯಾಗುವ ಸಂಭವ ಇರುತ್ತದೆ ಎಂದು ತಿಳಿಸಿದರು.
ಇದು ಕೇವಲ ಮನುಷ್ಯರಿಗೆ ಮಾತ್ರವಲ್ಲದೇ ಪ್ರಾಣಿಗಳಿಗೂ ಮತ್ತು ಸುತ್ತಲಿನ ಪರಿಸರಕ್ಕೂ ಇದರ ಪ್ರಭಾವ ಉಂಟಾಗಿ ಹಾನಿಕಾರಕವಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುವಾಗ ವೈದ್ಯರ ಸಲಹೆ ಮೇರೆಗೆ ಮಾತ್ರ ಬಳಸಬೇಕು ಎಂದು ಅವರು ವಿನಂತಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ ರಮೇಶ್ ಬಾಬು ಅವರು ಮಾತನಾಡಿ, ಇತ್ತೀಚಿಗೆ ಕೋವಿಡ್ ಸನ್ನಿವೇಶದಲ್ಲಿ ಚಿಕಿತ್ಸೆ ಪಡೆಯುವ ಕ್ಷಯರೋಗಿಗಳು ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಔಷಧಿಯನ್ನು ಮಧ್ಯದಲ್ಲಿ ನಿಲ್ಲಿಸಿದಾಗ ರೋಗಿಗೆ ಪುನಃ ಕ್ಷಯರೋಗ ಬಂದಲ್ಲಿ ಬಹು ನಿರೋಧಕ ಔಷಧಿಯನ್ನು ಬಳಸಿದಾಗ ಅಡ್ಡಪರಿಣಾಮ ಉಂಟಾಗುವ ಸಾಧ್ಯತೆಗಳಿರುತ್ತವೆ ಎಂದು ಹೇಳಿದರು.
ಬಹು ನಿರೋಧಕ ಔಷಧಿಗಳ ಉತ್ಪತ್ತಿ ಮಾಡುವಾಗಲೂ ಸಹ ಪರಿಸರ ಮೇಲೆ ಹಾನಿಕಾರಕವಾಗುವ ಸಾಧ್ಯತೆಗಳಿರುವುದರಿಂದ ದಯವಿಟ್ಟು ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು ಸೇವಿಸಬಾರದು ಎಂದು ತಿಳಿಸಿದ ಅವರು, ರೋಗಗಳು ಬರದಂತೆ ತಡೆಯಲು ಮುಂಜಾಗೃತೆ ವಹಿಸಬೇಕು, ಆಗಾಗ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಸ್ವಚ್ಛಗೊಳಿಸಬೇಕು, ಜನಸಾಂದ್ರತೆಯಲ್ಲಿ ಮಾಸ್ಕ್ ಧರಿಸಿರಿ, ವಯೋವೃದ್ಧರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ವಿಎಸ್‍ಕೆ ವಿವಿಯ ಕುಲಸಚಿವ ಎಸ್.ಎನ್.ರುದ್ರೇಶ್, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮಾಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ, ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಆಸ್ಪತ್ರೆ ತಜ್ಞ ವೈದ್ಯರಾದ ಡಾ.ಯೋಗಾನಂದ ರೆಡ್ಡಿ, ಡಾ.ಸಂಗೀತಾ, ಡಾ.ಬಾಲ ವೆಂಕಟೇಶ್, ಡಾ.ವಿಶಾಲಾಕ್ಷಿ, ಡಾ.ಸುನಿಲ್, ಡಾ.ಶ್ರೀಧರ್, ಡಾ.ವಿಜಯಲಕ್ಷ್ಮಿ, ಡಾ.ಭಾವನಾ, ಡಾ.ಬಸವಪ್ರಭು, ಡಾ.ಪ್ರಶಾಂತ, ಡಾ.ವಿಶಾಲಾಕ್ಷಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಆಡಳಿತ ಅಧಿಕಾರಿ ಮೆಹಬೂಬ್ ಖಾನ್, ಅಧೀಕ್ಷಕ ರವಿಚಂದ್ರನ್, ವಾಹನ ಅಭಿಯಂತರರ ವಿಜಯಕುಮಾರ್, ಶೂಶ್ರುಷಕ ಅಧೀಕ್ಷಕಿ ಸೇಲಿನಾ, ಎಕ್ಸ್-ರೇ ತಂತ್ರಜ್ಞೆ ಚಿತ್ರಶೇಖರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!