b07afab7-960a-4f12-9433-157bc900e4d8

ವೈಯಕ್ತಿಕ ಪ್ರತಿಷ್ಠೆ ತ್ಯಜಿಸಿದ್ರೆ ಸಮಾಜದ‌ ಅಭಿವೃದ್ಧಿ ಸಾಧ್ಯ: ಸಚಿವ ಶಿವರಾಜ್ ತಂಗಡಗಿ ಸಲಹೆ

ಕರುನಾಡ ಬೆಳಗು ಸುದ್ದಿ

ಬೆಂಗಳೂರು: ಫೆ.16ಸವಿತಾ ಸಮಾಜದ ಮುಖಂಡರು ವೈಯಕ್ತಿಕ ಪ್ರತಿಷ್ಠೆ ಬಿಟ್ಟು ಒಗ್ಗಟ್ಟು ಪ್ರದರ್ಶಿಸಿದಾಗ ಮಾತ್ರ ತಮ್ಮ‌ ಸಮುದಾಯ ಅಭಿವೃದ್ಧಿಯಾಗಲು ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ಜಯಂತಿ ಆಚರಣೆಯಿಂದ ಸಣ್ಣ ಸಣ್ಣ ಸಮುದಾಯವರನ್ನು ಒಗ್ಗೂಡಿಸಲು ಹಾಗೂ ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ತಲುಪಿಸಲು ಸಹಾಯವಾಗಲಿದೆ. ಆ ಸಮಾಜದ ಮಹಾ ಪುರುಷರ ಬಗ್ಗೆ ಮುಂದಿನ‌ ಪೀಳಿಗೆಗೆ ತಿಳಿಸಿ ಕೂಡವ ಉದ್ದೇಶದಿಂದ ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದೆ.
ನಾನು ಕೂಡ ಸಣ್ಣ ಸಮುದಾಯದಿಂದ ಬಂದವನು. ನನ್ನೊಳಗೊಂಡಂತೆ ಪ್ರತಿಯೊಬ್ಬರು ವೈಯಕ್ತಿಕ ಪ್ರತಿಷ್ಠೆಯನ್ನು ತ್ಯಜಿಸಿ ಸಮಾಜದ ಪ್ರತಿಷ್ಠೆಯಾಗಿಸಿ. ವೈಯಕ್ತಿಕ ಪ್ರತಿಷ್ಠೆಯಿಂದ ಸಮಾಜ ಬೆಳವಣಿಗೆಗೆ ತೊಂದರೆಯಾಗಲಿದೆ. ಸವಿತಾ ಸಮಾಜದವರು ಒಗ್ಗಟ್ಟಿನಿಂದ ಇರಬೇಕೆಂದು ಸಲಹೆ ನೀಡಿದರು.

ಶಿಕ್ಷಣ ಮತ್ತು ಹೋರಾಟದಿಂದ ಸಮಾಜ ಸಂಘಟಿಸಲು ಸಾಧ್ಯ. ಹೀಗಾಗಿ ಸಮಾಜವನ್ನು ಹೆಚ್ಚು ಸಂಘಟಿಸಬೇಕು ಎಂದು ಕಿವಿಮಾತು ಹೇಳಿದರು.

ಸವಿತಾ ಸಮಾಜದವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಬೇಕು ಎಂಬ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಸಿ. ವೇಣುಗೋಪಾಲ್ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯೋತ್ಸವ ಪ್ರಶಸ್ತಿಗೆ ಸಮಿತಿಯನ್ನು ನೇಮಿಸಲಾಗಿತ್ತು. ಯಾವುದೇ ಒತ್ತಡಕ್ಕೆ ಮಣಿಯದೇ ಅರ್ಹರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಣ್ಣ ಸಮುದಾಯಗಳ ಬಗ್ಗೆ ವಿಶೇಷ ಕಾಳಜಿ ಇದೆ. ತಮ್ಮ‌ ಸಮಾಜದಲ್ಲಿನ ಅರ್ಹರನ್ನು ಮುಂದಿನ‌ ದಿನಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಲಾಗುವುದು ಎಂದು ಶಿವರಾಜ್ ತಂಗಡಗಿ ಭರವಸೆ ನೀಡಿದರು.

ಸವಿತಾ ಸಮಾಜದ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ನಡೆದಿದೆ ಎಂಬ ಸವಿತಾನಂದನಾಥ ಸ್ವಾಮೀಜಿ ಅವರ ಹೇಳಿಕೆಗೆ ವೇದಿಕೆಯಲ್ಲಿ ಉತ್ತರಿಸಿದ ಸಚಿವ ಶಿವರಾಜ್ ತಂಗಡಗಿ ಅವರು, 12 ನಿಗಮಗಳಿಗೂ ನಾನೇ ಅಧ್ಯಕ್ಷನಿದ್ದೇನೆ. ನಿಗಮಗಳನ್ನು ಒಳ್ಳೆ‌ ದೃಷ್ಟಿಯಿಂದ ನೋಡಬೇಕು. ನಿಗಮದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಶಿವನ ಬಲಗಣ್ಣಿನಿಂದ ಜನಿಸಿದವನೇ ಸವಿತಾ ಮಹರ್ಷಿ ಎಂದು ಪ್ರತೀತಿ ಇದೆ. ಸವಿತಾ ಸಮಾಜದವರು ಸೂರ್ಯ ವಶಂಸ್ಥರೆಂಬ ಇತಿಹಾಸ ಹೊಂದಿದ್ದು. ಸವಿತಾ ಮಹರ್ಷಿಗಳು ಅಪಾರ ಜ್ಞಾನ ಹೊಂದಿದ್ದರು. ಇಂತಹ ಮಹಾಪುರುಷರ ಜಯಂತಿಯನ್ನು ನಮ್ಮ ಹೆಮ್ಮೆ ಎಂದರು.‌

ಇಂದಿಗೂ ಮಂಗಳವಾದ್ಯವಿಲ್ಲದೆ, ಚೌಲಕರ್ಮವಿಲ್ಲದೆ ಯಾವ ಶುಭ ಕಾರ್ಯಗಳು ಪ್ರಾರಂಭವಾಗುವುದಿಲ್ಲ. ಇಂತಹ ಮಂಗಳವಾದ್ಯವನ್ನು ನುಡಿಸುವ ಪರಿಣಿತಿ ಈ ಸಮುದಾಯಕ್ಕೆ ಸಿದ್ಧಿಸಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸವಿತಾನಂದನಾಥ ಸ್ವಾಮೀಜಿ, ಮಾಜಿ ‌ವಿಧಾನಪರಿಷತ್ ಸದಸ್ಯ ವೇಣುಗೋಪಾಲ್, ಪ್ರೊ.ಎಸ್.ವಿ.ನರಸಿಂಹಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ನಿರ್ದೇಶಕಿ‌ ಡಾ.ಧರಣಿದೇವಿ ಮಾಲಗತ್ತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!