05ca78b6-6d2b-4a2f-85a4-84fbd724ce8e-231x300

ಸಂಯಮದ ಪಾಠ : ವೀಣಾ ಹೇಮಂತ್ ಗೌಡ

ಕರುನಾಡ ಬೆಳಗು ಸುದ್ದಿ

ಭಾರತೀಯ ಸಭ್ಯತೆಯಲ್ಲಿ ಸಂಯಮಕ್ಕೆ ಮಹತ್ವದ ಸ್ಥಾನವಿದೆ. ಹಿರಿಯರೊಂದಿಗೆ ಎಂತದ್ದೇ ಪರಿಸ್ಥಿತಿಯಲ್ಲಿಯೂ ವಿಚಲಿತನಾಗದೆ, ಉದ್ರೇಕಿತನಾಗದೆ, ಕೋಪಿತನಾಗದೆ ಯಾವ ರೀತಿ ಸಂಯಮದಿಂದ ನಡೆದುಕೊಳ್ಳಬೇಕು, ಸಭಾ ಮರ್ಯಾದೆಯ ಔಚಿತ್ಯ, ಹೆಣ್ಣು ಮಕ್ಕಳ ಜೊತೆಗಿನ ಸದ್ವರ್ತನೆ, ಚಿಕ್ಕ ಮಕ್ಕಳೊಂದಿಗಿನ ಹಿತವಾದ ನಡವಳಿಕೆ ಹೀಗೆ ಎಲ್ಲವೂ ಸಂಯಮದ ಗಡಿಯಲ್ಲಿಯೇ ಬರುತ್ತವೆ.

ರಾಕ್ಷಸೇಂದ್ರ ರಾವಣನು ಸೀತೆಯನ್ನು ಅಪಹರಿಸಿ ಅಶೋಕವನದಲ್ಲಿ ಸೆರೆಯಲ್ಲಿಟ್ಟರೂ ಕೂಡ ಆಕೆಯನ್ನು ಮುಟ್ಟದೇ ಸಂಯಮವನ್ನು ಪಾಲಿಸಿದ್ದ. ಶಿಶುಪಾಲನು 100 ತಪ್ಪುಗಳನ್ನು ಎಸಗುವವರೆಗೂ ಶ್ರೀ ಕೃಷ್ಣನು ಸಂಯಮದಿಂದ ವರ್ತಿಸಿದ. ಅದೆಷ್ಟೇ ಋಷಿ ಮುನಿಗಳ ತಪೋಭಂಗ ಮಾಡಲು ರಂಭೆ, ಊರ್ವಶಿ, ಮೇನಕೆಯರನ್ನು ದೇವೇಂದ್ರ ಕಳುಹಿಸಿದರೂ ಕೂಡ ಜಗ್ಗದ ಸಂಯಮದ ಸಾಧು-ಸಂತರ, ಋಷಿ-ಮುನಿಗಳ ನಾಡು ನಮ್ಮದು.

ರೈತರೇ ನಮ್ಮ ನಾಡಿನ ಬೆನ್ನೆಲುಬು ಎಂದು ಹೇಳುವ ನಮ್ಮ ದೇಶದಲ್ಲಿ ರೈತರನ್ನು ಅದೆಷ್ಟೇ ನಿಕೃಷ್ಟವಾಗಿ ಕಂಡರೂ ಕೂಡ ಯಾರಿಗೂ ಏನನ್ನು ಹೇಳದೆ ತನ್ನ ನೋವನ್ನು ನುಂಗಿಕೊಳ್ಳುವ ನಮ್ಮ ಅನ್ನದಾತ ಸಂಯಮಕ್ಕೆ ಅತ್ಯಂತ ದೊಡ್ಡ ಉದಾಹರಣೆ.

ನಮ್ಮ ಹೆಣ್ಣುಮಕ್ಕಳು ಕೂಡ ಅಷ್ಟೇ… ಮನೆಯಲ್ಲಿ ಅದೆಷ್ಟೇ ಅಪ್ಪನ
ಕೂಸುಮರಿಯಾದರೂ, ಅಮ್ಮನೊಂದಿಗೆ ಚೆಲ್ಲಾಟವಾಡಿದರೂ, ಅಣ್ಣಂದಿರೊಂದಿಗೆ ತರಲೆ ತುಂಟಾಟ ಮಾಡಿದರೂ ಮನೆಗೆ ಯಾರಾದರೂ ಬಂದಾಗ ಸಹನೆ, ಶಿಸ್ತು ಮತ್ತು ಸಂಯಮದ ಮೂರ್ತಿಗಳಾಗುತ್ತಾರೆ. ಗಂಡು ಹುಡುಗರೂ ಅಷ್ಟೇ ಶಾಲೆ, ಕಾಲೇಜುಗಳಲ್ಲಿ ಅದಷ್ಟೇ ತರಲೆ ಮಾಡಿದರೂ, ಆಟದ ಮೈದಾನದಲ್ಲಿ ಆಡುವಾಗ ಅದೆಷ್ಟೇ ಅಬ್ಬರ ಮಾಡಿದರೂ ಅಲ್ಲಿ ತಮಗೆ ಪಾಠ ಕಲಿಸಿದ ಓರ್ವ ಗುರುಗಳು ಹಾದು ಹೋದರೆ ಸಾಕು (ಕೆಲವೊಮ್ಮೆ ನಾಟಕೀಯವೆನಿಸಿದರೂ) ಸಂಯಮದ ಹೊದ್ದಿಕೆಯನ್ನು ತೊಡುತ್ತಾರೆ. ಇದಕ್ಕೆ ಕಾರಣ ನಮ್ಮ ಮೇಲಿರುವ ನಮ್ಮ ಪ್ರಾಚೀನ ಸಭ್ಯತೆ, ಸನಾತನ ಸಂಸ್ಕೃತಿಯ ಆಚಾರ ವಿಚಾರಗಳ ಪ್ರಭಾವ.

ಇಂತಹ ಸನಾತನವೂ ಜೊತೆಗೆ ನೂತನವೂ ಆದ ಸಂಯಮದ ಆಚರಣೆಯಲ್ಲಿ ಒಂದೊಮ್ಮೆ ಯಾರಾದರೂ ತಪ್ಪಿದಾಗ ಏನಾಗಬಹುದು…. ಅವರಿಗೆ ಯಾವ ರೀತಿಯ ಪಾಠ ಕಲಿಸುತ್ತಾರೆ ಎಂಬುದನ್ನು ಕೆಳಗಿನ ಕಥೆಯಲ್ಲಿ ನೋಡೋಣ.

ಉತ್ತರ ಭಾರತದ ಗೋರಖಪುರ ಎಂಬ ಹಳ್ಳಿಯಲ್ಲಿ ಅದೊಂದು ಜಮೀನ್ದಾರಿ ಮನೆತನ. ಸಾಕಷ್ಟು ಆಳು ಕಾಳುಗಳು, ಚಿನ್ನ, ಬೆಳ್ಳಿ, ದವಸ ಧಾನ್ಯಗಳ ಸಮೃದ್ಧಿಯಿಂದ ತುಂಬಿ ತುಳುಕುವ ಆ ಮನೆಯ ಒಡತಿ ಸೌಂದರ್ಯದ ಗಣಿ. ಒಳ್ಳೆಯ ಗರತಿಯೂ ಕೂಡ.

ಒಂದು ದಿನ ಒಳ್ಳೆಯ ಅಂಗ ಸೌಷ್ಟವವನ್ನು ಹೊಂದಿದ್ದ ಸ್ಪುರದ್ರೂಪಿಯಾಗಿದ್ದ, ಕಣ್ಣಲ್ಲಿ ಅಗಾಧ ಆಕರ್ಷಣೆಯನ್ನು ಅಡಗಿಸಿಟ್ಟುಕೊಂಡ ಕಂಚಿನ ಕಂಠದ ತರುಣ ಸನ್ಯಾಸಿ ಬೀದಿಯಲ್ಲಿ ನಡೆದು ಬರುತ್ತಿದ್ದರೆ, ಆತ ತನ್ನ ಕೈಯಲ್ಲಿ ಹಿಡಿದ ಕೋಲಿಗೆ ಕಟ್ಟಿದ್ದ ಪುಟ್ಟ ಗಂಟೆಯ ಕಿಂಕಿಣಿ ನಾದ ಎಲ್ಲೆಡೆ ಹರಡಿತ್ತು. ಆತನ ಹರವಾದ ಎದೆ, ಬಲಿಷ್ಠವಾದ ತೋಳುಗಳ ಮೇಲೆ ಹಣೆಯ ಮೇಲೆ ಭಸ್ಮವು ರಾರಾಜಿಸುತ್ತಿತ್ತು. ಆತ ಬೀದಿಯಲ್ಲಿ ಶ್ರೀಮದ್ಗಾಂಭೀರ್ಯದಿಂದ ನಡೆದು ಬರುತ್ತಿದ್ದರೆ ನೋಡಲು ಎರಡು ಕಣ್ಣು ಸಾಲದು ಎಂಬಂತೆ ತೋರುತ್ತಿತ್ತು.

ಆ ಸ್ಪುರದ್ರೂಪಿ ತರುಣ ಸನ್ಯಾಸಿಯು ಮನೆ ಮನೆಗಳ ಮುಂದೆ ಹೋಗಿ ಅಲಕ್ ನಿರಂಜನ್ ಅಲಕ್ ನಿರಂಜನ್ ಎಂದು ಕೂಗಿ ಭಿಕ್ಷೆ ಕೇಳುತ್ತಿದ್ದ. ಹೀಗೆ ಕೇಳುತ್ತಾ ಆ ಬೀದಿಯ ಅತಿ ದೊಡ್ಡ ನಿವಾಸವಾದ ಜಮೀನ್ದಾರನ ಮನೆಗೂ ಬಂದ. ಉಪ್ಪರಿಗೆಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಜಮೀನ್ದಾರನ ಮನೆಯೊಡತಿ ದೂರದಿಂದ ಬರುತ್ತಿದ್ದ ಸ್ಪುರದ್ರೂಪಿ ಸನ್ಯಾಸಿಯನ್ನು ನೋಡಿ ಕ್ಷಣ ಕಾಲ ಮೈಮರೆತಳು. ಆಕೆಯ ಎದೆ ಬಡಿತದ ತಾಳ ತಪ್ಪಿತು ಮೈಯೆಲ್ಲಾ ಝಿಲ್ಲೆಂದು ಬೆವರಿತು. ಸನ್ಯಾಸಿಯ ಕೋಲಿಗೆ ಕಟ್ಟಿದ ಗಂಟೆಯ ಕಿಂಕಿಣಿ ನಾದ ಆಕೆಯ ಮೈ ಮರೆಸಿತು.ತನ್ನಂತಾನೆ ಸಾವರಿಸಿಕೊಂಡ ಆ ಹೆಣ್ಣು ಮಗಳು ಮದುವೆಯಾದ ತನಗೇಕೆ ಇಂತಹ ದುರ್ಬುದ್ಧಿ ಬಂದಿತು ಎಂದು ತನ್ನನ್ನೇ ತಾನು ದೂಷಿಸಿಕೊಳ್ಳುತ್ತಾ ಮನೆಯ ಕೆಲಸದಾಳಿನ ಕೈಯಲ್ಲಿ ಮೊರದ ತುಂಬ ದವಸಧಾನ್ಯ ಕೊಟ್ಟು ಕಳುಹಿಸಿದಳು.ನಂತರ ಮದುವೆಯಾಗಿ ಮಕ್ಕಳಿರುವ ತಾನು ಈ ರೀತಿ ಮನದ ಮೇಲೆ ನಿಯಂತ್ರಣ ಕಳೆದುಕೊಂಡದ್ದನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಪಶ್ಚಾತಾಪ ಪಟ್ಟಳು. ನಾಳೆ ಆ ತರುಣ ಸನ್ಯಾಸಿ ಬಂದಾಗ ತಾನು ದೃಢ ಪ್ರಜ್ಞಳಾಗಿರಬೇಕು, ಸ್ವತಃ ತಾನೆ ಭಿಕ್ಷೆ ನೀಡಲು ಹೋಗಲೇಬಾರದು ಎಂದು ಶಪಥ ಮಾಡಿದಳು.

ಮತ್ತೆ ಮರುದಿನ ಸನ್ಯಾಸಿ ಓಣಿಯೊಳಗೆ ನಡೆದು ಬರುತ್ತಿರಲು ಆತನ ಗಂಟೆಯ ಕಿಂಕಿಣಿ ನಾದ ಆಕೆಯ ಮನಸ್ಸನ್ನು ತನ್ನತ್ತ ಸೆಳೆಯಿತು. ಮುರಳಿಯ ಕೊಳಲಿನ ಕೂಗಿಗೆ ಓಗೊಡುವ ಗೋಪಿಯರಂತೆ ತನ್ನ ಸಂಯಮದ ಕಟ್ಟನ್ನು ಹರಿದು ಡವ ಡವ ಎಂದು ಬಡಿದುಕೊಳ್ಳುವ ಹೃದಯದ ಬಡಿತವನ್ನು ಸಂಭಾಳಿಸುತ್ತಾ, ಮುಖದಲ್ಲಿ ಜಿನುಗುವ ಬೆವರನ್ನು ಒರೆಸಿಕೊಂಡು, ತಾನೇ ಮೊರದಲ್ಲಿ ದವಸ ಧಾನ್ಯಗಳನ್ನು ತುಂಬಿಕೊಂಡು ಹೊರಬಂದಳು. ಹಾಗೆ ಬಂದು ಸನ್ಯಾಸಿ ಒಡ್ಡಿದ ಜೋಳಿಗೆಗೆ ಧಾನ್ಯವನ್ನು ಸುರಿದ ಆಕೆ ಮನದ ಮುಂದಣ ಮಾಯೆಯಂತೆ ತೋರುತ್ತಿದ್ದ ಆತನನ್ನು ಕುರಿತು ನಿಮ್ಮ ಕಣ್ಣುಗಳು ಸೂಜಿಗಲ್ಲಿನಂತೆ ಸೆಳೆಯುತ್ತಿವೆ ಎಂದು ಬಾಯಿ ತಪ್ಪಿ ಹೇಳಿಯೇ ಬಿಟ್ಟಳು. ಕ್ಷಣ ಕಾಲ ದಿಗ್ಬ್ರಾಂತನಾದ ಆ ಸನ್ಯಾಸಿ ಅಲಕ್ ನಿರಂಜನ್ ಎಂದು ಜೋರಾಗಿ ಹೇಳಿ ಸರಸರನೇ ನಡೆದು ಬೀದಿಯ ತಿರುವಿನಲ್ಲಿ ಹೊರಳಿದನು.

ಗರೆಯತ್ತಿಯಾಗಿದ್ದ ತಾನು ಸಂಯಮದ ಕಟ್ಟೆ ಒಡೆದು ಹರೆಯದ ಹುಚ್ಚು ಕೋಡಿಯಂತೆ ವರ್ತಿಸಿದ ರೀತಿಗೆ ಮತ್ತೆ ಪಶ್ಚಾತಾಪದ ಬೇಗೆಯಲ್ಲಿ ಆ ದಿನವನ್ನು ದೂಡಿದಳು ಆ ಮನೆಯೊಡತಿ.

ಮತ್ತೆ ಮರುದಿನ ಅದೇ ಕಿಂಕಿಣಿ ಗಂಟೆಯ ಶಬ್ದ ಸನ್ಯಾಸಿಯ ಬರುವನ್ನು ಸೂಚಿಸಿತು. ಮೋಹದ ಪಾಶಡಿಂದ ಆಕೆಯನ್ನು ವಿವಶಳನ್ನಾಗಿಸಿ ಸೆಳೆಯಿತು ಸನ್ಯಾಸಿಯ ನಿಲುವು. ಮೊರದಲ್ಲಿ ದವಸ ಹಿಡಿದು ಬಂದಳು ಗರತಿ. ಜೊತೆಗೆ ಸನ್ಯಾಸಿ ಹಿಂದಿನ ದಿನ ನೀಡದೆ ಇದ್ದ ಉತ್ತರ ಪಡೆಯಲೆಂದು ತಾನೇ ಖುದ್ದಾಗಿ ಭಿಕ್ಷೆ ನೀಡಲು ಬಂದ ಆಕೆ ಇನ್ನೇನು ಸನ್ಯಾಸಿಯ ಜೋಳಿಗೆಯಲ್ಲಿ ದವಸವನ್ನು ಹಾಕಬೇಕು ಜೋಳಿಗೆಯ ತುದಿಯಲ್ಲಿ ಮಿಂಚುವ ಎರಡು ಕಣ್ಣುಗಳು. ಆತಂಕಿತಳಾಗಿ ಸನ್ಯಾಸಿಯ ಮುಖವನ್ನು ದಿಟ್ಟಿಸಿದರೆ ಕಂಡದ್ದೇನು…. ಕಣ್ಣಿರಬೇಕಾದ ಜಾಗದಲ್ಲಿ ರಕ್ತ ಕರೆ ಗಟ್ಟಿದ ಎರಡು ಪುಟ್ಟ ತೂತುಗಳು. ನಿಧಾನವಾಗಿ ಸನ್ಯಾಸಿ ಹೇಳಿದ… ಗರತಿಯ ಸಂಯಮವನ್ನು ಸಡಿಲಿಸಿದ ಕಣ್ಣುಗಳು ಇಲ್ಲಿವೆ ತಾಯಿ ತೆಗೆದುಕೋ ಎಂದು….. ಚಿತ್ತನೆ ಚೀರಿದ ಆ ಗರತಿ ಪಶ್ಚಾತಾಪ ಮತ್ತು ದುಃಖದ ಭಾರದಿಂದ ಜೋರಾಗಿ ಕಿರುಚಿ ಮೂರ್ಛೆ ಹೋದಳು. ಕಣ್ಣುಗಳನ್ನು ಕಿತ್ತು ಆ ಹೆಣ್ಣು ಮಗಳ ಕಣ್ತೆರೆಸಿದ ಯುವ ಸನ್ಯಾಸಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ದೂರ ಕಣ್ಮರೆಯಾದನು.

ಆ ಹೆಣ್ಣು ಮಗಳ ಚಾಂಚಲ್ಯಕ್ಕೆ ಕಾರಣವಾದದ್ದು ತಾನು ಮತ್ತು ತನ್ನ ಯೌವನ ಭರಿತ ಶರೀರ ಎಂಬುದನ್ನು ಅರಿತ ಆ ಯುವ ಸನ್ಯಾಸಿ ತನಗೆ ತಾನೆ ಶಿಕ್ಷೆ ಕೊಟ್ಟುಕೊಂಡನಲ್ಲದೆ ಮೋಹ ಪಾಷದಲ್ಲಿ ಸಿಲುಕಿದ ಆ ಮಹಿಳೆಯ ಅರಿವಿನ ಕಣ್ಣನ್ನು ತೆರೆಸಿದನು ಎಂದಿಗೂ ಕೂಡ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಪರಧನ, ಪರಸತಿಯರನ್ನು ಕೆಟ್ಟ ದೃಷ್ಟಿಯಿಂದ ನೋಡಲೇಬಾರದು ಎಂಬ ಕಠಿಣ ನಿಯಮವನ್ನು ಪಾಲಿಸುತ್ತಾ ಬಂದಿದ್ದಾರೆ. ಆದ್ದರಿಂದಲೇ ಭಾರತೀಯ ಹೆಣ್ಣು ಮಕ್ಕಳು ಜಗತ್ತಿನಲ್ಲಿಯೇ ಅತ್ಯಂತ ಸಂಯಮಿಗಳು ಶಿಸ್ತುಳ್ಳವರು ಕಾಯಕ ನಿಷ್ಠೆಯುಳ್ಳವರು. ಇದು ನಿಜವಾದ ಸಾಮಾಜಿಕ ಸಭ್ಯತೆ. ಆದರೆ ಕೆಲ ವಿಷಯಗಳು ಎಲ್ಲಾ ಕಾಲಕ್ಕೂ ಸರ್ವಮಾನ್ಯ ಎಂಬುದನ್ನು ನಾವು ಮರೆಯಬಾರದು.

ನಮ್ಮ ಪ್ರಾಚೀನ ಸಭ್ಯತೆಗಳು ನಮ್ಮ ಹೆಮ್ಮೆಯಾಗಿರಬೇಕು, ಕಷ್ಟಪಟ್ಟು ಕೆಲಸ ಮಾಡಿ ಗುರು ಹಿರಿಯರಿಗೆ ತಲೆಬಾಗಿ, ನೀತಿ ನಿಯಮಗಳ ಅನುಸರಿಸಿ ತಲೆಯೆತ್ತಿ ಬಾಳುವ ಸಂಕಲ್ಪ ಮಾಡುವ

ವೀಣಾ ಹೇಮಂತ್ ಗೌಡ ಪಾಟೀಲ್

ಮುಂಡರಗಿ ಗದಗ್

Leave a Reply

Your email address will not be published. Required fields are marked *

error: Content is protected !!