
ಸಮಾಜವನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುವೆ -ವಿಶ್ವಕರ್ಮ ಸಮಾಜದ ಅಧ್ಯಕ್ಷ ನಾಗೇಶ ಕುಮಾರ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 17- ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದರುವ ವಿಶ್ವಕರ್ಮ ಸಮಾಜವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ನಮಗೆ ಸಿಕ್ಕಿರುವ ಅವಧಿಯಲ್ಲಿ ಸಂಘಟಿತ ಕೆಲಸ ಮಾಡಿ ಸಮಾಜದ ಏಳ್ಗೆಗೆ ಶ್ರಮಿಸುವುದಾಗಿ ಕೊಪ್ಪಳ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ನಾಗೇಶ ಕುಮಾರ ಹೇಳಿದರು.
ಹೊಸಳ್ಳಿ ರಸ್ತೆಯಲ್ಲಿರುವ ಮೌನೇಶ್ವರ ನಗರದ ಮೌನೇಶ್ವರ ಗಾಯತ್ರಿ ದೇಗುಲದ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದಿ ಕೊಪ್ಪಳ ಜಿಲ್ಲಾ ವಿಶ್ವಕರ್ಮ ಸಮಾಜದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ನಾವು ವಿಶ್ವಕ್ಕೆ ಅತ್ಯುನ್ನತವಾದ ಕಲೆ, ಸಂಸ್ಕೃತಿಯನ್ನು ನೀಡಿದ ಪರಂಪರೆಯವರು. ವೇದ-ಪುರಾಣಗಳ ಕಾಲದಿಂದ ಹಿಡಿದು ಅಧುನಿಕ ಭಾರತದ ಇತಿಹಾಸದುದ್ದಕ್ಕೂ ವಾಸ್ತುಶಿಲ್ಪ ಕಲೆ ಸೇರಿದಂತೆ ನಾನಾ ರಂಗದಲ್ಲಿ ದೊಡ್ಡ ಕೊಡುಗೆ ನೀಡಿದ ಸಮುದಾಯ ನಮ್ಮದು.
ದೇವತೆಗಳಿಗೆ ಆಯುಧ ಸೇರಿದಂತೆ, ಇಡೀ ವಿಶ್ವವನ್ನು ಸೃಷ್ಟಿ ಮಾಡಿದವನೇ ವಿಶ್ವಕರ್ಮ. ವಿಶ್ವಕರ್ಮರು ನೀಡಿದ ಅನುಪಮವಾದ ಕೊಡುಗೆ ಸ್ಮರಿಸಿ ಪ್ರಧಾನಿ ಮೋದಿ ವಿಶ್ವಕರ್ಮ ಯೋಜನೆ ಜಾರಿ ಮಾಡಿದ್ದಾರೆ. ಇಂತ ಉನ್ನತ ಪರಂಪರೆ ಹೊಂದಿರುವ ನಾವು ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದ್ದೇವೆ.
ಹೀಗಾಗಿ ನಮ್ಮಗೆ ಸಿಕ್ಕಿರುವ ಕಾಲವಧಿಯಲ್ಲಿ ಉತ್ತಮ ಕೆಲಸ ಮಾಡಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೇ ಸಮಾಜದ ನೈಜ ಬಡವರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ದೈವಜ್ಞ ಬ್ರಾಹ್ಮಣ ಸಮಾಜದ ಮುಖಂಡ ಶ್ರವಣಕುಮಾರ ರಾಯ್ಕರ್ ಮಾತನಾಡಿ, ಉನ್ನತ ಪರಂಪರೆ ಹೊಂದಿರುವ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ನಾವೆಲ್ಲರೂ ಸಮುದಾಯ ಸಂಘಟನೆಯ ಜೊತೆಗೆ ಅನ್ಯ ಸಮಾಜವನ್ನೂ ಪ್ರೀತಿಯಿಂದ ಕಾಣಬೇಕು ಎಂದರು.
ಉದ್ಯಮಿ ಮಾಂತಗೊಂಡ ರವಿ, ನಾಗಲಿಂಗಪ್ಪ ಪತ್ತಾರ, ರುದ್ರಪ್ಪ ಬಡಿಗೇರ, ಈಶಪ್ಪ ಬಡಿಗೇರ ಸುರೇಶ ಇತರರು ಮಾತನಾಡಿದರು. ಮಂಜುನಾಥ ಪತ್ತಾರ, ದೇವೇಂದ್ರಕುಮಾರ, ವೀರೇಶ ಪತ್ತಾರ, ನಾರಾಯಣಪ್ಪ ಪತ್ತಾರ, ಬಸವರಾಜ ಕೊಪ್ಪಳ ಸೇರಿದಂತೆ ಸಮಾಜದ ಕೊಪ್ಪಳ ಜಿಲ್ಲಾ ಘಟಕದ ಪದಾಧಿಕಾರಿಗಳಿದ್ದರು.