
ಸರಿ ತಪ್ಪುಗಳ ನಿರ್ಣಯ : ವೀಣಾ ಪಾಟೀಲ್
ಕರುನಾಡ ಬೆಳಗು ಸುದ್ದಿ
ಕೆಲವು ವರ್ಷಗಳ ಹಿಂದಿನ ಘಟನೆ… ಮನೆಯಲ್ಲಿ ಅಂದು ಮುಂಜಾನೆಯೇ ಹಾಲು ಖಾಲಿಯಾಗಿದ್ದು ಮನೆ ಕೆಲಸದ ಹುಡುಗನನ್ನು ಹಾಲು ತರಿಸಲು ಕಳುಹಿಸಿದೆ, ಹಾಲನ್ನು ತೆಗೆದು ಕೊಂಡು ಬಂದ ಆ ಹುಡುಗ ಅರ್ಧ ಲೀಟರ್ ಹಾಲಿನ ದರ 20 ರೂ ಎಂದು ಹೇಳಿದ. ಪಾಕೆಟ್ ಮೇಲಿನ ದರವನ್ನು ಪರಿಶೀಲಿಸಿದ ನಾನು ಇದರ ಮೇಲೆ ಕೇವಲ 18 ರೂಪಾಯಿ ಎಂದು ಇದೆ, ಮತ್ತೊಮ್ಮೆ ಹೋದಾಗ ಅಂಗಡಿಯವನಲ್ಲಿ ಈ ಕುರಿತು ಕೇಳು ಎಂದು ಹೇಳಿದೆ.
ಸಾಮಾನ್ಯವಾಗಿ ಹಾಲು ಖಾಲಿಯಾದಾಗ ನನ್ನ ಮಗ ಹೋಗಿ ತಂದಾಗ ಕೇವಲ 18 ರೂಗೆ ಒಂದು ಪ್ಯಾಕೆಟ್ ಹಾಲು ಕೊಡುತ್ತಿದ್ದ ಅಂಗಡಿಯಾತ ಕೆಲಸದವರನ್ನು ಕಳುಹಿಸಿದರೆ 20 ರೂಪಾಯಿ ತೆಗೆದುಕೊಳ್ಳುತ್ತಿದ್ದ.
ಮುಂದಿನ ಒಂದೆರಡು ದಿನಗಳಲ್ಲಿ ಇದೇ ರೀತಿ ಹಾಲು ಖಾಲಿಯಾದಾಗ ಮತ್ತೆ ತರಿಸಿದರೆ ನಮ್ಮ ಕೆಲಸದ ಹುಡುಗ 20 ರುಗೆ ಅರ್ಧ ಲೀಟರ್ ಪಾಕೆಟ್ ಎಂದು ಹೇಳಿ ತೆಗೆದುಕೊಂಡು ಬಂದ. ತುಸುಕೋಪಗೊಂಡ ನಾನು ಆತನಿಗೆ ಗಟ್ಟಿಯಾಗಿ ಕೇಳಲು ಹೇಳಿರಲಿಲ್ಲವೇ ಎಂದಾಗ ಅಕ್ಕವರೇ, ನಾನು ಕೇಳ್ದೆ ಅದಕ್ಕೆ ಆತ ಫ್ರಿಡ್ಜ್ ನಲ್ಲಿ ಇಡ್ತೀವಲ್ಲ ಅದರ ಚಾರ್ಜ್ ಎಂದು ಹೇಳಿದನೆಂದೂ, ಸುತ್ತಮುತ್ತ ಇದ್ದ ಜನರು ಅಯ್ಯೋ ಅಷ್ಟು ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ, ಎರಡು ರೂ ತಾನೆ ಕೊಟ್ಟುಬಿಡಿ ಎಂದು ಹೇಳಿದರು ಎಂದೂ ಹೇಳಿದನು.
ಇದು ಹೀಗೆಯೇ ಒಂದೆರಡು ಬಾರಿ ಮುಂದುವರಿದಾಗ ನಾನು ತುಸು ಅಸಮಾಧಾನದಿಂದಲೇ ಅಂಗಡಿಯ ಮಾಲೀಕರನ್ನು ಪ್ರಶ್ನಿಸಿದಾಗ ಅಂಗಡಿಯವರು ಬೇಜವಾಬ್ದಾರಿ ಉತ್ತರವನ್ನು ನೀಡಿ ಯಾರನ್ನು ಬೇಕಾದರೂ ಕೇಳಿ ಹೋಗಿ ಎಂದು ತುಸು ಜೋರಾಗಿಯೇ ಹೇಳಿದರು.
ಗ್ರಾಹಕಳಾಗಿ ನನ್ನ ಹಕ್ಕನ್ನು ಚಲಾಯಿಸಿ ಮುಖಭಂಗಿತಳಾದ ನಾನು ಹಾಲಿನ ಪಾಕೆಟ್ ಮೇಲಿದ್ದ ಹಾಲು ಒಕ್ಕೂಟ ಮಹಾಮಂಡಳಿಯ ಆಫೀಸಿಗೆ ಕರೆ ಮಾಡಿ ವಿಚಾರಿಸಿದೆ. ಆಗ ಅವರು ಎಲ್ಲೂ ಫ್ರೀಜ್ ಮಾಡುವ ಚಾರ್ಜ್ ತೆಗೆದುಕೊಳ್ಳಬಾರದು… ಜೊತೆಗೆ ಅಧಿಕೃತ ಹಾಲು ಮಾರಾಟ ಕೇಂದ್ರಗಳಲ್ಲಿ ಕಡ್ಡಾಯವಾಗಿ ಪ್ಯಾಕೆಟ್ ಮೇಲೆ ನಮೂದಿಸಿದ ಹಣವನ್ನೇ ಪಡೆಯಬೇಕು ಎಂದು ನನಗೆ ವಿವರಿಸಿದರು.ವಿದ್ಯುತ್ ಬಿಲ್ ಮತ್ತು ಅಂಗಡಿಯ ಬಾಡಿಗೆಯನ್ನು ಹಾಲು ಒಕ್ಕೂಟ ಮಹಾಮಂಡಳಿಯವರು ಅವರೇ ಖುದ್ದಾಗಿ ಕಟ್ಟುವುದನ್ನು ಕೇಳಿ ತಿಳಿದು ಮೇಲಿನ ಎಲ್ಲ ಮಾಹಿತಿಯನ್ನು ನನ್ನ ಪತಿಗೆ ನೀಡಿದೆ.
ಈಗಾಗಲೇ ಈ ಕುರಿತು ಸಾಕಷ್ಟು ಮಾಹಿತಿಯನ್ನು ನಾನು ಸಂಗ್ರಹಿಸಿದ್ದೆ.
ದಿನಕ್ಕೆ 600 ಲೀಟರ್ ಹಾಲು ಖರ್ಚಾಗುವ ನನ್ನ ಚಿಕ್ಕ ಊರಿನಲ್ಲಿ ಅರ್ಧ ಲೀಟರಿನ 1200 ಪ್ಯಾಕೆಟ್ ಗಳಿಗೆ( ಬೇಕೆಂದೆ ಒಂದು ಲೀಟರ್ ನ ಪ್ಯಾಕೆಟ್ ತರಿಸುತ್ತಿರಲಿಲ್ಲ ) ಪ್ರತಿ ಪ್ಯಾಕೆಟ್ಗೆ ಎರಡು ರೂ ನಂತೆ 2400 ರೂ ಪುಕ್ಕಟೆ ಆದಾಯ ಆ ಅಂಗಡಿಯ ಮಾಲೀಕನಿಗೆ.
ಇಷ್ಟರಲ್ಲಾಗಲೇ ಮಹಾಮಂಡಳಿಯ ಒಕ್ಕೂಟದ ಅಧಿಕಾರಿಗಳಿಂದ ನಾನು ಹಾಲು ತೆಗೆದುಕೊಳ್ಳುತ್ತಿದ್ದ ಅಂಗಡಿಗೆ ಕರೆ ಹೋಗಿ ಅವರು ಅಂಗಡಿಯಾತನಿಗೆ ನಮೂದಿಸಿದ ದರಕ್ಕಿಂತ ಹೆಚ್ಚು ಹಣವನ್ನು ತೆಗೆದುಕೊಳ್ಳದಿರಲು ವಾರ್ನಿಂಗ್ ಮಾಡಿದ್ದರು.
ಕೂಡಲೇ ಎಚ್ಚೆತ್ತ ಅಂಗಡಿಯ ಮಾಲೀಕ ನಮ್ಮ ಮನೆಗೆ ಬಂದು
“ಅಮ್ಮ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಯಾಕೆ ಬಿಡ್ತೀರಾ?? ನಾನು ಪ್ರತಿದಿನ ನಿಮ್ಮ ಮನೆಗೆ ಹಾಲು ತಂದುಕೊಡುತ್ತೇನೆ.ಹಾಲು ತಂದು ಕೊಡುವ ಹುಡುಗನಿಗೆ ತಿಂಗಳಿಗೆ 150 ರೂಪಾಯಿ ಕೊಟ್ಟು ಬಿಡಿ” ಎಂದು ಕೇಳಿದರು.
ಈಗಾಗಲೇ ಎರಡು ರೂ ಗಾಗಿ ನಾನು ಜಗಳ ಮಾಡುತ್ತಿದ್ದೇನೆ ಎಂದು ನಮ್ಮ ಮನೆಯ ಕೆಲಸದವರು, ಅಂಗಡಿಯಾತ ನನಗೆ ಹೀಯಾಳಿಸಿದಂತೆ ಭಾಸವಾಗಿದ್ದು, ನೀವು ಹಾಲನ್ನು ತಂದು ಕೊಟ್ಟರೂ ನಾನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿ ಅವರನ್ನು ಹಿಂದೆ ಕಳುಹಿಸಿದೆ.
ಗ್ರಾಹಕರ ರಕ್ಷಣಾ ಕಾನೂನುಗಳು ಕೇವಲ ಕಾಗದಗಳಲ್ಲಿ ಇವೆ…. ಅವುಗಳ ಕುರಿತು ಏನಾದರೂ ನಾವು ಮಾತನಾಡಿದರೆ ಇವರಿಗೇನು ಕಮ್ಮಿ ಬೇಕಿದ್ರೆ ತೆಗೆದುಕೊಳ್ಳಬೇಕು ಬೇಡವಾದರೆ ಬಿಡಬೇಕು ಎಂಬ ಮಾತುಗಳು ಕೇಳಿ ಬರುತ್ತವೆ, ಆದರೆ ಅಷ್ಟೇ ಸ್ವಾಭಿಮಾನಿಯಾದ ನಾನು ಕೂಡ ಸುತ್ತ ಹತ್ತು ಹಳ್ಳಿಗಳಿರುವ ನನ್ನ ಊರಿನಲ್ಲಿ ಹಾಲಿನವರಿಂದ ಒಳ್ಳೆಯ ಆಗ ತಾನೇ ಕರೆದ ತಾಜಾ ಹಾಲನ್ನು ಪ್ರತಿದಿನ ಖರೀದಿಸುತ್ತೇನೆ.
ಈಗ ಹೇಳಿ ಹಾಲಿನ ಪಾಕೆಟ್ ಮೇಲೆ ನಮೂದಿಸಿದ ಬೆಲೆಯನ್ನು ಮಾತ್ರ ಕೊಡುತ್ತೇನೆ ಎಂದು ಹೇಳಿದ ನಾನು ಮಾಡಿದ್ದು ತಪ್ಪೇ?? ಇಲ್ಲವೇ ಜನರ ‘ಹೋಗಲಿ ಬಿಡು’ ಎಂಬ ಮನೋಭಾವವನ್ನು ಬಳಸಿಕೊಂಡು ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವ ಅಂಗಡಿಯವನದು ಸರಿಯೇ??
ಇದಾಗಿ ಹಲವು ವರ್ಷಗಳೇ ಕಳೆದು ಹೋಗಿದ್ದರೂ ನನ್ನ ಜಿಜ್ಞಾಸೆ ಹಾಗೆಯೇ ಮುಂದುವರೆದಿದೆ, ಪ್ರಶ್ನಿಸುವವರು ಇಲ್ಲದೇ ಹೋದಾಗ ಜನರು ನಿರಾತಂಕವಾಗಿ ತಪ್ಪುಗಳನ್ನು ಮಾಡುತ್ತಲೇ ಹೋಗುತ್ತಾರೆ. ಹಾಗಾದರೆ ಅವಜ್ಞೆ ಯಾರದು???
ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ ಗದಗ್