
ಗೃಹ ಲಕ್ಷ್ಮೀ ಸರ್ವರ್ ಇರುವುದಿಲ್ಲ ನಾಳೆ ಬನ್ನಿ…!
ಕಛೇರಿಗೆ ಅಲೆದಾಟ – ಮಹಿಳೆಯರ ಗೋಳು ಕೇಳೋರ್ಯಾರು
ಕರುನಾಡ ಬೆಳಗು ಸುದ್ದಿ
ವಿಜಯನಗರ.22- ಗೃಹ ಲಕ್ಷ್ಮೀ ಯೋಜನೆಯ ವಿವರ ತಿಳಿಯಲು ಮತ್ತು ದೋಷಗಳನ್ನು ಸರಿಪಡಿಸಲು ಇಲಾಖೆಯ ಕಛೇರಿಗೆ ಬಂದರೆ ಸರ್ವರ್ ಇರುವುದಿಲ್ಲ ನಾಳೆ ಬನ್ನಿ…ಎಂದು ಬರಹದ ಬೋರ್ಡ್ ಹಾಕಲಾಗಿದೆ. ನಾವು ಮರಳಿ ಊರಿಗೆ ಹೋದಾಗ ಒಂದು ವೇಳೆ ಸರ್ವರ್ ಬಂದರೆ ಹೇಗೆ? ಎನ್ನುವಂತ ಪ್ರಶ್ನೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದರು.
ಗೃಹ ಲಕ್ಷ್ಮೀ ಯೋಜನೆಯ ಹಣ ಖಾತೆಗೆ ರವಾನೆ ಯಾಗದ ಬಗ್ಗೆ, ಇ ಕೇವೈಸಿ ಬಗ್ಗೆ, ಮತ್ತು ಇತರೆ ವಿವರ ಪಡೆಯಲು ಮಹಿಳೆಯರು ಮತ್ತು ಪುರುಷರು ತಾಲೂಕಿನ ಹಲವು ದೂರದ ಗ್ರಾಮಗಳಿಂದ ಹೊಸಪೇಟೆಯ ಎಂ ಜೆ ನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂದರೆ ‘ಸರ್ವರ್ ಇರುವುದಿಲ್ಲ ನಾಳೆ ಬನ್ನಿ’ ಎಂದು ಸೂಚನಾ ಫಲಕವನ್ನು ಹಾಕಲಾಗಿದೆ. ನಾವು ಫಲಕವನ್ನು ನೋಡೋದು ಹೋಗೋದು ಆಗಿದೆ. ಇದೇ ರೀತಿಯಾಗಿ ದಿನಕ್ಕೆ ಸುಮಾರು 100 ಮಂದಿ ವಾಪಸ್ ಹೋಗುವ ಸ್ಥಿತಿ ಎದುರಾಗಿದೆ.18ನೇ ತಾರೀಕು ಗುರುವಾರ ದಿಂದ ಇದೇ ಸಮಸ್ಸೆಯಾಗಿದೆ, 4,5ದಿನಗಳಿಂದ ಕಛೇರಿಗೆ ಅಲೆಯುತ್ತಿದ್ದೇವೆ, ಇನ್ನಾದರೂ ಸಮಸ್ಸೆ ಬಗೆ ಹರಿಯದಿದ್ದರೆ ಹೇಗೆ. ದೂರದ ಗ್ರಾಮಗಳಿಂದ ಬರುತ್ತಿದ್ದೇವೆ ಪ್ರತೀ ದಿನ ಕಛೇರಿಗೆ ಅಲೆಯುವ ಕೆಲಸವಾಗಿದೆ. ಇದೇರೀತಿ ಮುಂದುವರಿದರೆ ಪ್ರತಿದಿನ ಕೂಲಿ ಕೆಲಸ ಬಿಟ್ಟು ಕಛೇರಿಗೆ ಅಲೆಯುವ ಕೆಲಸ ಮಾಡಬೇಕಾಗುತ್ತದೆ.
ನಾವು ಕೂಲಿ ಮಾಡಿ ಬದುಕುವ ಜನಗಳು, ಕೆಲಸಕ್ಕೆ ಹೋಗದಿದ್ದರೆ ಮನೆಯಲ್ಲಿ ತಂದು ಹಾಕೋರ್ಯಾರು. ಕೂಡಲೆ ಸಮಸ್ಯೆ ಬಗ್ಗೆ ವಿವರ ಪಡೆಯಲು ಕಚೇರಿಗೆ ಬಂದಿರುವಂತ ಸಾರ್ವಜನಿಕರು ಅಳಲನ್ನು ತೋಡಿಕೊಳ್ಳುತ್ತಾ, ಕೂಡಲೇ ಸಮಸ್ಯೆಯನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದರು.
ಕಛೇರಿಗೆ ಅಲೆದಾಟ : ಹಳ್ಳಿಯಲ್ಲಿರುವ ಗ್ರಾಮವನ್ ಕೇಂದ್ರಗಳಲ್ಲಿ ಭೇಟಿ ಮಾಡಿ ಗೃಹಲಕ್ಷ್ಮಿ ಯೋಜನೆಯ ಖಾತೆಯ ಮಾಹಿತಿಯನ್ನು ಕೇಳಿದರೆ ಹೊಸಪೇಟೆಯ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಕಳುಹಿಸಲಾಗುತ್ತದೆ. ಆದರೆ ಇಲ್ಲಿ 18ನೇ ತಾರೀಕಿನಿಂದ ಅಂದರೆ ಗುರುವಾರದಿಂದ ಸರ್ವರ್ ಸಮಸ್ಯೆಯಾಗಿದೆ ಎಂದು ಹೇಳುತ್ತಿದ್ದಾರೆ. 4-5 ದಿನಗಳವರೆಗೆ ಸಮಸ್ಯೆ ಮುಂದುವರೆದಿದ್ದು. ಹಲವು ಗ್ರಾಮಗಳಿಂದ ಸಾರ್ವಜನಿಕರು ಕಛೇರಿಗೆ ಅಲೆಯುವ ಪರಿಸ್ಥಿತಿ ಉಂಟಾಗಿದೆ.
ನಾವು ಕೊಟ್ಟಿಗಿನಾಳ್ ಗ್ರಾಮದಿಂದ ಬಂದಿದ್ದೇನೆ ಎರಡು ಮೂರು ದಿನದಿಂದ ಓಡಾಡುತ್ತಿದ್ದೇವೆ. ಸರ್ವರ್ ಸಮಸ್ಯೆ ಇನ್ನೂ ಸರಿ ಹೋಗಿಲ್ಲ ಎಂದು ಹೇಳುತ್ತಿದ್ದಾರೆ, ಇದರಿಂದ ನಮಗೆ ಸಾಕಾಗಿ ಹೋಗಿದೆ. ಕೂಲಿ ಮಾಡಿ ಬದುಕುವ ನಮ್ಮಂತ ಜನಗಳಿಗೆ ಅಧಿಕಾರಿಗಳು ಬೇಗನೇ ಸ್ಪಂದಿಸಬೇಕು ಸಮಸ್ಯೆಯನ್ನು ಕೂಡಲೇ ಸರಿಪಡಿಸಬೇಕು.
– ಗಾಳೆಮ್ಮ, (ಕೊಟಿಗನಾಳ್)
ಸರ್ವರ್ ಸಮಸ್ಸೆ ಬೆಂಗಳೂರಿನಿಂದಲೇ ಆಗುತ್ತಿದೆ ನಾವೇನು ಮಾಡೋಕಾಗುತ್ತೆ, ಅಲ್ಲಿ ಸರಿ ಮಾಡಿದಮೇಲೇನೆ ಇಲ್ಲಿ ಸರಿ ಹೋಗೋದು, ಸಮಸ್ಸೆ ಬಗ್ಗೆ ನಾವು ಎಲ್ಲರಿಗೂ ಸಮಾಧಾನದಿಂದ ಹೇಳುತ್ತಿದ್ದೇವೆ.
– ಸಿಂಧು ಅಂಗಡಿ, ಸಿಡಿಪಿಒ ಹೊಸಪೇಟೆ.