
“ಸ್ಮರಣೆ’ಯೊಂದೆ ಸಾಲದೆ
ವೀಣಾ ಹೇಮಂತ್ ಗೌಡ ಪಾಟೀಲ್
ವೃದ್ದ ತಂದೆ ತನ್ನ ಮಕ್ಕಳು,ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಕೂರಿಸಿಕೊಂಡು ತನ್ನ ಮಕ್ಕಳ ಬಾಲ್ಯದ ದಿನಗಳ ಕುರಿತು ಹೇಳುತ್ತಿದ್ದರೆ ಪತ್ನಿ ಮತ್ತು ಮಕ್ಕಳು ಕೂಡ ತಮ್ಮ ನೆನಪುಗಳನ್ನು ಹಂಚಿಕೊಂಡು ದನಿಗೂಡಿಸುತ್ತಿದ್ದರು. ಸೊಸೆ ಮತ್ತು ಮೊಮ್ಮಕ್ಕಳು ಕಣ್ಣರಳಿಸಿ ತಮ್ಮ ಪಾಲಕರ ಬಾಲ ಲೀಲೆಗಳನ್ನು ಕೇಳುತ್ತಿದ್ದರು.
ಮಾತುಕತೆ ಮುಗಿದ ನಂತರ ಎಲ್ಲರೂ ಎದ್ದು ಹೋದರೆ ಅಜ್ಜ ತನ್ನ ಕನ್ನಡಕಕ್ಕಾಗಿ ತಡಕಾಡತೊಡಗಿದ. ಅದನ್ನು ನೋಡಿದ ಪುಟ್ಟ ಮೊಮ್ಮಗ ಅಜ್ಜ ಏನು ಬೇಕು? ಎಂದು ಕೇಳಲು ಅಜ್ಜ ನನ್ನ ಕನ್ನಡಕ ಎಲ್ಲಿಟ್ಟೆ ಅಂತ ನೆನಪಾಗುತ್ತಿಲ್ಲ ಎಂದು ಅಲವತ್ತುಕೊಂಡ. ಅಯ್ಯೋ ಮರಳು ಅಜ್ಜ!! ತಲೆ ಮೇಲೆ ಕನ್ನಡಕ ಇಟ್ಕೊಂಡು ಇಡೀ ಕೋಣೆ ಹುಡುಕ್ತೀಯಲ್ಲ ಅಂತ ತಮಾಷೆ ಮಾಡಿದ ಮೊಮ್ಮಗ ಅಜ್ಜನ ಕನ್ನಡಕವನ್ನು ಅವರ ಕಣ್ಣಿಗೆ ಸರಿಯಾಗಿ ಕೂರುವಂತೆ ಹಾಕಿದ.
ಹೌದಲ್ವೇ ಸ್ನೇಹಿತರೇ, ಎಷ್ಟೋ ಬಾರಿ ನಮ್ಮ ಜೀವನದಲ್ಲಿ ನಡೆದ ಹಲವಾರು ವರ್ಷಗಳ ನೆನಪುಗಳನ್ನು ಈಗ ತಾನೆ ನಡೆದಿದೆ ಎಂಬಂತೆ ನೆನಪಿಸಿಕೊಂಡು ಹೇಳುವ ನಾವು ನಮ್ಮ ದೈನಂದಿನ ಅವಶ್ಯಕತೆಗಳಾದ ಕನ್ನಡಕ, ಮೊಬೈಲ್, ಪರ್ಸ್, ಗಾಡಿಯ ಮತ್ತು ಮನೆಯ ಕೀಲಿ ಕೈ ಗಳನ್ನು ಹುಡುಕುತ್ತಾ ಇಡೀ ಮನೆಯ ವ್ಯವಸ್ಥೆಯನ್ನು ಬುಡಮೇಲು ಮಾಡಿಬಿಡುತ್ತೇವೆ. ಹೀಗಾಗಲು ಕಾರಣವೇನು?? ನಮ್ಮ ನೆನಪಿನ ಶಕ್ತಿಯ ಸ್ಮರಣಕೋಶಗಳ ವ್ಯವಸ್ಥೆಯೇ ಇದಕ್ಕೆ ಕಾರಣ.
ಹಾಗಾದರೆ ಈ ನೆನಪಿನ ಶಕ್ತಿಯ ಕುರಿತು ಕೊಂಚ ಮಾಹಿತಿ ಇಲ್ಲಿದೆ ಸ್ಮರಣೆ ಎಂದರೆ ನೆನಪಿನ ಶಕ್ತಿ… ವೈಜ್ಞಾನಿಕವಾಗಿ ಹೇಳಬೇಕೆಂದರೆ ಇದೊಂದು ಸಂಕೀರ್ಣ ಅರಿವಿನ ಪ್ರಕ್ರಿಯೆ. ನಮ್ಮ ಸುತ್ತಮುತ್ತಲಿನ ವಿಷಯಗಳನ್ನು ನಮ್ಮ ಮೆದುಳು ಗ್ರಹಿಸಿ, ತನ್ನ ಕೋಶಗಳಲ್ಲಿ ಸಂಗ್ರಹಿಸಿ ನಂತರ ಮಾಹಿತಿಯ ರೂಪದಲ್ಲಿ ಮತ್ತೆ ಹೊರ ಹಾಕುವುದನ್ನು ಸ್ಮರಣೆ ಎಂದು ಹೇಳಬಹುದು.
ಇಲ್ಲಿ ಸಂವೇದನಾ ಅಂಗಗಳು ನೀಡಿದ ಸಂದೇಶವನ್ನು ಮೆದುಳಿನ ಕೋಶಗಳು ಸಂಗ್ರಹಿಸುತ್ತವೆ ಮತ್ತು ಹೀಗೆ ಸಂಗ್ರಹಿಸಲ್ಪಟ್ಟ ವಿಷಯಗಳು ನಮಗೆ ಬೇಕಾದ ಸಮಯಕ್ಕೆ ದೇಹದ ಇತರ ಅಂಗಗಳಿಗೆ ತಮ್ಮ ಕರ್ತವ್ಯ ನಿರ್ವಹಿಸಲು ಮಾಹಿತಿಯನ್ನು ಬಿಡುಗಡೆ ಮಾಡುತ್ತವೆ.
ಮಾನವನ ಸ್ಮರಣೆಯಲ್ಲಿ ಮೂರು ವಿಧಗಳಿದ್ದು ಅವುಗಳು
* ಸಂವೇದನಾ ಸ್ಮರಣೆ
*. ಅಲ್ಪಾವಧಿ ಸ್ಮರಣೆ ಮತ್ತು
* ದೀರ್ಘಾವಧಿ ಸ್ಮರಣೆ
ಸಂವೇದನಾ ಸ್ಮರಣೆಯು ನಮ್ಮ ದೇಹದ ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ಬಾಯಿ ಮತ್ತು ಚರ್ಮದಿಂದ ಮಾಹಿತಿಯನ್ನು ಸಂಗ್ರಹಿಸುತ್ತವೆ.ಕಣ್ಣುಗಳ ಮೂಲಕ ನೋಡುವುದು, ಕಿವಿಗಳ ಮೂಲಕ ಕೇಳುವುದು, ಬಾಯಿಯ ಮೂಲಕ ಮಾತನಾಡುವುದು ಮತ್ತು ರುಚಿ ಗುರುತಿಸುವುದು, ಮೂಗಿನ ಮೂಲಕ ವಾಸನೆಯನ್ನು ಗ್ರಹಿಸುವ ಶಕ್ತಿ ಮತ್ತು ಚರ್ಮದ ಮೂಲಕ ಸ್ಪರ್ಶವನ್ನು ಅರಿವ ಶಕ್ತಿ ಹೊಂದಿರುವ ಪಂಚೇಂದ್ರಿಯಗಳ ಮೂಲಕ ನಮ್ಮ ಮೆದುಳಿನಲ್ಲಿ ವಿಷಯಗಳ ಸಂಗ್ರಹವಾಗುತ್ತದೆ. ಎಷ್ಟೋ ಬಾರಿ ಕೆಲವು ಅಂಗಗಳು ಕಾರ್ಯನಿರ್ವಹಿಸದೇ ಇದ್ದಾಗ, ಇನ್ನುಳಿದ ಅಂಗಗಳು ಹೆಚ್ಚಿನ ಮಾಹಿತಿಗಳನ್ನು ಮೆದುಳಿಗೆ ರವಾನಿಸುತ್ತವೆ. ಆದ್ದರಿಂದಲೇ ಕಣ್ಣುಗಳಿಲ್ಲದ ವ್ಯಕ್ತಿ ವಾಸನೆಯಿಂದ ಹೆಚ್ಚಿನ ಮಾಹಿತಿಯನ್ನು ತನ್ನ ಮೆದುಳಿಗೆ ರವಾನಿಸಲು ಸಾಧ್ಯವಾಗುತ್ತದೆ, ಆತನ ಶ್ರವಣ ಶಕ್ತಿ, ಗ್ರಹಿಕೆಯ ಶಕ್ತಿ ಕೂಡ ತೀಕ್ಷ್ಣವಾಗಿರುತ್ತದೆ.
ಅಲ್ಪಾವಧಿ ಸ್ಮರಣೆ…. ಅಲ್ಪಾವಧಿ ಸ್ಮರಣೆಯನ್ನು ಪ್ರಾಥಮಿಕ ಸ್ಮರಣೆ ಎಂದು ಕೂಡ ಕರೆಯುತ್ತಾರೆ. ಹೆಸರೇ ಹೇಳುವಂತೆ ಅಲ್ಪಾವಧಿ ಸ್ಮರಣೆಯು ಅತ್ಯಂತ ಕಡಿಮೆ ಅವಧಿಯ ಸ್ಮರಣಶಕ್ತಿಯಾಗಿದ್ದು ಉದಾಹರಣೆಗೆ, ನೀವು ಯಾವುದಾದರು ಮೊಬೈಲ್ ಸಂಖ್ಯೆಯ 10 ಅಂಕಿಗಳನ್ನು ಒಂದೆರಡು ಬಾರಿ ಪದೇ ಪದೇ ಹೇಳಿದಾಗ ಮತ್ತು ಬರೆಯುವಾಗ ನಿಮಗದು ಸುಲಭ ಎನಿಸುತ್ತದೆ, ಆದರೆ ಕೆಲ ನಿಮಿಷಗಳ ಬಳಿಕ ಅದೇ ನಂಬರನ್ನು ಪುನರಾವರ್ತಿಸಲು ಹೋದರೆ ಅದು ನಿಮ್ಮ ನೆನಪಿನ ಕೋಶದಿಂದ ಹೊರಟು ಹೋಗಿರುತ್ತದೆ… ಇದು ಅಲ್ಪಾವಧಿ ಸ್ಮರಣೆಯ ಪ್ರಭಾವ.
ಇನ್ನೂ ಹೇಳಬೇಕೆಂದರೆ ಮನೆಯಲ್ಲಿರುವ ಹಿರಿಯರು ತಮ್ಮ ಕನ್ನಡಕ, ಪುಸ್ತಕ, ಪೆನ್ನು, ಕರ್ಚಿಫುಗಳಿಗಾಗಿ ತಡಕಾಡುತ್ತಿರುವುದನ್ನು ನಾವು ಕಾಣುತ್ತೇವೆ. ಅವರೇ ಇಟ್ಟಿರುವ ಆ ವಸ್ತುಗಳನ್ನು ಎಲ್ಲಿಟ್ಟಿದ್ದೇವೆ ಎಂಬುದನ್ನು ಮರೆತುಬಿಡುವ ಸ್ಮರಣ ಶಕ್ತಿಯು ಅಲ್ಪಾವಧಿ ಯದಾಗಿರುತ್ತದೆ. ಇನ್ನು ಪತ್ರಿಕೆಯನ್ನು ಓದುವಾಗ ಪದಗಳನ್ನು ಬಿಡಿ ಬಿಡಿಸಿ ಓದುವ ನಾವು ಅಂತಿಮವಾಗಿ ಆ ಎಲ್ಲಾ ಪದಗಳನ್ನು ವಾಕ್ಯಗಳನ್ನಾಗಿಸಿ ಒಟ್ಟು ವಿಷಯವನ್ನು ಗ್ರಹಿಸುತ್ತೇವೆ, ಕೆಲ ನಿಮಿಷಗಳ ನಂತರ ಆ ವಿಷಯ ನಮ್ಮ ಮಾಹಿತಿಯ ಕೋಶದಲ್ಲಿ ಭದ್ರವಾಗಿ ಉಳಿದರೆ ಆ ಪದಗಳು ನಮ್ಮ ಸ್ಮರಣೆಯಿಂದ ಹೊರಟು ಹೋಗಿರುತ್ತದೆ.
ದೀರ್ಘಾವಧಿಯ ಸ್ಮರಣೆ… ಈ ಸ್ಮರಣೆ ನಮ್ಮ ಜೀವನದುದ್ದಕ್ಕೂ ನಮ್ಮೊಂದಿಗೆ ಇರುತ್ತದೆ. ಇದನ್ನು ಸ್ಪಷ್ಟವಾದ ಸ್ಮರಣೆ ಎಂದು ಕೂಡ ಕರೆಯುತ್ತಾರೆ. ಈಗ ತಾನೇ ಎತ್ತಿಟ್ಟ ಕನ್ನಡಕ, ನ್ಯೂಸ್ ಪೇಪರ್ ಮೊಬೈಲ್ ಗಳನ್ನು ಮರೆಯುವ ಹಿರಿಯರು ತಾವು ಚಿಕ್ಕಂದಿನಲ್ಲಿ ಆಡಿದ ಆಟ, ಕಲಿತ ಪಾಠ ಅನುಭವಗಳನ್ನು ಈಗ ತಾನೆ ನಡೆದಿದೆ ಏನೋ ಎಂದು ಭಾಸವಾಗುವಂತೆ ಮೆಲುಕು ಹಾಕುತ್ತಾರೆ. ಇದು ದೀರ್ಘಾವಧಿಯ ಸ್ಮರಣ ಶಕ್ತಿಯ ಫಲ.
ನಮ್ಮ ಜೀವನದ ಪ್ರಮುಖ ಮೈಲಿಗಲ್ಲುಗಳು, ಬಾಲ್ಯದ ನೆನಪುಗಳು, ಸ್ನೇಹಿತರು, ಶಾಲಾ ಕಾಲೇಜಿನ ಪ್ರಸಂಗಗಳು ಹೀಗೆ ಹತ್ತು ಹಲವು ಮಾಹಿತಿಗಳನ್ನು ಇವು ಒಳಗೊಂಡಿದ್ದು ನಮ್ಮ ಜೀವನದುದ್ದಕ್ಕೂ ನಮ್ಮೊಂದಿಗೆ ಇರುತ್ತವೆ.
ಈ ದೀರ್ಘಾವಧಿ ಸ್ಮರಣೆಯಲ್ಲಿ ಮತ್ತೆ ಎರಡು ವಿಧಗಳು
* ಪ್ರಾಸಂಗಿಕ ಸ್ಮರಣೆ
* ಲಾಕ್ಷಣಿಕ ಸ್ಮರಣೆ
ಪ್ರಾಸಂಗಿಕ ಸ್ಮರಣೆಯು ಹಂತ ಹಂತಗಳಲ್ಲಿ ನೆನಪಿನ ಕೋಶಗಳಲ್ಲಿ ಉಳಿದುಹೋಗಿರುವ ವಿಷಯಗಳನ್ನು ಪುನರಪಿ ನೆನಪಿಸುತ್ತದೆ. ಮೊದಲ ಬಾರಿ ಶಾಲೆಗೆ ಹೋದ, ಶಿಕ್ಷಕರು ಮತ್ತು ಸ್ನೇಹಿತರೊಂದಿಗೆ ಒಡನಾಡಿದ, ಒದೆ ತಿಂದ, ಈಜು ಕಲಿತ ಹೀಗೆ ವಿವಿಧ ಪ್ರಸಂಗಗಳನ್ನು ಸರಪಣಿ ಕ್ರಿಯೆಯಲ್ಲಿ ನೆನಪಿನ ಕೋಶಗಳಲ್ಲಿ ಇರಿಸುವ ಈ ಸ್ಮರಣೆಯನ್ನು ಪ್ರಾರಂಭಿಕ ಸ್ಮರಣೆ ಎಂದು ಕರೆಯುತ್ತಾರೆ.
ಅಂತಯೇ ನಮ್ಮ ಜೀವನದ ಪ್ರಮುಖ ಘಟನೆಗಳು ಪ್ರಾಸಂಗಿಕ ಸ್ಮರಣೆಯಲ್ಲಿ ಬರುತ್ತವೆ.
. ಲಾಕ್ಷಣಿಕ ಸ್ಮರಣೆ… ಲಾಕ್ಷಣಿಕ ಸ್ಮರಣೆಯು ಒಂದು ಶಬ್ದ, ಓರ್ವ ವ್ಯಕ್ತಿ, ಒಂದು ವಿಷಯದ ಕುರಿತು ಮಾತನಾಡುವಾಗ ಬರುವ ಸ್ಮರಣೆಯಾಗಿದೆ. ಯಾವುದಾದರೂ ಸ್ನೇಹಿತರ ಜೊತೆ ಮಾತನಾಡುವಾಗ ವಿಶೇಷವಾದ ಪದವೊಂದನ್ನು ನೀವು ಬಳಕೆ ಮಾಡುತ್ತಿದ್ದರೆ… ಎಲ್ಲಿಯಾದರೂ ಬೇರೆಯವರು ಆ ಪದವನ್ನು ಬಳಕೆ ಮಾಡಿದ್ದು ಕೇಳಿದಾಗ ನಿಮಗೆ ನಿಮ್ಮ ಸ್ಮರಣೆಯ ಕೋಶದ ಆ ಘಟನೆಗಳು ನೆನಪಿಗೆ ಬರುತ್ತವೆ. ಉದಾಹರಣೆಗೆ ಸ್ನೇಹಿತರೆಲ್ಲ ಕುಳಿತುಕೊಂಡು ನಿಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುವಾಗ ಈ ಲಾಕ್ಷಣಿಕ ಸ್ಮರಣೆಯು ಕಾರ್ಯನಿರ್ವಹಿಸುತ್ತದೆ.
ಸ್ಮರಣೆಯಲ್ಲಿ ಫೋಟೋಗ್ರಾಫಿಕ್ ಮೆಮೊರಿ ಎಂಬ ಇನ್ನೊಂದು ವಿಧವನ್ನು ಗುರುತಿಸಿದ್ದು ಎಲ್ಲೋ ನೋಡಿದ, ಕೇಳಿದ, ಆಘ್ರಾಣಿಸಿದ, ಸವಿದ ಮತ್ತು ಸ್ಪರ್ಶಿಸಿದ ವಸ್ತು ಮತ್ತು ವಿಷಯಗಳು ನೆನಪಿನಲ್ಲಿ ಉಳಿದುಬಿಡುತ್ತವೆ. ಮತ್ತೆ ಹಲವಾರು ವರ್ಷಗಳ ನಂತರ ನೋಡಿದಾಗ್ಯು ಕೂಡ ಆ ಸ್ಮರಣೆ ಹಾಗೆಯೇ ಮನಸ್ಸಿಗೆ ಕಂಡು ಬರುತ್ತದೆ, ಇದನ್ನು ಫೋಟೋಗ್ರಫಿಕ್ ಮೆಮೊರಿ ಎಂದು ಹೇಳಬಹುದು.
ಇನ್ನೂ ಒಂದು ವಿಷಯ ನಮ್ಮ ಮನಸ್ಸು ಬಲೇ ವಿಸ್ಮಯದ ಗೂಡು. ತನಗೆ ಬೇಕಾದ ಎಲ್ಲಾ ಒಳ್ಳೆಯ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ನಮ್ಮ ಮೆದುಳಿನ ಕೋಶಗಳು ಕೆಲ ದುರ್ಘಟನೆಗಳನ್ನು, ನೋವುಗಳನ್ನು ಮನಸ್ಸಿನ ಮೂಲೆಯಿಂದ ಅಳಿಸಿ ಹಾಕಿಬಿಡುತ್ತವೆ.ಇದೂ ಒಂದು ರೀತಿಯ ಜಾಣ್ಮೆ ಅಲ್ಲವೇ!?
ಸ್ಮರಣೆ ಒಂದೇ ಸಾಲದೆ… ಅದರ ಹಿಂದೆ ಇರುವ ಇತಿಹಾಸ, ವೈಜ್ಞಾನಿಕ ಮಾಹಿತಿ ಕೂಡ ಬೇಕಲ್ಲವೇ?ಅಂತಯೇ ಸ್ಮರಣೆಯ ಕುರಿತು ಈ ಪುಟ್ಟ ಮಾಹಿತಿ ನಿಮಗಾಗಿ.