
ಸ್ವೀಪ್ ಸಮಿತಿಯಿಂದ ಗ್ರಾಮೀಣ ಭಾಗದಲ್ಲಿಯೂ ಮತದಾನ ಜಾಗೃತಿ
ಕರುನಾಡ ಬೆಳಗು ಸುದ್ದಿ
ವಿಜಯನಗರ, 20- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಗ್ರಾಮೀಣ ಪ್ರದೇಶದಲ್ಲಿ ಸಹ ಮತದಾನ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ.
ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಸದಾಶಿವ ಪ್ರಭು ಬಿ ಅವರ ನಿರ್ದೇಶನದಂತೆ ಹರಪನಹಳ್ಳಿ ಪಟ್ಟಣದಲ್ಲಿ ಏಪ್ರೀಲ್ 20ರಂದು ಮತದಾನ ಜಾಗೃತಿಯನ್ನು ಆಟೋಗಳ ಮೂಲಕ ನಡೆಸಲಾಯಿತು. ಮತದಾನ ಜಾಗೃತಿ ಸಂದೇಶ ಹೊತ್ತ ಆಟೋಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಾಲಾಗಿ ಸಂಚರಿಸಿದವು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಪುರಸಭೆ ಸಿಬ್ಬಂದಿ ಮತ್ತು ಆಟೋ ಚಾಲಕರು ಭಾಗವಹಿಸಿ ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಪ್ರಜಾಪ್ರಭುತ್ವದ ಹಬ್ಬದ ಪ್ರಯುಕ್ತ ಎಲ್ಲರೂ ತಮ್ಮ ತಮ್ಮ ಮತಗಟ್ಟೆ ಕೇಂದ್ರಗಳಿಗೆ 07-05-2024ರಂದು ತೆರಳಿ ಮತದಾನ ಮಾಡಬೇಕು ಎಂದು ಮತದಾರರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.
ಕೂಡ್ಲಿಗಿ ತಾಲೂಕು: ಕೂಡ್ಲಿಗಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸಹ ವಿಜಯನಗರ ಜಿಲ್ಲಾಡಳಿತ, ಕೂಡ್ಲಿಗಿ ತಾಲೂಕಾಡಳಿತ ಮತ್ತು ಕೂಡ್ಲಿಗಿ ಪಟ್ಟಣ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 20ರಂದು ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.
ಮತದಾನ ಜಾಗೃತಿ ಅಭಿಯಾನ ನಿಮ್ಮ ಮತ ನಿಮ್ಮ ಹಕ್ಕು ಬ್ಯಾನರ್ ಹಿಡಿದು ಸಾಗಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಯು ಮುಖ್ಯವಾಗಿ ಬೀದಿಬದಿ ವ್ಯಾಪಾರಸ್ಥರು ಸೇರಿದಂತೆ ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.