
ಡಿ.23 ಮತ್ತು 24 ರಂದು ಹನುಮಮಾಲಾ ವಿಸರ್ಜನೆ
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ ,೧೨- ಗಂಗಾವತಿ ತಾಲ್ಲೂಕಿನ ಚಿಕ್ಕರಾಂಪೂರ ಗ್ರಾಮದ ಅಂಜನಾದ್ರಿ ಬೆಟ್ಟದ ಮೇಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್ 23 ಮತ್ತು 24 ರಂದು ಜರುಗಲಿರುವ ಹನುಮಾಲಾ ಕಾರ್ಯಕ್ರಮಕ್ಕೆ ವಿವಿಧ ಸಮಿತಿಗಳನ್ನು ರಚಿಸುವ ಕುರಿತಂತೆ ಇತ್ತೀಚೆಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಸಮಿತಿ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದರು.
ಆಂಜನೇಯ ದೇವಸ್ಥಾನಕ್ಕೆ ಡಿ.23 ಮತ್ತು 24 ರಂದು ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತಾದಿಗಳು ಬಂದು ವಾಸ್ತವ್ಯ ಮಾಡಿ, ನಂತರದಲ್ಲಿ ಕಾಲ್ನಡಿಗೆ ಮೂಲಕ ದೇವರ ದರ್ಶನ ಪಡೆಯಲಿದ್ದಾರೆ. ಗಂಗಾವತಿ ನಗರದಿಂದ ಹನುಮಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ ಹಾಗೂ ಡಿ.24 ರಂದು ಮಾಲೆ ವಿಸರ್ಜನೆ ಮಾಡುವ ಕಾರ್ಯಕ್ರಮವಿರುತ್ತದೆ. ಈ ಸಂದರ್ಭದಲ್ಲಿ ಭಕ್ತಾದಿಗಳಿಗೆ ಮೂಲಭುತ ಸೌಕರ್ಯಗಳನ್ನು ವ್ಯವಸ್ಥಿತವಾಗಿ ಕಲ್ಪಿಸುವ ನಿರ್ವಹಣೆಯ ಮೇಲುಸ್ತುವಾರಿ ಮಾಡಲು ಕೊಪ್ಪಳ ಉಪ ವಿಭಾಗಾಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಅದರಂತೆ ಆಹಾರ ವ್ಯವಸ್ಥೆ, ಜನಸಂದಣಿ ನಿರ್ವಹಣೆ ಹಾಗೂ ಇನ್ನಿತರ ಕಾರ್ಯಗಳಿಗಾಗಿ ಸಮಿತಿಗಳ ರಚನೆ ಮಾಡಿದ್ದು, ಸಮಿತಿ ಅಧಿಕಾರಿ, ಸಿಬ್ಬಂದಿ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.
ಮೂಲಭೂತ ಸೌಕರ್ಯ ಸಮಿತಿಯಲ್ಲಿ ಚಿಕ್ಕರಾಂಪೂರದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ಹಾಗೂ ತೋಟಗಾರಿಕೆ ಉಪನಿರ್ದೇಶಕರು, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳು, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು, ಗಂಗಾವತಿ, ಕಾರಟಗಿ, ಕನಕಗಿರಿ ತಹಶೀಲ್ದಾರರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದ್ದು, ಈ ಸಮಿತಿಯು ಭಕ್ತಾದಿಗಳ ಊಟದ ವ್ಯವಸ್ಥೆಯ ಸಲುವಾಗಿ ಹಾಗೂ ಅಗತ್ಯವಿರುವ ಸ್ಥಳಗಳಲ್ಲಿ ಪೆಂಡಾಲ್, ದೇವಸ್ಥಾನದ ಪಾದಗಟ್ಟಿ ಹತ್ತಿರ ಎಲ್ಇಡಿ ಪರದೆ, ದೇವಸ್ಥಾನದ ಮೆಟ್ಟಿಲುಗಳ ಮೇಲೆ ಧ್ವನಿ ವರ್ಧಕಗಳ ವ್ಯವಸ್ಥೆನ್ನು ಮಾಡಬೇಕು. ದೇವಸ್ಥಾನದ ಹತ್ತಿರ, ವಾಹನ ನಿಲುಗಡೆ ಸ್ಥಳ, ಬಸ್ ನಿಲ್ದಾನ ಹಾಗೂ ಇನ್ನಿತರ ಅಗತ್ಯವಿರುವ ಸ್ಥಳಗಳಲ್ಲಿ ಸಾರ್ವಜನಿಕ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸುವುದು, ಪೆಂಡಾಲ್ ಹಾಕಿಸುವುದು ಹಾಗೂ ಸಾರ್ವಜನಿಕ ಪ್ರಕಟಣೆ ಸಲುವಾಗಿ ಧ್ವನಿವರ್ಧಕಗಳ ವ್ಯವಸ್ಥೆ, ತುಂಗಭದ್ರಾ ನದಿ ಪಾತ್ರದಲ್ಲಿ ಹನುಮ ಮಾಲಾಧಾರಿಗಳಿಗೆ ಸ್ನಾನಕ್ಕಾಗಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಹೇಳಿದರು.
ಆಹಾರ ಹಾಗೂ ನಾಗರಿಕರ ಸರಬರಾಜು ಇಲಾಖೆಯ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಆಹಾರ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯು ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ದೇವಸ್ಥಾನದ ಹಿಂಭಾಗದಲ್ಲಿರುವ ವೇದ ಪಾಠಶಾಲಾ ಹತ್ತಿರ ಆಹಾರ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ದೇವಸ್ಥಾನದ ಹತ್ತಿರ ವಾಹನ ನಿಲುಗಡೆ ಸ್ಥಳ ಹಾಗೂ ಅಗತ್ಯವಿರುವೆಡೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ದೇವರ ದರ್ಶನಕ್ಕೆ ಸರದಿಯಲ್ಲಿ ಹೋಗುವ ಭಕ್ತರಿಗೆ ಅವಶ್ಯಕತೆಗನುಗುಣವಾಗಿ ಅಗತ್ಯವಿರುವ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಭಕ್ತಾದಿಗಳಿಗೆ ಹಾಗೂ ಕರ್ತವ್ಯ ನಿರತ ಸಿಬ್ಬಂದಿ, ಸ್ವಯಂ ಸೇವಕರಿಗೆ ಅವಶ್ಯಕತೆಗನುಗುಣವಾಗಿ ಆಹಾರದ ಪ್ಯಾಕೆಟ್ಗಳನ್ನು ತಯಾರಿಸಿ ಸರಬರಾಜು ಮಾಡಬೇಕು ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರ ಅಧ್ಯಕ್ಷತೆಯಲ್ಲಿ ರಸ್ತೆ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯು ಹೊಸಪೇಟೆ, ಗಂಗಾವತಿ ಹಾಗೂ ಕೊಪ್ಪಳ ಕಡೆಯಿಂದ ಅಂಜನಾದ್ರಿ ದೇವಸ್ಥಾನಕ್ಕೆ ಬರುವ ರಸ್ತೆಗಳಲ್ಲಿ ಇರುವ ತೆಗು, ಗುಂಡಿಗಳನ್ನು ಮುಚ್ಚಲು ಕ್ರಮ ವಹಿಸಬೇಕು. ದೇವಸ್ಥಾನದ ಸುತ್ತಮುತ್ತಲೂ ಹಾಗೂ ವಾಹನ ನಿಲುಗಡೆ ಸ್ಥಳ ಮತ್ತು ಅಗತ್ಯವಿರುವ ಸ್ಥಳಗಳಲ್ಲಿ ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಆರೋಗ್ಯ ಸಮಿತಿಯು ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನನೆಚ್ಚರಿಕಾ ಕ್ರಮ ವಹಿಸುವ ನಿಟ್ಟಿನಲ್ಲಿ ಕ್ರಿಮಿನಾಶಕ ಸಿಂಪಡಣೆ, ಅಗತ್ಯ ಔಷಧಿಗಳ ವ್ಯವಸ್ಥೆಯೊಂದಿಗೆ ದೇವಾಲಯದ ಆವರಣದಲ್ಲಿ ಹಗೂ ಅಗತ್ಯವಿರುವ ಸ್ಥಳಗಳಲ್ಲಿ ತಾತ್ಕಾಲಿಕ ತುರ್ತು ಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸಬೇಕು. ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳಿಗೆ ಅಗತ್ಯ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು. ಅಗತ್ಯವಿರುವ ಎಲ್ಲ ತರಹದ ಔಷಧಿಗಳ ಸರಬರಾಜು ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ತುರ್ತು ಚಿಕಿತ್ಸೆಯ ಸಲುವಾಗಿ ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಬೇಕು. ದೇವಸ್ಥಾನದ ವತಿಯಿಂದ ಸಾರ್ವಜನಿಕರಿಗೆ ಹಾಗೂ ಭಕ್ತಾದಿಗಳಿಗೆ ತಯಾರಿಸಲಾಗಿರುವ ಆಹಾರದ ಗುಣಮಟ್ಟವನ್ನು ಪರಿಶೀಲಿಸಿ ಪ್ರಮಾಣೀಕರಿಸಬೇಕು ಎಂದು ತಿಳಿಸಿದರು.
ಸ್ಚಚ್ಛತಾ ಸಮಿತಿಯು, ಗಂಗಾವತಿ ನಗರದಿಂದ ಹನುಮಮಾಲಾಧಾರಿಗಳ ಶೋಭಾ ಯಾತ್ರೆ ಆರಂಭವಾಗುವ ಕಾರಣ ನಗರದ ಎಲ್ಲ ಕಡೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಹನುಮಮಾಲಾಧಾರಿಗಳು ತಂಗುವ ಸ್ಥಳದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು, ಸೊಳ್ಳೆ ನಿಯಂತ್ರಣಕ್ಕಾಗಿ ಫಾಗಿಂಗ್, ಕುಡಿಯುವ, ಸ್ನಾನ, ಶೌಚಾಲಯ ಹಾಗೂ ಇನ್ನಿತರ ಬಳಕೆಗಾಗಿ ನೀರಿನ ವ್ಯವಸ್ಥೆ ಮಾಡಬೇಕು. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಹನುಮಮಾಲಾಧಾರಿಗಳ ಕಾರ್ಯಕ್ರಮ ಪ್ರಾರಂಭವಾಗುವ ಪೂರ್ವದಲ್ಲಿ ಮತ್ತು ಕಾರ್ಯಕ್ರಮದ ನಂತರ ಗ್ರಾಮದ ವ್ಯಾಪ್ತಿಗೆ ಬರುವ ಮತ್ತು ದೇವಸ್ಥಾನದ ವ್ಯಾಪ್ತಿಗೆ ಬರುವ ಎಲ್ಲಾ ಚರಂಡಿಗಳನ್ನು ಗ್ರಾಮ ಪಂಚಾಯತಿ ಮತ್ತು ದೇವಸ್ಥಾನದ ವತಿಯಿಂದ ಸ್ವಚ್ಛಗೊಳಿಸಬೇಕು. ದೇವಸ್ಥಾನದ ಕೆಲಗೆ ಮೊಬೈಲ್ ಶೌಚಾಲಯಗಳನ್ನು ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸ್ನಾನಗೃಹ ಶೌಚಾಲಯ ವ್ಯವಸ್ಥ ಮಾಡಬೇಕು. ಹನುಮಮಾಲಾಧಾರಿಗಳು ತಂಗುವ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಶೌಚಾಲಯ ಹಾಗೂ ಸ್ನಾನ ಗೃಹಗಳು ಇರುವ ಕಡೆಗೆ ವಿದ್ಯಾರ್ಥಿ ನಿಲಯಗಳು, ಇತರೆ ಸರ್ಕಾರಿ, ಖಾಸಗಿ ಕಟ್ಟಡಗಳನ್ನು ಗುರುತಿಸಿ, ಯಾವುದೇ ತರಹದ ಅನಾನುಕೂಲವಾಗದಂತೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಪ್ರಸಾದ ವಿತರಣಾ ಸಮಿತಿಯು ದೇವಸ್ಥಾನದ ಮುಂಭಾಗ ಹಾಗೂ ವೇದ ಪಾಠಶಾಲೆ ಹತ್ತಿರ ಲಡ್ಡು ವಿತರಣೆ ಮಾಡುವುದನ್ನು ಮೇಲ್ವಿಚಾರಣೆ ಮಾಡಬೇಕು. ಲಡ್ಡು ಪಡೆಯುವ ಸಲುವಾಗಿ ಸಂಗ್ರಹವಾಗುವ ಹಣಕಾಸಿನ ವ್ಯವಹಾರದ ಬಗ್ಗೆ ಮೇಲ್ವಿಚಾರಣೆ ಮಾಡಬೇಕು. ಸಾರಿಗೆ ಸಮಿತಿಯು ಕೊಪ್ಪಳ, ಗಂಗಾವತಿ, ಹೊಸಪೇಟೆ ಹಾಗೂ ಇತರೆ ಅಗತ್ಯವಿರುವ ಸಾರಿಗೆ ಘಟಕಗಳಿಂದ ಅಂಜನಾದ್ರಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಸೌಕರ್ಯವನ್ನು ಕಲ್ಪಿಸಬೇಕು. ವಾಹನ ನಿಲುಗಡೆ ಸ್ಥಳದಿಂದ ಅಂಜನಾದ್ರಿ ಬೆಟ್ಟಕ್ಕೆ ಭಕ್ತಾದಿಗಳ ಸಂಚಾರಕ್ಕೆ ಮಿನಿ ಬಸ್ಗಳ ವ್ಯವಸ್ಥೆಯನ್ನು ಮಾಡಬೇಕು. ವಿದ್ಯುತ್ ಸಮಿತಿಯು ಹನುಮಮಾಲಾ ಸಮಯದಲ್ಲಿ ದೇವಸ್ಥಾನದ ಸುತ್ತಮುತ್ತಲೂ ಯಾವುದೇ ತರಹದ ವಿದ್ಯುತ್ ವ್ಯತ್ಯಯ ಉಂಟಾಗದAತೆ ಹಾಗೂ ಯಾವುದೇ ತರಹದ ವಿದ್ಯುತ್ ಅವಘಡಗಳು ಉಂಟಾಗದAತೆ ಕ್ರಮ ವಹಿಸಬೇಕು. 24/7 ಮಾದರಿಯಲ್ಲಿ ವಿದ್ಯುತ್ ಸೌಕರ್ಯದ ನಿರ್ವಹಣೆಗೆ ಅಗತ್ಯವಿರುವ ಎಲ್ಲ ಸಾಮಗ್ರಿಗಳುಳ್ಳ ಒಂದು ಮೊಬೈಲ್ ವಾಹನದ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಭದ್ರತಾ ಸಮಿತಿಯು ನಿಗದಿಪಡಿಸಿದ ದಿನದಂದು ನೂಕುನುಗ್ಗಲು, ಗಲಾಟೆ ಹಾಗೂ ಘರ್ಷಣೆ ಆಗದಂತೆ ಕ್ರಮ ವಹಿಸಬೇಕು. ಅಗತ್ಯವಿರುವ ಸ್ಥಳಗಳಲ್ಲಿ ಭದ್ರತೆ ಹಿತದೃಷ್ಟಿಯಿಂದ ಸಿ.ಸಿ. ಕ್ಯಾಮೆರಾ ಅಳವಡಿಸಬೇಕು. ಜನ ಸಂದಣಿ ನಿರ್ವಹಣೆಯ ಸಲುವಾಗಿ ಸಮರ್ಪಕವಾಗಿ ಪೊಲೀಸ್ ಹಾಗೂ ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಬೇಕು. ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ಹಾಗೂ ಹನುಮಮಾಲಾಧಾರಿಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಪ್ರಚಾರ ಮತ್ತು ಮಾಧ್ಯಮ ಸಮಿತಿಯು ಹನುಮಮಾಲಾ ಕಾರ್ಯಕ್ರಮದ ಬಗ್ಗೆ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಮಾಡಬೇಕು. ಹನುಮಮಾಲಾ ಸಂದರ್ಭದಲ್ಲಿ ಮಾಧ್ಯಮದವರಿಗೆ ಪ್ರಸಾರ ಮಾಡಲು ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆ ಮಾಡಬೇಕು. ಶಿಷ್ಠಾಚಾರ ಸಮಿತಿಯು ಕಾರ್ಯಕ್ರಮಕ್ಕೆ ಆಗಮಿಸುವ ಮಂತ್ರಿಗಳು, ವಿ.ಐ.ಪಿಗಳು ಹಾಗೂ ಜನ ಪ್ರತಿನಿಧಿಗಳಿಗೆ ಸೂಕ್ತ ಶಿಷ್ಠಾಚಾರ ವ್ಯವಸ್ಥೆಯನ್ನು ಮಾಡಬೇಕು ಎಂದು ತಿಳಿಸಿದರು.
ಅಬಕಾರಿ ಸಮಿತಿಯು ಡಿ.22 ರ ಸಂಜೆ 04 ಗಂಟೆಯಿAದ ಡಿ.24 ರ ಮಧ್ಯರಾತ್ರಿಯವರೆಗೆ ಆನೆಗುಂದಿ ಗ್ರಾಮ ವ್ಯಾಪ್ತಿಯಿಂದ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯಪಾನ ನಿಷೇಧಿಸಬೇಕು. ಮದ್ಯಪಾನ ನಿಷೇಧಿತ ಅವಧಿಯಲ್ಲಿ ಯಾವುದೇ ಅನಧಿಕೃತ ಮದ್ಯ ಮಾರಾಟವಾಗದಂತೆ ಕ್ರಮವಹಿಸಬೇಕು. ಅರಣ್ಯ ಸಮಿತಿಯು ಹನುಮಮಾಲಾ ಕಾರ್ಯಕ್ರಮದ ಸಂದರ್ಭದಲ್ಲಿ ಅಂಜನಾದ್ರಿ ಬೆಟ್ಟದಲ್ಲಿ ಭಕ್ತಾದಿಗಳ ಮೇಲೆ ಯಾವುದೇ ತರಹದ ಪ್ರಾಣಿ ದಾಳಿಯಾಗದಂತೆ ನಿಗಾವಹಿಸಲು ಸೂಕ್ತ ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು. ಸಹಾಯವಾಣಿ ಕೇಂದ್ರ ಸಮಿತಿಯು ಕೊಪ್ಪಳ ಜಿಲ್ಲಾ ಕೇಂದ್ರ ಸ್ಥಾನ ಹಾಗೂ ಗಂಗಾವತಿ ತಾಲ್ಲೂಕು ಕೇಂದ್ರ ಮತ್ತು ಅಂಜನಾದ್ರಿ ಬೆಟ್ಟದಲ್ಲಿ ನಿರ್ಮಿಸಲಾಗುವ ಸಹಾಯವಾಣಿ ಕೇಂದ್ರಗಳ ಮೇಲುಸ್ತುವಾರಿಯನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಮಿತಿ ಅಧ್ಯಕ್ಷರು ಸಮರ್ಪಕ ನಿರ್ವಹಣೆಗಾಗಿ ಅಗತ್ಯವೆನಿಸಿದಲ್ಲಿ ತಮ್ಮ ಅಧಿನ ಕಚೇರಿ ಸಿಬ್ಬಂದಿಯನು ಕರ್ತವ್ಯಕ್ಕಾಗಿ ನಿಯೋಜನೆ ಮಾಡಿಕೊಳ್ಳಬಹುದು. ಉಪವಿಭಾಗಾಧಿಕಾರಿಗಳು ರಚಿಸಿದ ಸಮಿತಿಗಳ ಹೊರತಾಗಿ ಅಗತ್ಯವಿದ್ದಲ್ಲಿ ಹೆಚ್ಚುವರಿಯಾಗಿ ಸಮಿತಿ ರಚನೆ ಮಾಡುವ ಹಾಗೂ ಸಮಿತಿಗಳಲ್ಲಿ ಮಾರ್ಪಾಡು ಮಾಡುವ ಅಧಿಕಾರ ಹೊಂದಿರುತ್ತಾರೆ. ಆದ್ದರಿಂದ ಎಲ್ಲ ಸಮಿತಿಗಳು ಉಪವಿಭಾಗಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ಕಾರ್ಯನಿರ್ವಹಿಸತಕ್ಕದ್ದು. ನಿಯೋಜಿತ ಅಧಿಕಾರಿಗಳು ಸಂಬಂಧಿಸಿದ ಮೇಲಧಿಕಾರಿಗಳು, ವಿವಿಧ ಸಮಿತಿಗಳೊಂದಿಗೆ ಸಮನ್ವಯ ಸಾಧಿಸಿ ಸಾರ್ವಜನಿಕರಿಗೆ, ಭಕ್ತಾಧಿಗಳಿಗೆ ಯಾವುದೇ ತರಹದ ಅನಾನುಕೂಲವಾಗದಂತೆ ಕರ್ತವ್ಯ ನಿರ್ವಹಿಸಬೇಕು. ನಿಯೋಜಿತ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ತರಹದ ಲೋಪವೆಸಗಿದಲ್ಲಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.ಸಭೆಯಲ್ಲಿ ನಿಯೋಜಿತ ಸಮಿತಿಗಳ ಅಧ್ಯಕ್ಷರು, ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.