
ಹರಿ ಮತ್ತು ಹರನಲ್ಲಿ ಭೇದವಿಲ್ಲ
ಕರುನಾಡ ಬೆಳಗು ಸುದ್ದಿ
ಭಾರತ ದೇಶ ಹಲವಾರು ಧರ್ಮಗಳ ಬೀಡು. ಇಲ್ಲಿ ಮುಖ್ಯವಾಗಿ ಪೂಜಿಸಲ್ಪಡುವ ದೇವರುಗಳಲ್ಲಿ ಹರಿ ಎಂದರೆ ವಿಷ್ಣು, ಹರ ಎಂದರೆ ಶಿವ ಮುಖ್ಯರು. ಕೆಲವೊಮ್ಮೆ ಆಯಾ ದೇವರನ್ನು ಪೂಜಿಸುವ ಭಕ್ತರ ಗುಂಪುಗಳು ತಾವು ಪೂಜಿಸುವ ದೇವರುಗಳೆ ಶ್ರೇಷ್ಠ ಎಂಬ ಭಾವದಿಂದ ಒಬ್ಬರು ಮತ್ತೊಬ್ಬರ ದೇವರನ್ನು, ಆಯಾ ದೇವರನ್ನು ಪೂಜಿಸುವ ಜನರನ್ನು ಪರಸ್ಪರ ಅಸಹನೆಯ ದೃಷ್ಟಿಯಿಂದ ನೋಡುತ್ತಾರೆ.
ಈ ಹಿಂದೆ ಶೈವ ಮತ್ತು ವೈಷ್ಣವ ಪಂಥಗಳ ನಡುವಿನ ವಾಗ್ವಾದಗಳಿಂದಾಗಿ ಹಲವಾರು ಕಲಹಗಳಾಗಿವೆ. ಈ ರೀತಿಯ ಕಲಹಗಳಿಂದ ಲಾಭ ಪಡೆದುಕೊಳ್ಳುವ ಜನರು ಕೂಡ ಇದ್ದು ಅವರು ಈ ಇಬ್ಬರ ನಡುವಿನ ವೈಷಮ್ಯದ ಬೆಂಕಿಗೆ ಸದಾ ತುಪ್ಪ ಸುರಿಯುವ ಕೆಲಸವನ್ನು ಮಾಡುತ್ತಾರೆ. ಈ ರೀತಿಯ ಅಂತಃ ಕಲಹಗಳಿಂದ ರಾಷ್ಟ್ರದ ಆತ್ಮ ದುರ್ಬಲವಾಗುತ್ತದೆ ಎಂಬುದು ಭಾರತ ದರ್ಶನ ಖ್ಯಾತಿಯ ರಾಷ್ಟ್ರೀಯ ಸ್ವಯಂಸೇವಕ ಸಂಸ್ಥೆಯ ಪೂರ್ಣಾವಧಿ ಕಾರ್ಯಕರ್ತರಾಗಿದ್ದ ಖ್ಯಾತ ವಾಗ್ಮಿಗಳಾಗಿದ್ದ ವಿದ್ಯಾನಂದ ಶಣೈ ಅವರ ಅಭಿಪ್ರಾಯ.
ಶಿವ ಮತ್ತು ವಿಷ್ಣುವಿನಲ್ಲಿ ಭೇದವಿಲ್ಲ. ರಾಮೇಶ್ವರದಲ್ಲಿ ಶಿವನ ಲಿಂಗವನ್ನು ರಾಮನು ಪೂಜಿಸಿದರೆ, ಅಮರನಾಥದಲ್ಲಿ ಸೋಮಶೇಖರನಾದ ಶಿವನು ರಾಮ ಮಂತ್ರವನ್ನು ತನ್ನ ಪತ್ನಿ ಪಾರ್ವತಿಗೆ ಬೋಧಿಸಿದ್ದಾನೆ. ಆಯಾ ಸಮಯ, ಸಂದರ್ಭಗಳಿಗೆ ಅನುಸಾರವಾಗಿ ಶಿವ ಮತ್ತು ವಿಷ್ಣು ಒಬ್ಬರನ್ನೊಬ್ಬರು ಪರಸ್ಪರ ಗೌರವಿಸಿ ಪೂಜಿಸಿದ್ದಾರೆ. ಆದರೆ ಅವರ ಭಕ್ತರು ಮಾತ್ರ ಪರಸ್ಪರ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಇದು ವೃಥಾ ಸಲ್ಲದು.
ಹರಿ ಮತ್ತು ಹರರಲ್ಲಿ ಭೇದವಿಲ್ಲ ಎಂಬುದಕ್ಕೆ ಓರ್ವ ಅಜ್ಞಾತಕವಿ ಬರೆದ ಶ್ಲೋಕವನ್ನು ಇಲ್ಲಿ ನೆನಪಿಸಿಕೊಳ್ಳೋಣ
ಪಾಯಾತ್ ಕುಮಾರ ಜನಕಃ ಶಶಿಖಂಡ ಮೌಳಿಹಿ
ಶಂಖಪ್ರಭಶ್ಚ ನಿಧನಶ್ಚ ಗವೀಶಯಾನಃ
ಗಂಗಾಂಚ ಪನ್ನಗಧರಶ್ಚ ಉಮಾ ವಿಲಾಸಹ
ಆದ್ಯಕ್ಷರೇಣು ಸಹಿತೋ ರಹಿತೋಪೀ ದೇವಹ
ಕುಮಾರ ಜನಕ…….ಸುಬ್ರಹ್ಮಣ್ಯನ ತಂದೆ ಶಿವ
ಶಶಿಖಂಡ ಮೌಳಿಹೀ …ಚಂದ್ರನ ತುಂಡನ್ನು ಧರಿಸಿದವನು ಚಂದ್ರಶೇಖರ ಅಂದರೆ ಶಿವ
ಶಂಖಪ್ರಭಶ್ಚ ….ಶಂಕದ ಮೈಬಣ್ಣ ಅಂದರೆ ಬಿಳಿಯ ಬಣ್ಣವನ್ನು ಹೊಂದಿರುವವನು ಅಂದರೆ ಶಿವ
ನಿಧನಶ್ಚ……ಧನವನ್ನು ಹೊಂದಿರದ, ಲಯಕರ್ತ, ಭಸ್ಮ ವಿಭೂಷಿತ ಸ್ಮಶಾನವಾಸಿಯಾದ ಶಿವ
ಗವೀಶಯಾನಹ…. ಗೋವನ್ನು/ನಂದಿಯನ್ನು, ವೃಷಭವನ್ನು ವಾಹನವನ್ನಾಗಿಸಿಕೊಂಡ ಶಿವ
ಗಂಗಾಂಚ…. ಗಂಗೆಯನ್ನು ತಲೆಯಲ್ಲಿ ಧರಿಸಿರುವ ಗಂಗಾಧರ ಶಿವ
ಪನ್ನಗಧರಶ್ಚ…. ಅಂದರೆ ಹಾವನ್ನು ಆಭರಣವಾಗಿ ಧರಿಸಿರುವ ವಾಸುಕಿ ಕಂಠಭೂಷಣ ಶಿವ
ಉಮಾ ವಿಲಾಸಹ…. ಉಮೆಗೆ ಆನಂದ ಕೊಡುವ ಸಂತಸವನ್ನು ತರುವ …ಶಿವ
ಶಿವನನ್ನು ಪೂಜಿಸುವವರು ಈ ಮೇಲಿನ ಸಂಪೂರ್ಣ ಶ್ಲೋಕವನ್ನು ಪಠಿಸುತ್ತಾ ಪೂಜಿಸಬಹುದು. ಆದರೆ
ಈ ಶ್ಲೋಕದಲ್ಲಿರುವ ಪ್ರತಿ ಪದದ ಮೊದಲ ಅಕ್ಷರಗಳನ್ನು ಬಿಟ್ಟು ಹೇಳಿದಾಗ ಇದೇ ಶ್ಲೋಕವು ವಿಷ್ಣುವನ್ನು ಪೂಜಿಸುವ ಶ್ಲೋಕವಾಗಿ ಬದಲಾಗುತ್ತದೆ.
ಕುಮಾರಜನಕದಲ್ಲಿ ಕು ಎಂಬ ಅಕ್ಷರವನ್ನು ತೆಗೆದಾಗ ಮಾರಜನಕ …ಅಂದರೆ ಮನ್ಮಥನ ತಂದೆ ವಿಷ್ಣು
ಶಿಖಂಡ ಮೌಳಿಹಿ… ತಲೆಯಲ್ಲಿ ನವಿಲುಗರಿಯನ್ನು ಇಟ್ಟುಕೊಂಡಿರುವಾತ ಕೃಷ್ಣ ಅಂದರೆ… ವಿಷ್ಣು
ಖಪ್ರಭಶ್ಚಹ್… ಖ ಎಂದರೆ ಆಕಾಶ.ಆಕಾಶದ ನೀಲಿ ಮೈಬಣ್ಣ ಹೊಂದಿರುವವನು ವಿಷ್ಣು
ಧನಶ್ಚ …..ಧನಪತಿ ಅಂದರೆ ವಿಷ್ಣು
ವೀಶ ಯಾನಹ…. ಪಕ್ಷಿಗಳ ರಾಜ ಗರುಡ ವಾಹನನಾದ ವಿಷ್ಣು
ಗಾಂಚ … ಗೋವುಗಳನ್ನು ಪಾಲಿಸುವ ಕೃಷ್ಣ ಅಂದರೆ ವಿಷ್ಣು
ನಗಧರಶ್ಚ…. ನಗ ಅಂದರೆ ಪರ್ವತ.ಪರ್ವತವನ್ನು ಎತ್ತಿ ಹಿಡಿದ ಗಿರಿಧರ ಗೋಪಾಲ … ವಿಷ್ಣು
ಮಾ ವಿಲಾಸಹ.. ಮಾ ಎಂದರೆ ಲಕ್ಷ್ಮಿ.ಲಕ್ಷ್ಮಿಗೆ ಆನಂದವನ್ನು ಕೊಡುವವನು ವಿಷ್ಣು.
ಹೀಗೆ ಶ್ಲೋಕದ ಪ್ರತಿ ಪದದ ಮೊದಲ ಅಕ್ಷರವನ್ನು ಬಿಟ್ಟು ಹೇಳಿದರೆ ವಿಷ್ಣುವನ್ನು ಭಜಿಸಿದಂತಾಗುತ್ತದೆ. ಒಟ್ಟಿನಲ್ಲಿ ಹರಿಹರರಲ್ಲಿ ಭೇದವಿಲ್ಲ ಎಂಬುದನ್ನು ಈ ಶ್ಲೋಕದ ಮೂಲಕ ಅಜ್ಞಾತಕವಿಯು ತಿಳಿ ಹೇಳುತ್ತಾನೆ.
ಇನ್ನಾದರೂ ಹರಿ ಮತ್ತು ಹರರಲ್ಲಿ ಭೇದವಿಲ್ಲ ಎಂಬುದನ್ನು ಒಪ್ಪೋಣವೇ??
ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ ಗದಗ್