ಆನೆಗೊಂದಿ ಉತ್ಸವ-2024 ಕವಿಗೋಷ್ಠಿ
ಕಾವ್ಯಕ್ಕೆ ಶತಮಾನಗಳ ಇತಿಹಾಸವಿದೆ : ಶರಣೇಗೌಡ ಪೊಲೀಸ್ ಪಾಟೀಲ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ,12- ನಮ್ಮ ದೇಶ ಹಾಗೂ ರಾಜ್ಯದಲ್ಲಿ ಕವಿಗಳು ಹಾಗೂ ಕಾವ್ಯಕ್ಕೆ ಶತಮಾನಗಳ ಇತಿಹಾಸವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾಧ್ಯಕ್ಷರಾದ ಶರಣೇಗೌಡ ಪೊಲೀಸ್ ಪಾಟೀಲ್ ಅವರು ಹೇಳಿದರು.
ಆನೆಗೊಂದಿ ಉತ್ಸವ-2024ರ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ಹಾಗೂ ಕೊಪ್ಪಳ ಜಿಲ್ಲಾಡಳಿತದ ಸಹಯೋಗದಲ್ಲಿ ಆನೆಗೊಂದಿಯ ಗಗನ್ ಮಹಲ್ ಹತ್ತಿರದ ಶಬರಿ ವೇದಿಕೆಯಲ್ಲಿ ಮಾರ್ಚ್ 12ರಂದು ಏರ್ಪಡಿಸಲಾದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆನೆಗೊಂದಿ ಉತ್ಸವದಂತಹ ಎಲ್ಲಾ ಕಾರ್ಯಕ್ರಮಗಳಲ್ಲಿ ಈ ನಾಡಿನ ಎಲ್ಲಾ ಕವಿಗಳು ಹಾಗೂ ಸಾಹಿತಿಗಳಿಗೆ ಅವಕಾಶ ಸಿಗಬೇಕು. ಉದಯೋನ್ಮುಖ ಕವಿಗಳಿಗೆ ಹಾಗೂ ಅವಕಾಶ ವಂಚಿತ ಕವಿಗಳಿಗೆ ಇಂತಹ ವೇದಿಕೆಗಳಲ್ಲಿ ಅವಕಾಶ ಸಿಗುವುದರಿಂದ ಹೊಸ-ಹೊಸ ಕವಿತೆಗಳು ಹೊರಬರಲು ಸಾಧ್ಯವಾಗುತ್ತದೆ ಎಂದರು.
ಕವಿಗಳು ತಮ್ಮ ಕವಿತೆಯ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು. ಕವನಗಳ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕವಿತೆಗಳು ಈ ನಾಡಿಗೆ ಬೆಳಕನ್ನು ನೀಡಲಿ ಎಂದು ಹೇಳಿದರು.
ಕಸಾಪ ಗಂಗಾವತಿ ತಾಲ್ಲೂಕು ಅಧ್ಯಕ್ಷರಾದ ಶ್ರೀನಿವಾಸ ಅಂಗಡಿ ಅವರು ಮಾತನಾಡಿ, ಈ ಕವಿಗೋಷ್ಠಿಯಲ್ಲಿ 81ಕ್ಕೂ ಹೆಚ್ಚು ಕವಿಗಳು ಹಾಗೂ ಸಾಹಿತಿಗಳು ಭಾಗವಹಿಸಿದ್ದು ಅತ್ಯಂತ ವಿಶೇಷವಾಗಿದೆ. ಇಷ್ಟು ಸಂಖ್ಯೆಯಲ್ಲಿ ಕವಿಗಳು ಹಾಗೂ ಸಾಹಿತಿಗಳು ಪಾಲ್ಗೊಂಡಿದ್ದು, ಜಿಲ್ಲೆಯ ಮೊದಲ ಕವಿಗೋಷ್ಠಿ ಇದಾಗಿದೆ. ಎಲ್ಲಾ ಕವಿಗಳು ವಾಚನ ಮಾಡುವ ಕವನಗಳು ಸೇರಿದಂತೆ ಪುಸ್ತಕ ಬಿಡುಗಡೆ ಮಾಡುವಂತೆ ಶಾಸಕರಾದ ಜಿ.ಜರ್ನಾಧನ ರೆಡ್ಡಿ ಅವರಿಗೆ ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.
ಕವಿಗೋಷ್ಠಿಯಲ್ಲಿ ಸಾಹಿತಿಗಳಾದ ಲಿಂಗಾರೆಡ್ಡಿ ಆಲೂರು ಅವರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಡಾ.ದೇವೇಂದ್ರಪ್ಪ ಜಾಜಿ ಅವರು ಆಶಯ ನುಡಿಗಳನ್ನಾಡಿದರು. ಮುಖ್ಯ ಅಥಿತಿಗಳಾಗಿ ಸಾಹಿತಿಗಳಾದ ರವೀಂದ್ರಸಾ ಬಾಕಳೆ, ಡಾ.ಲಿಂಗಣ್ಣ ಜಂಗಮರಹಳ್ಳಿ, ರಮೇಶ್ ಗಬ್ಬೂರ್, ಹನುಮೇಶ್ ಗುಮಗೇರಿ, ರಾಘವೇಂದ್ರ ದಂಡಿನ್, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಚನ್ನಬಸಪ್ಪ ಕಡ್ಡಿಪುಡಿ ಹಾಗೂ ಶೇಖರಗೌಡ ಪೊಲೀಸ್ ಪಾಟೀಲ್, ಕನಕಗಿರಿ ಕಸಾಪ ತಾಲ್ಲೂಕು ಅಧ್ಯಕ್ಷರಾದ ಮೆಹಬೂಬ್, ಕಾರಟಗಿ ಕಸಾಪ ತಾಲ್ಲೂಕು ಅಧ್ಯಕ್ಷರಾದ ಶರಣ್ಣಪ್ಪ ಕೋಟ್ಯಾಳ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಗಂಗಾವತಿ ಘಟಕದ ಕಾರ್ಯದರ್ಶಿಗಳಾದ ಎಂ.ಉಮೇಶ್ ಉಪಸ್ಥಿತರಿದ್ದರು.
ಗಮನ ಸೆಳೆದ ಮಕ್ಕಳು, ಕವನ ವಾಚನ : ಕವಿಗೋಷ್ಠಿಗಾಗಿ ಸುಮಾರು 90 ಕವಿಗಳು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 80 ಕ್ಕೂ ಹೆಚ್ಚು ಜನರು ಭಾಗವಹಿಸಿ, ತಮ್ಮ ಕವನಗಳನ್ನು ವಾಚನ ಮಾಡಿದರು.
ಕುಂಟೋಜಿ, ಸಿದ್ದಾಪುರ ಸೇರಿದಂತೆ ವಿವಿಧ ಶಾಲಾ ವಿದ್ಯಾರ್ಥಿಗಳು ಈ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಶಾಲೆ ಬಿಟ್ಟ ಮಕ್ಕಳು ಮರಳಿ ಶಾಲೆಗೆ ಬರುವುದು ಹಾಗೂ ತಾಯಿಯ ಮಮತೆ, ಸ್ನೇಹ ಮತ್ತು ತಮ್ಮ ಶಾಲೆಯ ಕುರಿತು ಕವನ ವಾಚನ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

