ಆನೆಗೊಂದಿ ಪರಂಪರೆ ಮತ್ತು ಅಭಿವೃದ್ಧಿ ವಿಚಾರ ಗೋಷ್ಠಿ
ಕಿಷ್ಕಿಂದೆ ಪ್ರಾಧಿಕಾರ ರಚಿಸಿ – ಕೊಟ್ನೆಕಲ್
ಕರುನಾಡ ಬೆಳಗು ಸುದ್ದಿ
ಆನೆಗೊಂದಿ , 12- ವಿಜಯನಗರ ಸಂಸ್ಥಾನದ ರಾಜ್ಯದಾನಿ ಆನೆಗೋದಿ ಸಂಪೂರ್ಣ ಅಭಿವೃದ್ಧಿಗೆ ಪ್ರತ್ಯೇಕ ‘ಕಿಷ್ಕಿಂದೆ ಪ್ರಾಧಿಕಾರ’ ರಚಿಸಬೇಕು ಎಂದು ಉಪನ್ಯಾಸಕ ಹಾಗೂ ಚಿಂತಕ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ ಆಗ್ರಹಿಸಿದರು.
ಅವರು ಕೊಪ್ಪಳ ಜಿಲ್ಲೆಯ ಆನೆಗೊಂದಿ ಉತ್ಸವದಲ್ಲಿ ಜರುಗಿದ ವಿಚಾರ ಗೋಷ್ಠಿಯಲ್ಲಿ ಕಿಷ್ಕಿಂದೆ- ಅಂಜನಾದ್ರಿ ಅಭಿವೃದ್ಧಿ ಮುನ್ನೋಟ ಕುರಿತು ಮಾತನಾಡುತ್ತಿದ್ದರು.
ಕಿಷ್ಕಿಂದೆ-ಅಂಜನಾದ್ರಿ ಅಭಿವೃದ್ಧಿಗಾಗಿ ಅಂಜನಾದ್ರಿಯನ್ನು ಹಂಪಿ ಪ್ರಾಧಿಕಾರದಿಂದ ಪ್ರತ್ಯೇಕಿಸಬೇಕು,ಆನೆಗುಂದಿಯಲ್ಲೇ ಪ್ರಾಧಿಕಾರದ ಕೇಂದ್ರ ಕಚೇರಿ ಸ್ಥಾಪಿಸಬೇಕು, ಕಿಷ್ಕಿಂದೆ ಪ್ರಾಧಿಕಾರದಲ್ಲಿ ಸದಸ್ಯರು, ನೌಕರರು ಸಿಬ್ಬಂದಿಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು.
ಶೌಚಾಲಯಗಳನ್ನು ಭಕ್ತರ ಸಂಖ್ಯೆಗನುಗುಣವಾಗಿ ಅಂಜನಾದ್ರಿ ಪರ್ವತದ ಕೆಳಗೆ, ಮಧ್ಯ ಮತ್ತು ತುದಿಯಲ್ಲಿ ನಿರ್ಮಿಸಬೇಕು, ಅಗತ್ಯಕ್ಕನುಗುಣವಾಗಿ ಸಂಚಾರಿ ಶೌಚಾಲಯಗಳ ಸ್ಥಾಪಿಸಬೇಕು, ಕುಡಿಯುವ ನೀರಿನ ವ್ಯವಸ್ಥೆ ಭಕ್ತರ ಸಂಖ್ಯೆಗನುಗುಣವಾಗಿ ಅಂಜನಾದ್ರಿ ಪರ್ವತದ ಕೆಳಗೆ, ಮಧ್ಯ ಮತ್ತು ತುದಿಯಲ್ಲಿ ಕಲ್ಪಿಸಬೇಕು.
ಬೆಟ್ಟದ ಮೇಲೆ ಭಕ್ತರ ಸುರಕ್ಷತೆಗಾಗಿ ಕಬ್ಬಿಣದ ತಡೆಗೋಡೆಗಳನ್ನು ನಿರ್ಮಿಸುವುದು,ಭಕ್ತರ ನಿರ್ವಹಣೆಗಾಗಿ ಸೆಕ್ಯೂರಿಟಿ ಗಾರ್ಡ್ಗಳನ್ನು ನೇಮಿಸಿಕೊಳ್ಳುವುದು, ಮಹಿಳೆಯರ, ಮಕ್ಕಳ ಮತ್ತು ವೃದ್ಧರ ಅನುಕೂಲಕ್ಕಾಗಿ ಪರ್ವತಕ್ಕೆ ರೂಫ್ವೇ ನಿರ್ಮಿಸಬೇಕು.
ಹಂಪಿಯಿAದ ಅಂಜನಾದ್ರಿಗೆ ಜನಸಂಚಾರಕ್ಕಾಗಿ ತೂಗುಸೇತುವೆ ನಿರ್ಮಿಸಬೇಕು,ಭಕ್ತರ ವಸತಿಗಾಗಿ ಪರ್ವತದ ಮುಂದೆ ಮತ್ತು ಅನತಿ ದೂರದಲ್ಲಿರುವ ಊರುಗಳಲ್ಲಿ ಕೆಲವು ವಸತಿ ಕೇಂದ್ರಗಳನ್ನು ಸ್ಥಾಪಿಸಬೇಕು, ಭಕ್ತರ ಹೆಚ್ಚಿನ ವಸತಿಗಳನ್ನು ವಿರುಪಾಪುರಗಡ್ಡೆಯಲ್ಲಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಭಕ್ತರ ದರ್ಶನ ಸುಗಮಕ್ಕಾಗಿ ವೆಬ್ಸೈಟ್ ರಚಿಸಿ ಆ ಮೂಲಕ ಆನ್-ಲೈನ್ ಬುಕ್ಕಿಂಗ್ ಮತ್ತು ಇತರೆ ಸೇವೆಗಳನ್ನು ಪ್ರಾರಂಭಿಸಬೇಕು,ವಾಹನಗಳಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು, ಪರಿಣಿತ ಗೈಡ್ಗಳನ್ನು ನೇಮಿಸಬೇಕು,ಇತಿಹಾಸ ಮತ್ತು ಸ್ಥಳಗಳ ಮಾಹಿತಿ ಒಳಗೊಂಡ ಪುಸ್ತಕಗಳನ್ನು ಪ್ರಕಟಿಸಬೇಕು,ಒಂದುನೂರಕ್ಕೂ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಬೇಕು, ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗಾಗಿ ವಸತಿ(ಕ್ವಾರ್ಟಸ್) ಕಲ್ಪಿಸಬೇಕು, ಅಂಜನಾದ್ರಿ ಪರಿಸರದಲ್ಲಿ ಮುಖ್ಯವಾಗಿ ಕಾಂಕ್ರೀಟ್ ರಸ್ತೆ, ಕಾಂಕ್ರೀಟ್ ಕಟ್ಟಡಗಳ ನಿರ್ಮಾಣ ಬೇಡವೇ ಬೇಡಾ, ಪರಿಸರಸ್ನೇಹಿ ಕಟ್ಟಡಗಳನ್ನು ನಿರ್ಮಿಸಬೇಕು,ಖಾಸಗಿ ಹೊಂಸ್ಟೇಗಳಿಗೆ ಅನುಮತಿ ನೀಡಬೇಕು ಉತ್ತಮ ದ್ವಿಪಥ ರಸ್ತೆ ನಿರ್ಮಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
