ಬಿತ್ತಿದಂತೆ ಬೆಳೆ : ವೀಣಾ ಪಾಟೀಲ್
ಕರುನಾಡ ಬೆಳಗು ಸುದ್ದಿ
ಅದು 20ನೇ ಶತಮಾನದ ಆದಿ ಭಾಗ. ಹೊಲದ ಕೆಲಸ ಪೂರೈಸಿ ಸಾಯಂಕಾಲ ತನ್ನ ಮನೆಗೆ ಹೋಗುತ್ತಿದ್ದ ಸ್ಕಾಟ್ಲ್ಯಾಂಡ್ ನ ರೈತನೋರ್ವನಿಗೆ ಯಾರದ್ದೋ ಆರ್ತನಾದ ಕೇಳಿಸಿತು. ಕೂಡಲೇ ಧ್ವನಿ ಬಂದತ್ತ ಧಾವಿಸಿದ ರೈತನಿಗೆ ಕಾಣಿಸಿದ್ದು ಕೆಸರಿನಲ್ಲಿ ಕೂತು ಹೋಗುತ್ತಿದ್ದ ಬಾಲಕ. ಹಿಂದಿನ ದಿನ ಜೋರು ಮಳೆಯಾಗಿದ್ದರಿಂದ ನೆಲ ಕೆಸರಿನಿಂದ ತುಂಬಿ ಹೋಗಿತ್ತು. ಮೊದಲೇ ಜವಳು ಭೂಮಿ…. ಮಳೆಯಾದ ಮೇಲೆ ಕೇಳಬೇಕೆ?? ಬಾಲಕ ಸಹಾಯಕ್ಕಾಗಿ ಕೂಗುತ್ತಿದ್ದ.
ಕೂಡಲೇ ಎಚ್ಚೆತ್ತ ರೈತ ಅಲ್ಲಿಯೇ ಇದ್ದ ಮರದ ಕೊಲ್ಲಿಯೊಂದನ್ನು ಎಳೆದು ತಂದು ಆ ಹುಡುಗ ನ ಕೈಗೆ ಸಿಗುವಂತೆ ಚಾಚಿದನು. ರೈತ ಚಾಚಿದ ಮರದ ಕೊಲ್ಲಿಯನ್ನು ಆ ಹುಡುಗ ಹಿಡಿದುಕೊಂಡ ನಂತರ ರೈತ ತನ್ನೆಲ್ಲ ಶಕ್ತಿಯನ್ನು ಹಾಕಿ ಆತನನ್ನು ಮೇಲಕ್ಕೆ ಎಳೆದುಕೊಂಡನು. ಕೆಸರಿನ ಹೊಂಡದಿಂದ ರಕ್ಷಿಸಲ್ಪಟ್ಟ ಹುಡುಗ ರೈತನಿಗೆ ಧನ್ಯವಾದಗಳನ್ನು ತಿಳಿಸಿದ.
ರೈತ ನಿನ್ನ ಬಟ್ಟೆಗಳೆಲ್ಲವೂ ಕೊಳೆಯಾಗಿವೆ ಹತ್ತಿರದಲ್ಲಿಯೇ ನನ್ನ ಮನೆ ಇದೆ… ನೀನು ಬಂದು ನನ್ನ ಮನೆಯಲ್ಲಿ ಸ್ನಾನ ಮಾಡಿ ನಿನ್ನ ಬಟ್ಟೆಗಳ ಕೊಳೆಯನ್ನು ತೊಳೆದುಕೊಳ್ಳಬಹುದು ಎಂದು ಆಹ್ವಾನಿಸಿದ. ಅದಕ್ಕೆ ಉತ್ತರವಾಗಿ ಆ ಬಾಲಕ “ಬೇಡ, ಈಗಾಗಲೇ ತುಂಬಾ ಹೊತ್ತಾಗಿದೆ, ನನ್ನ ತಂದೆ ಗಾಬರಿಯಾಗಿ ಕಾಯುತ್ತಿರಬಹುದು ನಾನಿನ್ನು ಬರುತ್ತೇನೆ, ಧನ್ಯವಾದಗಳು” ಎಂದು ನಮಸ್ಕರಿಸಿ ಅಲ್ಲಿಂದ ಹೊರಟು ಹೋದನು.
ಮರುದಿನ ಮುಂಜಾನೆ ರೈತನ ಮನೆಯ ಮುಂದೆ ಒಂದು ದೊಡ್ಡ ಕುದುರೆ ಗಾಡಿಯ ಸಾರೋಟು ಬಂದು ನಿಂತಿತು. ಸಾರೋಟಿನಿಂದ ಕೆಳಗಿಳಿದ ಘನಿಷ್ಠ ವ್ಯಕ್ತಿಯೊಬ್ಬ ರೈತನ ಮನೆಯೊಳಗೆ ಬಂದು ರೈತನನ್ನು ಕಂಡು ನಮಸ್ಕರಿಸಿ ” ನಿನ್ನೆ ಕೆಸರಿನ ಹೊಂಡದಿಂದ ನೀವು ರಕ್ಷಿಸಿದ ಬಾಲಕನ ತಂದೆ ನಾನು.
ನಿಮ್ಮ ಉಪಕಾರಕ್ಕೆ ನಾನು ಸದಾ ಆಭಾರಿಯಾಗಿರುವೆ. ಹೇಳಿ ನನ್ನ ಮಗನನ್ನು ರಕ್ಷಿಸಿದ್ದಕ್ಕೆ ನಿಮಗೆ ನಾನೇನು ಕೊಡಲಿ” ಎಂದು ಆ ಧನಿಕ ವ್ಯಕ್ತಿ ಕೇಳಿದ. ಕೂಡಲೇ ರೈತ “ಮಾನವೀಯ ಪ್ರಜ್ಞೆಯಿಂದ ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ, ಇದರಲ್ಲಿ ಯಾವುದೇ ಹೆಚ್ಚುಗಾರಿಕೆ ಇಲ್ಲ. ಹೀಗೆ ಹಣವನ್ನು ನೀಡುವ ಮಾತನಾಡಿ ನನ್ನನ್ನು ಅವಮಾನಿಸಬೇಡಿ” ಎಂದು ಹೇಳಿದನು.
ಆದರೂ ಶ್ರೀಮಂತ ವ್ಯಕ್ತಿ ರೈತನಿಗೆ ಮತ್ತಷ್ಟು ಒತ್ತಾಯ ಮಾಡಲು ರೈತನು ಸ್ಪಷ್ಟವಾಗಿ ನಿರಾಕರಿಸಿ ಹೊರಟುಹೋಗುತ್ತಿರುವಾಗ ಅಲ್ಲಿಯೇ ಆಡುತ್ತಿದ್ದ ಚೂಟಿಯಾದ ಬಾಲಕನನ್ನು ನೋಡಿ ಆ ಶ್ರೀಮಂತ ವ್ಯಕ್ತಿಯು “ಇವನು ನಿಮ್ಮ ಮಗನೇ” ಎಂದು ರೈತನನ್ನು ಕೇಳಿದನು. ತನ್ನ ಮಗನ ಹಣೆಯನ್ನು ನೇವರಿಸುತ್ತಾ ಹೌದು ಎಂದು ತುಸು ಹೆಮ್ಮೆಯಿಂದಲೇ ರೈತ ಉತ್ತರಿಸಿದ.
ಆ ಕೂಡಲೇ ಶ್ರೀಮಂತ ಮನುಷ್ಯನು ನಿಮ್ಮ ಮಗನು ತನ್ನ ತಂದೆಯಷ್ಟೇ ಉನ್ನತ ವ್ಯಕ್ತಿತ್ವದವನಾಗುವನು ಎಂಬುದು ನನ್ನ ಅನಿಸಿಕೆ. ನಿಮ್ಮ ಮಗನ ಶೈಕ್ಷಣಿಕ ಜವಾಬ್ದಾರಿ ನನ್ನದು…. ಹೀಗೆ ಮಾಡುವ ಮೂಲಕ ನಿಮ್ಮ ಋಣ ತೀರಿಸಿದ ತೃಪ್ತಿ ನನ್ನದಾಗಲಿ ಎಂದು ಹೇಳಿದಾಗ ಗತ್ಯಂತರವಿಲ್ಲದೆ ರೈತ ಒಪ್ಪಿಕೊಂಡ.
ಮುಂದೆ ಆ ಶ್ರೀಮಂತ ವ್ಯಕ್ತಿ ರೈತನ ಮಗನನ್ನು ತನ್ನೊಂದಿಗೆ ಕರೆದೊಯ್ದು ಆತನಿಗೆ ಉನ್ನತ ಶಿಕ್ಷಣ ಕೊಡಿಸಿದ. ತೀಕ್ಷ್ಣಮತಿಯಾಗಿದ್ದ ರೈತನ ಮಗ ಎಲ್ಲ ತರಗತಿಗಳಲ್ಲಿ ಉನ್ನತ ಅಂಕಗಳನ್ನು ಪಡೆದು ಮುಂದೆ ವೈದ್ಯಕೀಯ ಪದವಿ ಪಡೆದನು.
ಕೆಲ ವರ್ಷಗಳ ತರುವಾಯ ರೋಗ ಪ್ರತಿ ರೋಧಕ ಶಕ್ತಿಯನ್ನು ನೀಡುವ ಪೆನ್ಸಿಲಿನ್ ಚುಚ್ಚುಮದ್ದನ್ನು ಕಂಡುಹಿಡಿದನು. ಆತನೇ ಜಗತ್ಪ್ರಸಿದ್ಧ ವೈದ್ಯ ವಿಜ್ಞಾನಿ ಅಲೆಕ್ಸಾಂಡರ್ ಫ್ಲೆಮಿಂಗ್.
ವಿಶ್ವದ ಎರಡನೇ ಯುದ್ಧಕ್ಕೂ ಮುನ್ನ ನಿಮೋನಿಯಾ ಗೆ ಗುರಿಯಾಗಿ ಸಾವಿನ ದವಡೆಯಲ್ಲಿದ್ದ ಶ್ರೀಮಂತನ ಮಗನನ್ನು ಉಳಿಸಿದ್ದು ಅಲೆಕ್ಸಾಂಡರ್ ಫ್ಲೆಮಿಂಗ್ ಕಂಡುಹಿಡಿದ ಚುಚ್ಚುಮದ್ದು ಪೆನ್ಸಿಲಿನ್.
ಅಲೆಕ್ಸಾಂಡರ್ ಫ್ಲೆಮಿಂಗನ ನ್ನು ಹಾಗೆ ಕರೆದೊಯ್ದು ವೈದ್ಯ ವಿಜ್ಞಾನಕ್ಕೆ ಕೊಡುಗೆಯಾಗಿ ಕೊಟ್ಟ ಶ್ರೀಮಂತ ವ್ಯಕ್ತಿಯ ಹೆಸರು ರಾಂಡಾಲ್ಫ್ ಚರ್ಚಿಲ್ ಮತ್ತು ಆತನ ಆವಿಷ್ಕಾರದಿಂದ ಪುನರ್ಜೀವನ ಪಡೆದ ಶ್ರೀಮಂತನ ಮಗ ಮುಂದೆ ಇಂಗ್ಲೆಂಡ್ ನ ಪ್ರಧಾನಿಯಾಗಿ ಆಯ್ಕೆಯಾದ ವಿನ್ಸ್ಟನ್ ಚರ್ಚಿಲ್.
ಈ ಘಟನೆಯನ್ನು ಕುರಿತು ನೆನಪು ಮಾಡಿಕೊಂಡ ವಿನ್ಸ್ಟನ ಚರ್ಚಿಲ್ ರವರು ಹೇಳಿದ್ದು ನೀನು ಮಾಡಿದ ಒಳ್ಳೆಯ ಕರ್ಮದ ಫಲ ಖಂಡಿತವಾಗಿಯೂ ನಿನಗೆ ದೊರೆಯುತ್ತದೆ ಎಂದು…. ಅದೆಷ್ಟೋ ನಿಜ ಅಲ್ಲವೇ ಈ ಮಾತುಗಳು!
ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ ಗದಗ್
