ಮೌನ ಗೀತೆ : ವೀಣಾ ಹೇಮಂತ್ ಗೌಡ ಪಾಟೀಲ್
ಕರುನಾಡ ಬೆಳಗು ಸುದ್ದಿ
ಸವಿತಾ ಕಣ್ತೆರೆದಾಗ ಬೆಳಗಿನ ಜಾವ ದ ಆರು ಮುವತ್ತಾಗಿತ್ತು. ಅರೆ ಇಷ್ಟು ಹೊತ್ತಿಗಾಗಲೇ ನಮ್ಮವರು ಎದ್ದು ನನ್ನನ್ನು ಕೂಡ ಎಬ್ಬಿಸಿ ಕಾಫಿ ಮಾಡಿಸಿಕೊಂಡು ಕುಡಿದು ವಾಕಿಂಗ್ ಹೋಗುತ್ತಿದ್ದರಲ್ಲ! ಹಾಗಾದರೆ ಮಲಗಿರುವರೇ?? ತನ್ನ ಪಕ್ಕದ ಹಾಸಿಗೆಯಲ್ಲಿ ಕಣ್ಣಾಡಿಸಿದಳು. ಉಹೂಂ ಅಲ್ಲಿಯೂ ಗಂಡನ ಸುಳಿವಿಲ್ಲ! ಹಾಸಿಗೆಯನ್ನು ಮಡಚಿಟ್ಟವಳೆ ಬಚ್ಚಲಿಗೆ ಹೋಗಿ ನೋಡಿದಳು. ಅಲ್ಲಿಯೂ ಗಂಡ ಇರಲಿಲ್ಲ. ನಿತ್ಯ ಕರ್ಮಗಳನ್ನು ಪೂರೈಸಿ ಅಡುಗೆ ಮನೆಗೆ ಬಂದು ನೋಡಿದಾಗ ಅಲ್ಲಿ ಕಾಫಿ ಮಾಡಿಕೊಂಡ ಪಾತ್ರೆ ಕುಡಿದ ಕಪ್ ಎಲ್ಲವೂ ಇದ್ದವು. ಅರೆ ನನ್ನನ್ನು ಎಬ್ಬಿಸದೆ ಕಾಫಿ ಮಾಡಿಕೊಂಡು ಕುಡಿದು ಹೋಗಿದ್ದಾರಲ್ಲ ಎಂದು ಆಶ್ಚರ್ಯವಾದರೂ ಬೇಗ ಅವರು ಬರುವ ಹೊತ್ತಿಗೆ ತಿಂಡಿ ಮಾಡಿದರಾಯಿತು ಎಂದು ಚಕಚಕನೇ ತರಕಾರಿ ಹೆಚ್ಚಿ ಗಂಡನಿಗೆ ಪ್ರಿಯವಾದ ತರಕಾರಿ ಉಪ್ಪಿಟ್ಟನ್ನು ಮಾಡಿದಳು.
ಮುಂದೆ ಕೆಲವು ಹೊತ್ತಿನಲ್ಲಿ ಮನೆಗೆ ಬಂದ ಪತಿ ಸೀದಾ ಬಚ್ಚಲು ಮನೆಗೆ ಹೋಗಿ ಸ್ನಾನ ಮಾಡಿ ದೇವರಿಗೆ ಕೈಮುಗಿದು ಆಫೀಸಿಗೆ ಹೋಗುವ ಬಟ್ಟೆಯನ್ನು ಧರಿಸಿ ಬಂದು ಊಟದ ಮೇಜಿಗೆ ಕುಳಿತನು. ಆಗಲೂ ಕೂಡ ಒಂದು ಮಾತಿಲ್ಲ ಕಥೆಯಿಲ್ಲ. ಗಂಡನಾಗಿ ಹೊಸ ಚರ್ಯೆಯನ್ನು ನೋಡುತ್ತಿದ್ದ ಸವಿತಾಳೆಗೆ ಆಶ್ಚರ್ಯದ ಜೊತೆ ಜೊತೆಗೆ ಕೊಂಚ ದಿಗಿಲು ಆಯಿತು. ಬಿಸಿಬಿಸಿಯಾದ ಉಪ್ಪಿಟ್ಟನ್ನು ತಟ್ಟೆಗೆ ಬಡಿಸಿ ಅದರ ಮೇಲೊಂದಷ್ಟು ತುಪ್ಪ ಹಾಕಿ ಮಿಕ್ಸರ್ ಖಾರ ಚಟ್ನಿಪುಡಿ ಹಾಕಿ ಆತನ ಮುಂದೆ ತಂದಿಟ್ಟಳು, ಜೊತೆಗೆ ಮೊಸರು ಮತ್ತು ನೀರನ್ನು ಕೂಡ ತಂದಿಟ್ಟು ಹಬೆಯಾಡುವ ಉಪ್ಪಿಟ್ಟನ್ನು ನೋಡಿ ಗಂಡನ ಮುಖ ಅರಳುವುದನ್ನು ಕಾಯುತ್ತಾ ಊಟದ ಮೇಜಿನ ಮತ್ತೊಂದು ಕುರ್ಚಿಯ ಮೇಲೆ ಕುಳಿತಳು. ಉಹುಂ ಏನನ್ನೋ ಗಹನವಾಗಿ ಯೋಚಿಸುತ್ತಾ
ತಟ್ಟೆಯಿಂದ ಮುಖ ಮೇಲೆತ್ತದೆ ಸತೀಶ ಆಕೆಯತ್ತ ತಿರುಗಿಯೂ ನೋಡಲಿಲ್ಲ. ತಟ್ಟೆ ಖಾಲಿಯಾದದ್ದನ್ನು ನೋಡಿದ ಕೂಡಲೇ ಎಚ್ಚೆತ್ತು ಸವಿತಾ ಕಾಫಿ ಬೆರೆಸಿಕೊಂಡು ಬಂದಳು. ಪ್ರತಿದಿನದಂತೆ ನಿನ್ನ ಕೈಯ ಕಾಫಿ ಅಮೃತದಂತೆ ಇರುತ್ತದೆ ಎಂಬ ಮಾತನ್ನು ಕೇಳಲು ಆಕೆಯ ಕಿವಿಗಳು ಕಾತರವಾಗಿದ್ದವು. ಮತ್ತೆ ಅದೇ ನಿರಾಶೆ. ಯಾಕ್ರೀ? ಏನು ಮಾತಾಡುತ್ತಿಲ್ಲ? ಎಂದು ಬೇಸರ ತಾಳಲಾರದೆ ಕೇಳಿದಾಗ ಏನೊಂದೂ ಹೇಳದೆ ಲಗುಬಗೆಯಿಂದ ತನ್ನ ಸಾಮಾನುಗಳನ್ನು ಜೋಡಿಸಿಕೊಂಡು ಸ್ಕೂಟರ್ ಏರಿ ಆಫೀಸಿಗೆ ಹೊರಟೆ ಹೋದನು.
ಇತ್ತ ಸವಿತಾಳಿಗೆ ಮನೆಯ ಎಲ್ಲಾ ಕೆಲಸಗಳನ್ನು ಪೂರೈಸುತ್ತಿರುವಾಗಲೂ ಗಂಡನ ಹೊಸ ಪರಿ ಸೋಜಿಗದ ಜೊತೆ ಜೊತೆಗೆ ಚಿಂತೆಗೀಡು ಮಾಡಿತ್ತು. ಮದುವೆಯಾದ ಕಳೆದ ಎರಡು ವರ್ಷಗಳಲ್ಲಿ ಎಂದು ಈ ರೀತಿ ಆಗಿರಲಿಲ್ಲ. ಸದಾ ಸವೀ ಎಂದು ಕರೆಯುತ್ತಾ ತನ್ನ ಹಿಂದೆ ಮುಂದೆ ಸುತ್ತಾಡುತ್ತಾ ಪ್ರೀತಿಯಿಂದ ಮಾತನಾಡುತ್ತಿದ್ದ ಗಂಡನ ಈ ವರಸೆ ಆಕೆಗೆ ಹೊಸದು. ಗಂಡ ಹೀಗೆ ಮಾತನಾಡದೆ ಇರುವಂತಹ ತಪ್ಪು ಮಾಡಿದ್ದೇನೆ ಎಂಬ ಭಯ ಆಕೆಯನ್ನು ಕಾಡಿತು. ಆಫೀಸಿನಲ್ಲಿ ಏನಾದರೂ ತೊಂದರೆಯೇ?? ಸಾಲ ಸೋಲ ಮಾಡಿಕೊಂಡಿದ್ದಾರೆಯೇ, ಯಾರಾದರೂ ಉಪಟಳ ಕೊಡುತ್ತಿದ್ದಾರೆಯೇ ಎಂದು ಚಿಂತಿಸಲಾರಂಭಿಸಿದಳು. ಅದೇ ಚಿಂತೆಯಲ್ಲಿ ಆಕೆಗೆ ತಿಂಡಿ ಊಟಗಳಾವುವು ಸೇರಲಿಲ್ಲ.
ಸಂಜೆ ಮನೆಯ ಎಲ್ಲ ಕೆಲಸಗಳನ್ನು ಪೂರೈಸಿ ತಲೆ ಬಾಚಿ ಜಡೆ ಹೆಣೆದು ಮುಖ ತೊಳೆದು ದೇವರಿಗೆ ದೀಪ ಮುಡಿಸಿ ಕೈ ಮುಗಿದು ನಮಸ್ಕರಿಸಿ ಲಘು ಉಪಹಾರಕ್ಕೆ ಸಜ್ಜು ಮಾಡಿ ಕಾಫಿಗೆ ಡಿಕಾಕ್ಷನ್ ಹಾಕಿ ಗಂಡನ ಬರವಿಗಾಗಿ ಕಾಯುತ್ತಾ ಹೊರಗೆ ಬಂದು ನಿಂತಳು.
ಮುಂದಿನ ಕೆಲ ನಿಮಿಷಗಳಲ್ಲಿಯೇ ಮನೆಗೆ ಬಂದ ಸತೀಶ ತನ್ನ ಕೋಣೆಗೆ ತೆರಳಿ ತೊಟ್ಟಿದ್ದ ಉಡುಪನ್ನು ಬದಲಿಸಿ ಮನೆಯುಡುಗೆಯನ್ನು ಧರಿಸಿ ಸೀದಾ ಬಚ್ಚಲಿಗೆ ಹೋದವನೇ ಕೈ ಕಾಲು ಮುಖ ತೊಳೆದು ತಲೆ ಬಾಚಿಕೊಂಡು ಊಟದ ಮೇಜಿಗೆ ಬಂದು ಕುಳಿತನು. ಈಗಲೂ ಅಷ್ಟೇ ಹೆಂಡತಿ ಬಡಿಸಿದ ಬಿಸಿ ಬಿಸಿ ಅವಲಕ್ಕಿ ಒಗ್ಗರಣೆಯನ್ನು ಸೇವಿಸಿ ಕಾಫಿ ಕುಡಿದನು, ಆದರೆ ಒಂದು ಮಾತೂ ಆಡಲಿಲ್ಲ. ಮತ್ತೆ ಮಾತನಾಡದ ಗಂಡನನ್ನು ಕಂಡು ನೋವಿನಿಂದ ನಲುಗಿದ ಸವಿತಾ ಕೂಡ ಮೌನದ ಮೊರೆ ಹೋದಳು. ಸತೀಶನೂ ಕೂಡ ತನ್ನ ಕೋಣೆಗೆ ತೆರಳಿ ಪುಸ್ತಕವನ್ನು ಕೈಯಲ್ಲಿ ಹಿಡಿದು ಕುಳಿತನು.ಮದುವೆಯಾಗಿ ಕೇವಲ ಎರಡು ವರ್ಷವಾಗಿದ್ದು ಅವರಿಗೆ ಇನ್ನೂ ಮಕ್ಕಳಾಗಿರಲಿಲ್ಲ…. ಇಡೀ ಮನೆಯಲ್ಲಿ ಮೌನವೇ ತಾಂಡವವಾಡುತ್ತಿತ್ತು. ಬೆಳಗಿನಿಂದ ಏನನ್ನು ಸರಿಯಾಗಿ ತಿನ್ನದ ಸವಿತಳಿಗೆ ಹೊಟ್ಟೆ ಚುರುಗುಟ್ಟುತ್ತಿತ್ತು. ಅಂತೆಯೇ ಒಂದು ಕಪ್ ಕಾಫಿಯಲ್ಲಿ ಬಿಸ್ಕತ್ತನ್ನು ಎದ್ದಿ ತಿಂದು ಅಡುಗೆ ಕೋಣೆಯತ್ತ ನಡೆದು ರಾತ್ರಿಯ ಅಡುಗೆ ತಯಾರಿಯಲ್ಲಿ ತೊಡಗಿದಳು.
ಇಬ್ಬರಿಗೆ ಅಡುಗೆ ಮಾಡಲು ಅದೆಷ್ಟು ಹೊತ್ತು ಬೇಕು! ಆಕೆ ಅಡುಗೆ ಪೂರೈಸಿ, ಅಡುಗೆಯ ಎಲ್ಲ ಸಾಮಗ್ರಿಗಳನ್ನು ಟೇಬಲ್ ಗೆ ತಂದು ತಟ್ಟೆಗಳನ್ನು ಇಟ್ಟು ಅಣಿ ಮಾಡಿದಾಗ ಮೌನವಾಗಿಯೇ ಬಂದು ಕುಳಿತ ಸತೀಶ ತಟ್ಟೆಗೆ ಬಡಿಸಿಕೊಂಡು ತನ್ನ ಪಾಡಿಗೆ ತಾನು ಊಟ ಮಾಡಿ ಎದ್ದು ಹೋದನು. ಸವಿತಾಳ ಕಣ್ಣಂಚಲ್ಲಿ ತುಂಬಿದ ನೀರು ಕೆನ್ನೆಯ ಮೇಲೆ ಇಳಿಯಲಾರಂಭಿಸಿತು. ಸೂಕ್ಷ್ಮಮತಿಯಾದ ಆಕೆ ಪತಿಯ ಮೌನಕ್ಕೆ ಕಾರಣ ಹುಡುಕಿ ಸೋತಳು. ಕಣ್ಣೊರಸಿ ಮುಖ ತೊಳೆದು ಬಂದು ಸ್ವಲ್ಪವೇ ಸ್ವಲ್ಪ ಮೊಸರನ್ನವನ್ನು ಸೇವಿಸಿ ಅಡುಗೆ ಮನೆಯನ್ನು ಸ್ವಚ್ಛ ಮಾಡಿ ಕೋಣೆಗೆ ತೆರಳಿದ ಆಕೆ ಉಟ್ಟ ಸೀರೆಯನ್ನು ಬದಲಿಸಿ ರಾತ್ರಿ ಉಡುಪನ್ನು ಧರಿಸಿ ಮುಖ ತೊಳೆದು ಬಂದು ಗಂಡನ ಮತ್ತೊಂದು ಬದಿಗೆ ಮಲಗಿದಳು. ರಾತ್ರಿ ಇಡೀ ಆಕೆಯ ಕಣ್ಣೀರು ದಿಂಬನ್ನು ತೋಯಿಸಿತ್ತು. ಮೌನವಾಗಿ ಕಣ್ಣೀರು ಸುರಿಸಿದ ಆಕೆ ನಿದ್ದೆಗೆ ಜಾರಿದಳು.
ಮರುದಿನ ನಸುಕಿನ ಜಾವದಲ್ಲಿಯೇ ತವಿ ತವಿ ಎಂಬ ಪ್ರೀತಿಯ ಕರೆಯನ್ನು ಕೇಳಿ ಎಚ್ಚರಗೊಂಡ ಸವಿತ ಅಚ್ಚರಿಯಿಂದ ಗಂಡನೆಡೆ ತಿರುಗಿ ನೋಡಿದಳು.ನೆನ್ನೆಯಿಂದ ಸೊಲ್ಲೆತ್ತದ ಪತಿ ಪರಮೇಶ್ವರ ಇಂದು ನಸುಕಿನ ಜಾವದಲ್ಲಿ ಎಂದಿನಂತೆ ಪತ್ನಿಯನ್ನು ಪ್ರೀತಿಯಿಂದ ಎಬ್ಬಿಸುತ್ತಿದ್ದಾನೆ. ನೆನ್ನೆಯಿಂದ ಮಡುಗಟ್ಟಿದ್ದ ದುಃಖ ಆಕೆಯ ಗಂಟಲುಬ್ಬುವಂತೆ ಮಾಡಿ ಕೆನ್ನೆಯ ಮೇಲೆ ಕಣ್ಣೀರ ಧಾರೆ. ಆಕೆಯನ್ನು ಬಳಸಿ ಅಪ್ಪಿದ ಪತಿ ಏನಾಯಿತು?ಎಂದು ಕೇಳಿದ. ಕೂಡಲೇ ತನ್ನ ನೋವನ್ನು ಆತನಲ್ಲಿ ತೋಡಿಕೊಂಡಳು ಆಕೆ.
ಅಯ್ಯೋ!! ಎಂದು ಜೋರಾಗಿ ನಕ್ಕ ಸತೀಶ ಸ್ನೇಹಿತರೊಂದಿಗೆ ಒಂದಿಡೀ ದಿನ ಮಾತನಾಡದೆ ಇರಬಲ್ಲೆ ಎಂದು ಪಂಥವನ್ನು ಕಟ್ಟಿದ್ದೆ ಎಂದು ತನ್ನ ಮೌನದ ಕಾರಣವನ್ನು ಆಕೆಗೆ ಅರುಹಿದಾಗ ನಸು ಮುನಿಸಿನಿಂದ ಆತನ ಎದೆಗೆ ಮೆದುವಾಗಿ ಗುದ್ದಿ ತನ್ನ ಸಿಟ್ಟನ್ನು ತೋರ್ಪಡಿಸಿದಳು ಸವಿತಾ. ಕೂಡಲೇ ಪತ್ನಿಯನ್ನು ಬಾಚಿ ತಬ್ಬಿದ ಸತೀಶ ಆಕೆಯ ಹಣೆಯ ಮೇಲೆ ಮುತ್ತೊಂದನಿಟ್ಟು ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಎಂದು ಸಮಾಧಾನಪಡಿಸಿದ.
