ಅಂಗಡಿ ಮುಂಗಟ್ಟುಗಳ ನಾಮಫಲಕ ಕಡ್ಡಾಯವಾಗಿ ಕನ್ನಡದಲ್ಲಿ ಅಳವಡಿಸಲಿ : ಶ್ಯಾಮ್ ಸುಂದರ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,13- ರಾಜ್ಯ ಸರ್ಕಾರದ ಸುತ್ತೋಲೆಯಂತೆ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇಕಡ 60 ರಷ್ಟು ದಪ್ಪ ಅಕ್ಷರದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬರೆಸಬೇಕು ಎಂದು ಇರುತ್ತದೆ. ಆದರೆ, ವಾಣಿಜ್ಯ ಮಳಿಗೆಗಳ ಮಾಲಿಕರು ಆಂಗ್ಲ ಮತ್ತು ಇತರೆ ಭಾಷೆಯಲ್ಲಿ ದೊಡ್ಡದಾಗಿ ಫಲಕಗಳನ್ನು ಅಳವಡಿಸಿರುತ್ತಾರೆ, ಇದು ಕನ್ನಡ ಭಾಷೆಗೆ ಮಾಡುತ್ತಿರುವ ದ್ರೋಹವೇ ಸರಿ, ತಕ್ಷಣ ಅಥವಾ ಈ ತಿಂಗಳ ಕೊನೆಯೊಳಗೆ ಸರ್ಕಾರದ ಸುತ್ತೋಲೆಯಂತೆ ಕನ್ನಡದಲ್ಲಿ ನಾಮಫಲಕಗಳನ್ನು ಅಳವಡಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಜಯ ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ಜಿಲ್ಲಾಧಿಕಾರಿಗಳಿಗೆ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರವನ್ನು ಸಲ್ಲಿಸಿ ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳಿಗೆ ಮತ್ತು ಪಾಲಿಕೆ ಆಯುಕ್ತರಿಗೆ ಮನವಿ ಪತ್ರವನ್ನು ಸಲ್ಲಿಸಿ, ನಗರದಲ್ಲಿ ಬಹುತೇಕ ವಾಣಿಜ್ಯ ಅಂಗಡಿಗಳು ಮತ್ತು ದೊಡ್ಡ ದೊಡ್ಡ ಮಲ್ಟಿ ನ್ಯಾಷನಲ್ ಮಳಿಗೆಗಳು ನಾಮಫಲಕವನ್ನು ಆಂಗ್ಲ ಭಾಷೆಯಲ್ಲಿ ಅಳವಡಿಸಿರುತ್ತಾರೆ. ಇದು ಕನ್ನಡ ವಿರೋಧಿ ಧೋರಣೆಯಾಗಿದೆ, ಈ ಮಳಿಗೆಯಲ್ಲಿ ವ್ಯವಹಾರ ಮಾಡುವವರು ಕನ್ನಡಿಗರೇ ಮತ್ತು ಕೆಲಸ ಮಾಡುತ್ತಿರುವವರು ಕನ್ನಡಿಗರೇ ಆಗಿದ್ದಾರೆ, ಆದರೂ ಮಳಿಗೆಗಳ ಮಾಲಿಕರು ಆಂಗ್ಲಭಾಷೆಯಲ್ಲಿ ನಾಮಫಲಕಗಳನ್ನು ಅಳವಡಿಸಿರುತ್ತಾರೆ. ಇಂತವರ ವಿರುದ್ಧ ಜಿಲ್ಲಾಡಳಿತ ಮತ್ತು ಪಾಲಿಕೆವತಿಯಿಂದ ಕಡ್ಡಾಯವಾಗಿ ಕನ್ನಡದಲ್ಲೇ ನಾಮಫಲಕಗಳನ್ನು ಅಳವಡಿಸುವಂತೆ ಕ್ರಮಕೈಗೊಳ್ಳಬೇಕೆಂದು ರಾಜ್ಯ ಸಂಸ್ಥಾಪಕ ಅಧ್ಯಕ್ಷ ಕೆ ಶ್ಯಾಮ್ ಸುಂದರ್, ಬಳ್ಳಾರಿ ಜಿಲ್ಲಾಧ್ಯಕ್ಷ ಕೆ.ಪಿ ಹಸೇನ್ ಒತ್ತಾಯಿಸಿದ್ದಾರೆ.
ಈ ತಿಂಗಳ ಅಂತ್ಯದೊಳಗೆ ನಾಮಫಲಕಗಳನ್ನು ಬದಲಾಯಿಸದೇ ಇದ್ದಲ್ಲಿ ಫಲಕಗಳಿಗೆ ಮಸಿ ಬಳಿಯುವ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ರ್ರಿಸ್ವಾಮಿ, ಮಹೇಶ್ ಬೆಲ್ಲದ, ಜಿಲ್ಲಾ ಉಪಾಧ್ಯಕ್ಷ ಎ ಕುಮಾರಸ್ವಾಮಿ, ಕೊಳಗಲ್ಲು ಬಸವರಾಜ್, ಮಹಿಳಾ ನಗರಾಧ್ಯಕ್ಷೆ ಸುನೀತಾ ಬಿ, ಜಿಲ್ಲಾಧ್ಯಕ್ಷೆ ಪಿ ರಜಿಯಾ, ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್ ಎಸ್ ಸುಧಾಕರ್ ಹೆಗಡೆ, ಅಟೋ ಚಾಲಕರ ಘಟಕದ ಮಂಜುನಾಥ್, ನಗರ ಪ್ರಧಾನ ಕಾರ್ಯದರ್ಶಿ ದೇವರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಎಮ್.ಡಿ ರಫೀಕ್ ಸೇರಿದಂತೆ ಹಲವರಿದ್ದರು.
