
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ
ಕೊಪ್ಪಳದಲ್ಲಿ ಚುನಾವಣೆ – ಇಂದು ಮತದಾನ
ಕರುನಾಡ ಬೆಳಗು
ಕೊಪ್ಪಳ, 11- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೊಪ್ಪಳ ಜಿಲ್ಲಾ ಪ್ರತಿನಿಧಿ ಮತ್ತು ರಾಜ್ಯದ ಅಧ್ಯಕ್ಷರನ್ನು ಆಯ್ಕೆ ಮಾಡಲು ಭಾನುವಾರ ಇಲ್ಲಿನ ಬ್ರಾಹ್ಮಣ ಸದಾಚಾರ ಸದನದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 4 ಗಂಟೆ ತನಕ ಮತದಾನ ಜರುಗಲಿದೆ.
ಮಹಾಸಭಾದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಸ್. ರಘುನಾಥ್ ಮತ್ತು ಹಾಲಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರ ಬೆಂಬಲಿತ ಅಭ್ಯರ್ಥಿಯಾಗಿ ವಿ. ಭಾನುಪ್ರಕಾಶ ಶರ್ಮಾ ಸ್ಪರ್ಧೆ ಮಾಡಿದ್ದಾರೆ. ಜಿಲ್ಲೆಯ ಪ್ರತಿನಿಧಿ ಸ್ಥಾನಕ್ಕೆ ರಘುನಾಥ್ ಅವರ ಬಣದಿಂದ ಪ್ರಾಣೇಶ್ ಮಾದಿನೂರು ಹಾಗೂ ಭಾನುಪ್ರಕಾಶ ಶರ್ಮಾ ಅವರ ಬಣದಿಂದ ಗುರುರಾಜ ಜೋಶಿ ಕಣದಲ್ಲಿದ್ದು, ಒಂದು ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಇಬ್ಬರ ನಡುವೆ ಪೈಪೋಟಿ ಏರ್ಪಟ್ಟಿದೆ. ಜಿಲ್ಲೆಯ ಪ್ರತಿ ಮತದಾರರು ಜಿಲ್ಲಾ ಪ್ರತಿನಿಧಿ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆಗೆ ತಲಾ ಒಂದು ಮತ ಚಲಾಯಿಸಬೇಕಿದೆ.
ಕೊಪ್ಪಳ ಜಿಲ್ಲೆಯ ಜಿಲ್ಲಾ ಪ್ರತಿನಿಧಿ ಮತ್ತು ರಾಜ್ಯಾಧ್ಯಕ್ಷರ ಆಯ್ಕೆಗೆ ಮತದಾನ, ಬಳ್ಳಾರಿ (225 ಮತದಾರರು) ಮತ್ತು ವಿಜಯನಗರ (358 ಮತದಾರರು) ರಾಜ್ಯಾಧ್ಯಕ್ಷರ ಆಯ್ಕೆಗೆ ಕೊಪ್ಪಳದಲ್ಲಿಯೇ ಮತದಾನ ನಡೆಯಲಿದೆ ಎಂದು ಸಹಾಯಕ ಚುನಾವಣಾಧಿಕಾರಿ ಜೆ. ನಾಗರಾಜ ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 1,190 ಮತದಾರರು ಇದ್ದು, ಮತದಾನದ ಬಳಿಕ ಮತ ಎಣಿಕೆ ನಡೆಯಲಿದೆ.
ನೆರೆಯ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಜಿಲ್ಲಾ ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ರಾಜ್ಯಾಧ್ಯಕ್ಷರ ಆಯ್ಕೆಗೆ ಮಾತ್ರ ಇಲ್ಲಿನ ಸದಾಚಾರ ಸದನದಲ್ಲಿಯೇ ಭಾನುವಾರ ಮತದಾನ ನಡೆಯಲಿದೆ.