9

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ಚುನಾವಣೆ

ಅಭ್ಯರ್ಥಿ ಭಾನುಪ್ರಕಾಶ ಶರ್ಮಾರಿಂದ ಕೊಪ್ಪಳದಲ್ಲಿ ಮತಯಾಚನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 07- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುವ ಭಾನು ಪ್ರಕಾಶ ಶರ್ಮಾ ನಗರದಲ್ಲಿ ಶುಕ್ರವಾರ ಸಮುದಾಯದ ಜನರಲ್ಲಿ ಮತಯಾಚನೆ ಮಾಡಿದರು.

ಏಪ್ರಿಲ್‌ 13ರಂದು ಮತದಾನ ನಡೆಯಲಿದ್ದು, ಭಾನುಪ್ರಕಾಶ ಅವರು ಹಾಲಿ ಅಧ್ಯಕ್ಷ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 1800 ಬ್ರಾಹ್ಮಣ ಸಮಾಜದವರು ಮಹಾಸಭಾದ ಸದಸ್ಯರಾಗಿದ್ದು, ಇದರಲ್ಲಿ 1200 ಜನ ಮತದಾನಕ್ಕೆ ಅರ್ಹರಾಗಿದ್ದಾರೆ.

 

ಮತಯಾಚನೆಗೆ ಬಂದ ಶರ್ಮಾ ಅವರನ್ನು ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು ಸ್ವಾಗತಿಸಿ ಮುಂಬರುವ ಚುನಾವಣೆಯಲ್ಲಿ ಬೆಂಬಲ ನೀಡುವುದಾಗಿ ಘೋಷಿಸಿದರು.ಈ ವೇಳೆ ಮಾತನಾಡಿದ ಶರ್ಮಾ ‘ರಾಜ್ಯದಲ್ಲಿ ಬ್ರಾಹ್ಮಣರ ಜನಸಂಖ್ಯೆ 47 ಲಕ್ಷವಿದ್ದರೂ ಸರ್ಕಾರದ ಲೆಕ್ಕದಲ್ಲಿ 17 ಲಕ್ಷ ಮಾತ್ರ ಇದ್ದೇವೆ. ಇದು ನಮ್ಮ ಸಮಾಜದವರೇ ಮಾಡಿದ ತಪ್ಪು. ಆದ್ದರಿಂದ ಮುಂದಿನ ದಿನಗಳಲ್ಲಿ ಉಪಜಾತಿ, ಉಪಪಂಗಡಗಳನ್ನು ಬಳಸುವ ಬದಲು ಬ್ರಾಹ್ಮಣ ಎಂದೇ ನೋಂದಾಯಿಸಬೇಕು’ ಎಂದು ಹೇಳಿದರು.

‘ಸಂಘಟನೆಯನ್ನು ಗ್ರಾಮೀಣ ಭಾಗದಲ್ಲಿ ವಿಸ್ತರಣೆಗೆ ಕ್ರಮ ವಹಿಸಲಾಗುತ್ತದೆ. ಸಾಧಕ ಬಾಧಕಗಳನ್ನು ಪರಿಶೀಲಿಸಿ ಮಹಾಸಭಾದ ಸದಸ್ಯತ್ವ ನೋಂದಣಿಗೆ ಡಿಜಿಟಲ್‌ ವ್ಯವಸ್ಥೆ ಮಾಡಲಾಗುವುದು. ಅಶಕ್ತ ಬ್ರಾಹ್ಮಣ ಯುವಕರಿಗೆ ನೌಕರಿಗೆ ಅವಕಾಶ, ಮಹಿಳೆಯರಿಗೆ ಪಿಂಚಣಿ ಯೋಜನೆಗೆ ನೆರವಾಗಲು ಹಲವು ಕ್ರಮಗಳನ್ನು ವಹಿಸಲಾಗಿದೆ. ಸಮಾಜದ ಮಹಿಳೆಯರ ಸ್ವಾವಲಂಬನೆಗೆ ಯೋಜನೆ ರೂಪಿಸಲಾಗುವುದು’ ಎಂದು ತಿಳಿಸಿದರು.‘ಮಹಾಸಭಾದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಲು ಮೊದಲ ಬಾರಿಗೆ ಪಂಡಿತರಿಗೆ ಅವಕಾಶ ಲಭಿಸಿದೆ. ಮೊದಲು ಐದು ವರ್ಷ ಅಧಿಕಾರದ ಅವಧಿಯಿತ್ತು. ಈ ಬಾರಿಯಿಂದ ಐದು ವರ್ಷಕ್ಕೆ ಏರಿಕೆ ಮಾಡಲಾಗಿದೆ’ ಎಂದು ವಿವರಿಸಿದರು.

ಮಹಾಸಭಾದ ಸಂಘಟನಾ ಕಾರ್ಯದರ್ಶಿ ವಿಜಯ ನಾಡಜೋಶಿ, ಜಿಲ್ಲಾ ಸಂಚಾಲಕ ಎಚ್‌.ಬಿ. ದೇಶಪಾಂಡೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರುರಾಜ ಜೋಶಿ, ಸಮಾಜದ ಮುಖಂಡರಾದ ಡಾ. ಕೆ.ಜಿ. ಕುಲಕರ್ಣಿ, ರಾಘವೇಂದ್ರ ನರಗುಂದ, ವೇಣುಗೋಪಾಲ್‌ ಜಹಗೀರದಾರ್‌, ಅನಿಲಕುಮಾರ ಕುಲಕರ್ಣಿ, ರಮೇಶ ಜಹಗೀರದಾರ, ಸುನಿಲ್‌ ಕುಮಾರ ದೇಸಾಯಿ, ಕೃಷ್ಣ ಪದಕಿ, ಸುರೇಶ ಮುಧೋಳ, ವಿಜಯ ಪದಕಿ, ವೀಣಾ ಜಹಗೀರದಾರ್‌, ಲತಾ ಮುಧೋಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!