
ಇಂದು ಜರುಗಲಿರುವ ಕರಮುಡಿಯ ಕರವೀರಭದ್ರೇಶ್ವರ ಜಾತ್ರೋತ್ಸವ
(ದಿ.18—12—2024ರಂದು ಕೊಪ್ಪಳ ಜಿಲ್ಲಾ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ಶ್ರೀ ಕರವೀರಬಧ್ರೇಶ್ವರನ ಜಾತ್ರೋತ್ಸವ ಜರುಗಲಿರುವ ನಿಮಿತ್ಯ ಈ ಲೇಖನ)
ದಕ್ಷಬ್ರಹ್ಮ ಹಾಗೂ ಪ್ರಸೂತಿದೇವಿ ದಂಪತಿಗಳಿಗೆ 63 ಜನ ಹೆಣ್ಣು ಮಕ್ಕಳು ಇರುತ್ತಾರೆ. ಅದರಲ್ಲಿ 63 ನೇಯವಳೆ ದಾಕ್ಷಾಯಣಿ. ಇವಳನ್ನು ಶಿವನಿಗೆ ಕೊಟ್ಟು ಮದುವೆ ಮಾಡಲಾಗುವುದು. ದಕ್ಷಬ್ರಹ್ಮ ಒಂದು ಸಂದರ್ಭದಲ್ಲಿ ಶಿವ ಎಂಬ ಅಳಿಯನ ಮನೆಗೆ ಬಂದಾಗ ಶಿವನು ಆತನಿಗೆ ಗೌರವವನ್ನು ಕೊಡುವದಿಲ್ಲ . ಯಾಕೆಂದರೆ ದಕ್ಷಬ್ರಹ್ಮನು ಅಹಂಕಾರಿ ಯಾಗಿರುವದನ್ನು ಶಿವನು ಅರಿತಿರುತ್ತಾನೆ.
ದಕ್ಷಬ್ರಹ್ಮ ತನಗಾದ ಅವಮಾನದ ಸೇಡನ್ನು ತೀರಿಸಿಕೊಳ್ಳಲು ದದೀಚಿ ಮಹಾೠಷಿಯ ನೇತ್ರತ್ವದಲ್ಲಿ “ಯಜ್ಞ” ವನ್ನು ಪ್ರಾರಂಭಿಸಿದಾಗ ದಾಕ್ಷಾಯಣಿ ಹಾಗೂ ಶಿವನನ್ನು ಹೊರತು ಪಡಿಸಿ ಎಲ್ಲಾ 62 ಜನ ಹೆಣ್ಣು ಮಕ್ಕಳನ್ನು ˌ ಅಳಿಯಂದಿರನ್ನು ಹಾಗೂ ದೇವಾನು ದೇವತೆಗಳನ್ನು ಆಹ್ವಾನಿಸಿ ಶಿವನಿಗೆ ಅವಮಾನ ಮಾಡಲು ಸಂಚು ಮಾಡುತ್ತಿರುತ್ತಾನೆ.
ಈ ಸಂದರ್ಭದಲ್ಲಿ ತಂದೆ ಮಾಡುವ ಯಜ್ಞದಲ್ಲಿ ನಾನು ಪಾಲ್ಗೊಳ್ಳುತ್ತೇನೆ ಅವಕಾಶ ಮಾಡಿಕೊಡಿ ಎಂದು ದಾಕ್ಷಾಯಣಿ ಪತಿದೇವನಾದ ಶಿವನಲ್ಲಿ ಬೇಡಿಕೊಳ್ಳುವಳು. ನಮಗೆ ಆಹ್ವಾನ ಮಾಡದೇ ಅವಮಾನ ಮಾಡಲೆಂದೆ ನಿನ್ನ ತಂದೆ ಯಜ್ಞ ಮಾಡುತ್ತಿದ್ದಾನೆ ಇಂತಹ ಸಮಯದಲ್ಲಿ ನೀನು ಅಲ್ಲಿಗೆ ಹೋಗುವದು ಉಚಿತವಲ್ಲವೆಂದು ಶಿವ ಅಂದಾಗಲೂ ತಂದೆ ಕರೆಯದಿದ್ದರೂ ತಾಯಿ ಇರುತ್ತಾಳೆ ನಾನು ಹೋಗುವೆ ಎಂದು ಹಠಹಿಡಿಯುತ್ತಾಳೆ. ನಿನ್ನ ಇಷ್ಟದಂತೆ ಆಗಲಿ ಹೋಗು ನಾನು ಬರುವದಿಲ್ಲ ಎನ್ನುತ್ತಾನೆ ಶಿವ.
ಯಜ್ಞಕ್ಕೆ ದಾಕ್ಷಾಯಣಿ ಬಂದಾಗ ಅಲ್ಲಿ ಅವಳನ್ನು ಯಾರು ಬರಮಾಡಿಕೊಳ್ಳುವದಿಲ್ಲ . ಹೀಗಾಗಿ ಅವಳು ಮತ್ತೆ ಅವಮಾನಿತಳಾಗುತ್ತಾಳೆ. ಶಿವ ಬೇಡವೆಂದರೂ ನೀನು ಇಲ್ಲಿಗೆ ಬಂದೆ ಈಗ ಅವನಿಗೆ ಹೇಗೆ ಮುಖ ತೋರಿಸುವೆ ಎಂದು ನಂದಿಯು ಅಂದಾಗ ಹೌದು ನಾನು ಶಿವನಿಗೆ ಮುಖ ತೋರಿಸಲಾರೆ ಎಂದು ಯಜ್ಞ ನಡೆಯುವ ಅಗ್ನಿಕುಂಡದಲ್ಲಿ ಹಾರಿ ದಹನವಾಗುತ್ತಾಳೆ. ಈ ವಿಷಯ ಶಿವನಿಗೆ ಗೊತ್ತಾದಗ ಕೋಪಗೊಂಡು ಕೈಲಾಸದಲ್ಲಿ ಉಗ್ರ ನರ್ತನ ಮಾಡುತ್ತಾ ಮೂರನೇ ಉರಿಗಣ್ಣು ತೆರೆದಾಗ ಆ ಅಗ್ನಿಯಲ್ಲಿ ಅವತರಿಸಿದವನೇ ಕರವೀರಭದ್ರನೆಂದು ಪುಟ್ಟರಾಜ ಕವಿಗಳ ರಚಿಸಿದ ಪುರಾಣದಲ್ಲಿ ಉಲ್ಲೇಖಿಸಿದ್ದಾರೆ.
ಮುಂದೆ ಕರವೀರಭದ್ರನು ಅಹಂಕಾರದಿಂದ ಮೆರೆಯುತ್ತಿರುವ ದಕ್ಷಬ್ರಹ್ಮನ ರುಂಡವನ್ನು ಸಂಹರಿಸುತ್ತಾನೆ.ಆಗ ಪ್ರಸೂತಿ ದೇವಿ ಕರವೀರಭದ್ರನ ಪಾದಕ್ಕೆ ಏರಗಿ ನನ್ನ ಮುತ್ತ್ಯೇದೆಭಾಗ್ಯವನ್ನು ಕಸಿದುಕೊಳ್ಳದಿರು ನನ್ನ ಪತಿ ದೇವರಿಗೆ ಜೀವಕೊಟ್ಟು ಕಾಪಾಡು ಎಂದು ಪ್ರಾರ್ಥಿಸಿದಾಗ ಉತ್ತರ ದಿಕ್ಕಿನಲ್ಲಿ ಬಿದ್ದಿರುವ ಟಗರಿನ ತಲೆಯನ್ನು ದಕ್ಷಬ್ರಹ್ಮನಿಗೆ ಇಟ್ಟಾಗ ಜೀವಕಳೆ ಮರುಕಳಿಸುತ್ತದೆ. ಅಂದಿನಿಂದ ಕರವೀರಭದ್ರನ ಸೇವಕರಾಗಿ ದಕ್ಷಬ್ರಹ್ಮ ಬಲಕ್ಕೆ ಹಾಗೂ ಪ್ರಸೂತಿದೇವಿಯವರು ಎಡಕ್ಕೆ ನಿಂತಿರುವ ಭಾವಚಿತ್ರವನ್ನು ಕಾಣಬಹುದಾಗಿದೆ. ಆಂಜನೇಯನಿಗೂ ಕರವೀರಭಧ್ರನೆ ಲಿಂಗಧಾರಣೆ ಮಾಡಿದ್ದಾನೆ ಎನ್ನಲಾಗಿದೆ.
ಲಿಂಗಾಯತ ಧರ್ಮದ ಸಂಸ್ಥಾಪಕ ˌ ಶಿವನ ಮಾನಸಿಕ ಪುತ್ರ ˌ ಮಹಾಶಕ್ತಿಶಾಲಿಯಾದ ಕರವೀರಬಧ್ರನು ದುಷ್ಟರನ್ನು ಸಂಹರಿಸಿ ಶಿಷ್ಟರನ್ನು ರಕ್ಷಿಸುತ್ತಾನೆ ಎಂಬುವುದು ಅನೇಕ ಪುರಾಣಗಳಲ್ಲಿ ಉಲ್ಲೇಖವಾದದ್ದುನ್ನು ಗಮನಿಸಬಹುದಾಗಿದೆ.ನಾಡಿನ ಹರಗುರು ಚರಮೂರ್ತಿಗಳಾದ ಯಲಬುರ್ಗಾದ ಸಿದ್ಧರಾಮೇಶ್ವರ ಸ್ವಾಮಿಗಳು ˌ ಬಸವಲಿಂಗೇಶ್ವರ ಸ್ವಾಮಿಗಳು ˌ ನಿಡಗುಂದಿಕೊಪ್ಪದ ಚನ್ನಬಸವ ಸ್ವಾಮಿಗಳು ˌ ಕುಕನೂರಿನ ಡಾˌ ಮಹಾದೇವಸ್ವಾಮಿಗಳು ರೋಣದ ಗುರುಪಾದೇಶ್ವರ ಸ್ವಾಮಿಗಳು ಹಾಗೂ ಕುದರಿಮೋತಿಯ ವಿಜಯ ಮಹಾಂತೇಶ್ವರ ಸ್ವಾಮಿಗಳು ಕರಮುಡಿಯ ಕಾರ್ತಿಕೋತ್ಸವ ಹಾಗೂ ಜಾತ್ರೋತ್ಸವದಲ್ಲಿ ಭಾಗವಹಿಸಿ ಮೆರಗನ್ನು ತಂದಿದ್ದು ವಿಶೇಷವೆನಿಸಿತ್ತು.
ಡಾ. ಪಂ.ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಗಜಗಿನಹಾಳದ ವೀರೇಶ ಶಾಸ್ತ್ರಿಗಳು ಕರವೀರನ ಅವತಾರಗಳನ್ನು ಪ್ರವಚನ ಮೂಲಕ ಬಿತ್ತರಿಸಿ ಭಕ್ತಸಮೂಹವನ್ನು ಮಂತ್ರ ಮುಗ್ಧರನ್ನಾಗಿಸಿದರು. ಸಂಗೀತಗಾರರಾದ ಕಲ್ಯಾಣಕುಮಾರ ಬಂಟನಹಳ್ಳಿ ಹಾಗೂ ವೀರಭದ್ರಯ್ಯ ಕೆಂಬಾವಿಮಠ ರವರುಗಳ ಸುಶ್ರಾವ್ಯ ಸಂಗೀತ ಮನಸೊರೆಗೊಂಡವು.
ದಿ.12—12—2024 ರಿಂದ 16—12—2024 ರವರೆಗೆ ನಿರಂತರ ಐದು ದಿನ ನಡೆಸಿಕೊಂಡು ಬಂದ ಪುರಾಣದಲ್ಲಿ ಲಕ್ಷಾನು ಜನರು ಪುರಾಣಶ್ರವಿಸಿ ಪ್ರಸಾದ ಸೇವನೆ ಮಾಡಿ ಕರವೀರನ ಕ್ರಪೆಗೆ ಪಾತ್ರರಾದ ಜನರಲ್ಲಿ ಅದೇಷ್ಟು ಧನ್ಯತಾ ಭಾವ ಇತ್ತು ಎಂಬುವದನ್ನು ಅಕ್ಷರದಲ್ಲಿ ವರ್ಣಿಸಲು ಅಸಾಧ್ಯವೆನಿಸುತ್ತದೆ. ಕಲಿಯುಗದಲ್ಲಿಯೂ ಕರವೀರಭಧ್ರನ ಮೇಲೆ ಅಪಾರ ನಂಬಿಕೆ ಹಾಗೂ ಶ್ರದ್ಧೆ ಇಟ್ಟವರನ್ನು ಅವನು ಸದಾ ರಕ್ಷಿಸುತ್ತಾನೆ ಎನ್ನುವ ನಿದರ್ಶನಗಳು ಸಾಕಷ್ಟಿವೆ.