2c136fae-be38-4577-97e1-318669006cc9

ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಿದ ಪರಿಣಾಮವೋ? ಕಲಿಸುವಿಕೆಯ ಕಳಪೆ ಗುಣಮಟ್ಟವೋ?

ಕರುನಾಡ ಬೆಳಗನ ಸುದ್ದಿ

ಕೊಪ್ಪಳ, 9- ಲೋಕಸಭಾ ಚುನಾವಣೆಯ ಕಾವು ತಣ್ಣಗಾದ ಬೆನ್ನಲ್ಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರಬಿದ್ದಿದೆ. ಜಿಲ್ಲೆಯ ಮಟ್ಟಿಗೆ ಈ ಸಲದ ಫಲಿತಾಂಶ ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವಂತಿದೆ. ಕಳೆದ ವರ್ಷದ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ 16ನೇ ಸ್ಥಾನದಲ್ಲಿದ್ದ ಕೊಪ್ಪಳ ಜಿಲ್ಲೆ ಈ ವರ್ಷ 32ನೇ ಸ್ಥಾನಕ್ಕೆ ಕುಸಿತ ಕಂಡಿದೆ.

22,713 ಜನ ವಿದ್ಯಾರ್ಥಿಗಳು ಈ ಸಲ ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 14,539 ಜನ ವಿದ್ಯಾರ್ಥಿಗಳು ಮಾತ್ರ ತೇರ್ಗಡೆ ಹೊಂದಿ, ಶೇಕಡಾ 64.01ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶದಲ್ಲಿ ಕೊಪ್ಪಳ ಜಿಲ್ಲೆ ಶೇಕಡಾ 50ರಷ್ಟು ಕುಸಿತ ಕಂಡಿದೆ.

ಗಂಗಾವತಿ ಬಾಲಕ ಜಿಲ್ಲೆಗೆ ಫಸ್ಟ್ : ಜಿಲ್ಲೆಯ ಗಂಗಾವತಿಯ ಶ್ರೀ ಚನ್ನಬಸವ ಬಡಾವಣೆಯ ಮಹಾಂತ ಕಿಡ್ಸ್ ಪ್ರೌಢಶಾಲೆಯ ಪಿ.ರೇವಂತಕುಮಾರ್ ಪಿ.ಪ್ರಸಾದ್ 625 ಅಂಕಗಳಿಗೆ 621 ಅಂಕಗಳನ್ನು ಗಳಿಸಿ ಕೊಪ್ಪಳ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಕೊಪ್ಪಳದ ಎಸ್ಎಫ್ಎಸ್ ಪ್ರೌಢಶಾಲೆಯ ಪ್ರಕಾಂಕ್ಷಾ ಮಂಜುನಾಥ್ 625 ಅಂಕಗಳಿಗೆ 616 ಅಂಕಗಳನ್ನು ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಯಲಬುರ್ಗಾ ತಾಲೂಕಿನ ಬೇವೂರು ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ತಿರುಪತಿ ಗುರಿಕಾರ 625 ಅಂಕಗಳಿಗೆ 615 ಅಂಕಗಳನ್ನು ಗಳಿಸಿ ಜಿಲ್ಲೆಗೆ ತೃತೀಯ ಸ್ಥಾನ ಗಳಿಸಿದ್ದಾನೆ.

ಬಾಲಕಿಯರದ್ದೇ ಮೇಲುಗೈ : ಕೊಪ್ಪಳ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 11,129 ಬಾಲಕರ ಪೈಕಿ 6,165 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 11,584 ಬಾಲಕಿಯರ ಪೈಕಿ 8,374 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು ಮೇಲುಗೈ ಸಾಧಿಸಿದ್ದಾರೆ. ಬಾಲಕರ ಫಲಿತಾಂಶ ಶೇಕಡಾ 55.40ರಷ್ಟಾದರೆ, ಬಾಲಕಿಯರ ಫಲಿತಾಂಶ ಶೇಕಡಾ 72.29ರಷ್ಟು ದಾಖಲಾಗಿದೆ.

ವೆಬ್‌ಕಾಸ್ಟಿಂಗ್ ಎಫೆಕ್ಟ್ : ಈ ವರ್ಷ ಕೊಪ್ಪಳ ಜಿಲ್ಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಗಣನೀಯ ಕುಸಿತ ಕಂಡಿರುವುದಕ್ಕೆ ಕಾರಣ ವೆಬ್‌ಕಾಸ್ಟಿಂಗ್ ಪರಿಣಾಮ ಎನ್ನುವ ಮಾತುಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಕೇಳಿ ಬಂದಿದೆ. ಫಲಿತಾಂಶ ಸುಧಾರಣೆಗೆ‌ ಜಿಲ್ಲಾಡಳಿತ ಅನೇಕ ಯೋಜನೆ, ಕ್ರಮಗಳನ್ನು ಜಾರಿಗೊಳಿಸಿದರೂ ಫಲ ಸಿಕ್ಕಿಲ್ಲ. ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ರತ್ನಂ ಪಾಂಡೇಯ ಅವರು ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಚಿಗುರು ಎನ್ನುವ ಪುಸ್ತಕ ಪ್ರಕಟಿಸಿದ್ದನ್ನು ಸ್ಮರಿಸಬಹುದಾಗಿದೆ.

“ಫಲಿತಾಂಶ ನಿರೀಕ್ಷೆಗೆ ತಕ್ಕಂತೆ ಬಂದಿಲ್ಲ ಎಂಬುದು ನಿಜವಾದರೂ ಫಲಿತಾಂಶ ಸುಧಾರಣೆಗೆ ಪ್ರಯತ್ನಿಸಿದ್ದೇವೆ. ಜಿಲ್ಲೆಯಲ್ಲಿ 410 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇರುವುದು ಇಂಥ ಫಲಿತಾಂಶಕ್ಕೆ ಕಾರಣ ಎನ್ನಬಹುದು. ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಿಕೊಂಡಿದ್ದು ಗುಣಮಟ್ಟದ ಕಲಿಸುವಿಕೆಯಲ್ಲಿ ಬಹುಶಃ ವಿಫಲತೆ ಉಂಟಾಗಿ ಕೊಪ್ಪಳ ಜಿಲ್ಲೆ ಫಲಿತಾಂಶದಲ್ಲಿ ಕುಸಿತ ಕಂಡಿದೆ. ಮುಂಬರುವ ದಿನಗಳಲ್ಲಿ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಫಲಿತಾಂಶದ ಚೇತರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು‌.”

 ಶ್ರೀಶೈಲ ಬಿರಾದಾರ

ಡಿಡಿಪಿಐ ಕೊಪ್ಪಳ

 

Leave a Reply

Your email address will not be published. Required fields are marked *

error: Content is protected !!