ಶಿವಶರಣ ಮೋಳಿಗೆ ಮಾರಯ್ಯ ಸಿನಿಮಾ ಚಿತ್ರೀಕರಣಕ್ಕೆ ಇಂದು ಗವಿಶ್ರೀ ಚಾಲನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 9- ದಾಸ ಸಾಹಿತ್ಯಕ್ಕೆ ಸಂಬಂಧಿಸಿದ ಕಥಾವಸ್ತುಗಳ ಮೇಲೆ ಸುಮಾರು ಮೂರು ಸಿನಿಮಾಗಳ ನಿರ್ಮಾಣ ನಿರ್ದೇಶನ ಮಾಡಿರುವ ತಮ್ಮ ಸಂಸ್ಥೆ ಶಿವಶರಣ ಮೋಳಿಗೆ ಮಾರಯ್ಯ ಸಿನಿಮಾ ನಿರ್ಮಿಸುವ ಮೂಲಕ ಶರಣ ಸಾಹಿತ್ಯದ ಕಥೆಗಳನ್ನು ಜನರ ಬಳಿ ತಲುಪಿಸಲಾಗುವುದು ಎಂದು ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕ ಡಾ.ಮಧುಸೂದನ್ ಹವಾಲ್ದಾರ ಹೇಳಿದರು.
ನಗರದ ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೂ ತಾವು ಕಮರ್ಷಿಯಲ್ ಸಿನಿಮಾಗಳ ಬಳಿಕ ದಾಸ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಜಗನ್ನಾಥ ದಾಸರು, ವೆಂಕಟೇಶ ದಾಸರ ಸಿನಿಮಾಗಳನ್ನು ನಿರ್ಮಿಸಿ ವಿದೇಶಗಳಲ್ಲಿ ನೂರು ದಿನಗಳ ಪ್ರದರ್ಶನದ ಯಶಸ್ಸು ಕಂಡಿದ್ದು, ಸಾಣೇಹಳ್ಳಿ ಶ್ರೀಗಳ ಮಾರ್ಗದರ್ಶನ ಹಾಗೂ ಗವಿಶ್ರೀಗಳ ಆಶೀರ್ವಾದದಿಂದ ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಶಿವಶರಣ ಮೋಳಿಗೆ ಮಾರಯ್ಯ ಸಿನಿಮಾ ಸಿದ್ಧಪಡಿಸುತ್ತಿರುವುದಾಗಿ ತಿಳಿಸಿದರು.
ಮೇ 10ರಂದು ಬಸವ ಜಯಂತಿಯ ಶುಭ ದಿನ ಗವಿಮಠದ ಆವರಣದಲ್ಲಿ ಸಿನಿಮಾದ ಮೊದಲ ದೃಶ್ಯದ ಚಿತ್ರೀಕರಣಕ್ಕೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಚಿತ್ರದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ಇದೆ. ಕೊಪ್ಪಳ, ಗಂಗಾವತಿ, ಆನೆಗೊಂದಿ ಹಾಗೂ ಹೊಸಪೇಟೆಯಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಒಂದು ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಿಸಲು ಯೋಜಿಸಲಾಗಿದ್ದು, ಒಂಭತ್ತು ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಿನಿಮಾದ ನಾಯಕ ವಿಷ್ಣು ಇದ್ದರು.
