
ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ-೨೦೨೪
‘ಸ್ವಯಂ ಉದ್ಯೋಗ’ ಹಾಗೂ ‘ವೃತ್ತಿ ಕೌಶಲ್ಯದ ಸಂಕಲ್ಪ’ ಜಾಗೃತಿ ಅಭಿಯಾನ
‘ಕಾಯಕ ದೇವೋಭವ’ – ಜಾಗೃತಿ ಜಾಥಾ
(‘ಸ್ವಾವಲಂಬಿ ಬದುಕು, ಸಮೃದ್ಧಿ ಬದುಕು, ಸಂತೋಷದ ಬದುಕು’ಎಂಬ ಘೋಷವಾಕ್ಯದೊಂದಿಗೆ) ನಿಮಿತ್ಯ
ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ.
ಕೊಪ್ಪಳ, ೦೭- ಸಂಸ್ಥಾನ ಶ್ರೀ ಗವಿಮಠದ ಜಾತ್ರಾಮಹೋತ್ಸವವೆಂದರೆ ವಿನೂತನ ವಿಶೇಷತೆಯ ಹೊಸತನದ ಆಧುನಿಕ ಸ್ಪರ್ಷತೆಯ ಸಂಗಮ. ಶ್ರೀಮಠವು ತನ್ನ ಧಾರ್ಮಿಕ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಜಾಗೃತಿ ಕಾರ್ಯಕ್ರಮ ಜಾತ್ರಾಮಹೋತ್ಸವದ ವಿಶೇಷತೆ. ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.
‘ಸ್ವಯಂ ಉದ್ಯೋಗ’ ಹಾಗೂ ‘ವೃತ್ತಿ ಕೌಶಲ್ಯದ ಸಂಕಲ್ಪ’ ಜಾಗೃತಿ ಅಭಿಯಾನ,‘ಕಾಯಕ ದೇವೋಭವ‘ಎಂಬ ಜಾಗೃತಿ ಜಾಥಾ ‘ಸ್ವಾವಲಂಬಿ ಬದುಕು, ಸಮೃದ್ಧಿ ಬದುಕು, ಸಂತೋಷದ ಬದುಕು’ ಎಂಬ ಘೋಷವಾಕ್ಯದೊಂದಿಗೆ ದಿನಾಂಕ ೨೪.೦೧.೨೦೨೪ರ ಬೆಳಿಗ್ಗೆ ೮.೩೦ ಗಂಟೆಗೆ ಬುಧವಾರ ಜಾಥಾವು ಕೊಪ್ಪಳದ ಬಾಲಕಿಯರ ಸರಕಾರಿ ಕಾಲೇಜಿನ ಮೈದಾನ(ತಾಲೂಕು ಕ್ರಿಡಾಂಗಣ) ದಿಂದ ಚಾಲನೆಗೊಂಡು ಆರಂಭವಾಗಿ ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಬದ ಮೂಲಕ ಶ್ರೀಗವಿಮಠದ ಜಾತ್ರಾ ಮಹಾದಾಸೋಹಕ್ಕೆ ತಲುಪಿ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯವಾಗಲಿದೆ.
ಸದರಿಕಾರ್ಯಕ್ರಮದ ನಿಮಿತ್ಯ ಸಂಸ್ಥಾನ ಶ್ರೀ ಗವಿಮಠ ಹಾಗೂ ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಕೊಪ್ಪಳ ಜಿಲ್ಲಾಡಳಿತ ಕೊಪ್ಪಳ ಇವರ ಸಹಯೋಗದೊಂದಿಗೆ ‘ಸ್ವಯಂ ಉದ್ಯೋಗದಿಂದ ಸ್ವಾವಲಂಬಿ ಬದುಕು’ ಎಂಬ ವಿಷಯದ ಮೇಲೆವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿ, ಸ್ಥಳೀಯ ಮಟ್ಟದಲ್ಲಿ ಆಯ್ಕೆಯಾಗಿಪ್ರಥಮ ಸ್ಥಾನ ಪಡೆದಸರಕಾರಿ/ಅನುದಾನಿತ/ಖಾಸಗಿ ಪ್ರೌಢಶಾಲೆ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ದಿನಾಂಕ ೧೩/೦೧/೨೦೨೪ ಬೆಳಿಗ್ಗೆ ೧೦.೩೦ ಗಂಟೆಗೆ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಶ್ರೀಗವಿಸಿದ್ಧೇಶ್ವರ ಪದವಿ ಪೂರ್ವಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಇದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ದಿನಾಂಕ ೨೪.೦೧.೨೦೨೪ ರಂದು ಶ್ರೀಮಠದ ಮಹಾದಾಸೋಹ ಮಂಟಪದಲ್ಲಿ ನಡೆಯುವ ಜಾಗೃತಿ ಜಾಥಾ ನಡಿಗೆಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು ಎಂದು ಗವಿಮಠ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ೯೭೪೨೩೦೭೧೫೩, ೯೯೮೬೫೯೧೦೭೬ಮೊಬೈಲ್ ನಂಬರುಗಳಿಗೆ ಸಂಪರ್ಕಿಸಲು ಕೋರಿದೆ.