cfb6253f-fe6c-4110-8b2d-42c858b72c2a

ಕಮಲಾಪುರ ಪುರಸಭೆ ದಿವ್ಯ ನಿರ್ಲಕ್ಷ

ನಿರ್ವಹಣೆ ಕಾಣದೆ ಪಾಳು ಬಿದ್ದಿರುವ ಡಾ.ಅಂಬೇಡ್ಕರ್ ಉದ್ಯಾನವನ..!

     ರಾಮು ಆಶ್ರೀತ್

ಹೊಸಪೇಟೆ (ವಿಜಯನಗರ) ೦೭-  ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆ ವ್ಯಾಪ್ತಿಗೆ ಬರುವ 1ನೇ ವಾರ್ಡಿನ ಜೈ ಭೀಮ್ ನಗರಕ್ಕೆ ಅಂಟಿಕೊಂಡಿರುವ ಡಾ.ಅಂಬೇಡ್ಕರ್ ಸಾರ್ವಜನಿಕ ಉದ್ಯಾನವನ 9 ವರ್ಷಗಳ ಕಾಲ ಬಾಗಿಲು ತೆರೆಯದೆ ಹಾಗೂ ಬೇಕಾಬಿಟ್ಟಿಯಾಗಿ ನಿರ್ವಹಣೆ ಮಾಡಿದ್ದರ ಹಿನ್ನೆಲೆಯಲ್ಲಿ ಪಾಳು ಬಿದ್ದ ಉದ್ಯಾನವನ ಅಧಿಕಾರಗಳ ದಿವ್ಯ ನಿರ್ಲಕ್ಷದಿಂದ ಸಾರ್ವಜನಿಕರಿಗೆ ಉಪಯೋಗಕ್ಕು ಭಾರದಂತಾಗಿದೆ.

ಸಾಮಾನ್ಯವಾಗಿ ಆಯಾ ಊರಿನ ಬಹುತೇಕ ಜನ ನೆಮ್ಮದಿಯಿಂದ ಇರಲು ಉದ್ಯಾನವನಗಳಿಗೆ ಮೊರೆಹೋಗುತ್ತಾರೆ.ಇನ್ನು ಸ್ವಲ್ಪ ಜನ ವಾಯುವಿಹಾರಕ್ಕಾಗಿ ಬೆಳಗಿನ ಜಾವ ಮತ್ತು ಸಾಯಂಕಾಲ ಉದ್ಯಾನವನಗಳಿಗೆ ಹೋಗುವುದು ಸಹಜ.ಮಕ್ಕಳಂತೂ ಸಾಯಂಕಾಲದ ಸಮಯ ಉದ್ಯಾನವನಗಳಲ್ಲಿ ಆಟವಾಡಲು. ತಡಪಡಿಸುತ್ತಾರೆ.

ಕಮಲಾಪುರದಿಂದ ದರೋಜಿ ಕರಡಿಧಾಮಕ್ಕೆ ಹೋಗುವ ರಸ್ತೆಯಲ್ಲಿರುವ ಸಾರ್ವಜನಿಕರ ಉದ್ಯಾನವನದ ಅಭಿವೃದ್ಧಿಗಾಗಿ ಮತ್ತು ಮಕ್ಕಳ ಆಟಿಕೆ ಸಾಮಾನುಗಳಿಗೆ ಹಿಂದಿನ ಪಟ್ಟಣ ಪಂಚಾಯಿತಿಯ ಅನುದಾನದಲ್ಲಿ ಸರಿ ಸುಮಾರು ಒಂದು ಕೋಟಿ ಹಣ ವೆಚ್ಚ ಮಾಡಿದ್ದರು ಕೂಡ ಪ್ರಯೋಜನವಾಗದೆ ಹಾಳು ಬಿದ್ದ ಪರಿಣಾಮ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಇತಿಹಾಸ ಹೊಂದಿರುವ ಕಮಲಾಪುರ ಪಟ್ಟಣದಲ್ಲಿ ಉದ್ಯಾನವನದ ಪ್ರವೇಶ ದ್ವಾರಕ್ಕೆ ಬೀಗ ಜಡಿದರೂ ರಾತ್ರಿ ಹೊತ್ತಿನಲ್ಲಿ ಮದ್ಯವ್ಯಸನಿಗಳು ತಂಡೋಪ ತಂಡವಾಗಿ ವಾಮ ಮಾರ್ಗದಲ್ಲಿ ಬಂದು ಮಧ್ಯ ಸೇವನೆ ಮಾಡುತ್ತಾರೆ.ಮಧ್ಯದ ಬಾಟಲಿಗಳು ಮತ್ತು ನೀರಿನ ಪಾಕೆಟ್ ಗಳು ಅಲ್ಲಲ್ಲಿ ಬಿದ್ದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಕಾಂಪೌಂಡ್ ನ ಸುತ್ತಮುತ್ತ ಬೇಲಿಯ ಗಿಡಗಳು ಬೆಳೆದು ಹಾವುಗಳ ಹಾವಳಿ ಜಾಸ್ತಿಯಾಗಿದೆ. ಒಳಗಡೆ ಗಿಡಗಂಟೆಗಳು ಬೆಳದಿವೆ, ಕುಳಿತುಕೊಳ್ಳಲು ಮಾಡಿರುವ ಸಿಮೆಂಟಿನ ಬೆಂಚುಗಳು ಮುರಿದಿವೆ, ಮಕ್ಕಳಿಗೆ ಆಟವಾಡಲು ಅಳವಡಿಸಿರುವ ಆಟಿಕೆ ಸಾಮಾನುಗಳ ಬಹುತೇಕ ಹಾಳಾಗಿವೆ, ವಾಕ್ ಮಾಡಲು ನಿರ್ಮಿಸಿದ ಹಂಚಿನ ರಸ್ತೆಯ ಟೈಲ್ಸ್ ಗಳು ರಸ್ತೆಯಿಂದ ಹೊರಬಿದ್ದೀವೆ. ಇದಲ್ಲದೆ ಊರಿನ ತ್ಯಾಜ್ಯಗಳ ರಾಶಿ ಎಲ್ಲಂದ್ರಲ್ಲೇ ತಂದು ಹಾಕಿರುವುದು ಮತ್ತು ಕಾಂಪೌಂಡಿಗೆ ಅಂಟಿಕೊಂಡಿರುವ ಸಾರ್ವಜನಿಕ ಶೌಚಾಲಯದ ದುರ್ವಾಸನೆಗೆ ಜನ ರೋಸಿಹೋಗಿದ್ದಾರೆ.

ಇನ್ನು ಮಕ್ಕಳ ಆಟಿಕೆ ಸಾಮಾನುಗಳಂತು ಒಂದಿದ್ರೆ ಒಂದಿಲ್ಲ,ನೀರು ಮತ್ತು ವಿದ್ಯುತ್ ವ್ಯವಸ್ಥೆ ಇಲ್ಲ, ಜೋಕಾಲಿ ಕಂಬವಿದೆ ತೊಟ್ಟಿಲುಗಳಿಲ್ಲ , ಜಾರುಬಂಡಿ ಹೀಗೆ ಹಲವಾರು ಕೊರತೆ ಇರುವ ಈ ಉದ್ಯಾನವನದ ಬಗ್ಗೆ ಕೇಳೋರಿಲ್ಲದಂತಾಗಿದೆ,ಈ ಹಿಂದೆ ಪಟ್ಟಣ ಪಂಚಾಯತಿ ಈಗ ಪುರಸಭೆ ಅಧಿಕಾರಿಗಳು ಗಮನ ಹರಿಸದ ಕಾರಣ ಸುಮಾರು 9 ವರ್ಷಗಳಿಂದ ಉದ್ಯಾನವನ ಆಟಕ್ಕಿಲ್ಲ ಲೆಕ್ಕಕ್ಕುಂಟು ಎನ್ನುವ ಹಾಗಾಗಿದೆ.

ಕಳೆದ 2021/ 22 ನೇ ಸಾಲಿನಲ್ಲಿ 10 ಲಕ್ಷ ಅನುದಾನ ಪಾರ್ಕ್ ಒಳಗಡೆ ವಾಯುವಿಹಾರದ ರಸ್ತೆ ಅಭಿವೃದ್ಧಿ ಪಡಿಸಲು ಹಣ ಬಿಡುಗಡೆಯಾಗಿದ್ದು ಈ ಕಾಮಗಾರಿಯನ್ನು 2023 ರಲ್ಲಿ ಕೈಗೆತ್ತಿಕೊಳ್ಳಲಾಯಿತು.ಈ ಕಾಮಗಾರಿಯ ಟೆಂಡರ್ ಪಡೆದ ಗುತ್ತಿಗೆದಾರ ನಬೀಸಾಬ್ ಕಳಪೆ ಕಾಮಗಾರಿ ಮಾಡಿದ್ದಾರೆಂದು ಹಾಗೂ ಕೆಲಸ ಪೂರ್ಣವಾಗದೆ ಪೂರ್ಣ ಬಿಲ್ ತೆಗೆದುಕೊಂಡಿದ್ದಾರೆ ಎಂದು ಅಲ್ಲಿನ ಜನ ಗಂಭೀರವಾಗಿ ಆರೋಪಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷದಿಂದ ಸರ್ಕಾರದ ಹಣ ಲಕ್ಷಗಟ್ಟಲೆ ಪೋಲಾಗಿದೆ ಮತ್ತು ಕಳಪೆ ಕಾಮಗಾರಿ ಆಗಿದೆ. ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರ ಜೊತೆಗೆ ಅಧಿಕಾರಿಗಳು ಕೈಜೋಡಿಸಿದ್ದಾರೆ, ಉದ್ಯಾನವನಕ್ಕೆ ಟೆಂಡರ್ ಆದ ಎಲ್ಲಾ ಕಾಮಗಾರಿಗಳು ತನಿಕೆ ಆಗಬೇಕು ತಪ್ಪಿಸ್ತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಜೈ ಭೀಮ್ ನಗರದ ಆಶ್ರಯ ಕಾಲೋನಿಯಲ್ಲಿರುವ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮರ್ಪಕ ನಿರ್ವಹಣಾ ಕೊರತೆಯಿಂದಾಗಿ ಉದ್ಯಾನವನದಲ್ಲಿ ಆಡಲು ಬರುವ ಮಕ್ಕಳು ಮತ್ತು ವಾಕಿಂಗ್ ಮಾಡಲು ಬರುವ ಹಿರಿಯ ನಾಗರಿಕರು ಗೇಟಿನ ಹೊರಗಡೆ ನಿಂತು ನೋಡುವ ದುಸ್ಥಿತಿ ಒದಗಿ ಬಂದಿದೆ. ಇನ್ನು ಯಾವಾಗ ಇದು ನಮಗೆ ಆಟವಾಡಲು ಸಿಗುತ್ತದೆ ಎಂದು ಮಕ್ಕಳು ಬಕಪಕ್ಷಿಯಂತೆ ಕಾಯುತ್ತಿದ್ದಾರೆ.

ಈ ಸಂಬಂಧ ಡಾ. ಅಂಬೇಡ್ಕರ್ ಉದ್ಯಾನವನದಲ್ಲಿ ವಾಯು ವಿಹಾರಕ್ಕಾಗಿ ರಸ್ತೆ, ಮಕ್ಕಳ ಆಟಿಕೆ ಸಾಮಾನು, ಸಾಮಾನ್ಯ ವ್ಯಾಯಾಮ ಮಾಡುವ ಸಾಮಗ್ರಿ, ಕುಳಿತುಕೊಳ್ಳುವ ಆಸನಗಳು, ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಹಲವಾರು ಸೌಕರ್ಯಗಳನ್ನು ಒದಗಿಸಬೇಕು ಹಾಗೂ ಕಮಲಾಪುರದ ಸೌಂದರ್ಯ ಹೆಚ್ಚಿಸಲು ಅಧಿಕಾರಿಗಳು ಪ್ರೋತ್ಸಾಹಿಸಬೇಕು,ಎಂದು ಅಲ್ಲಿನ ನಿವಾಸಿ ಶ್ರೀನಿವಾಸ ಹಂಪಿ ಇಂಟರ್ನ್ಯಾಷನಲ್ ಗೈಡ್ ಮತ್ತು ಸಾರ್ವಜನಿಕರು ಪ್ರಜಾವಾಹಿಣಿಗೆ ತಿಳಿಸಿದರು.

ಈ ಸಂಬಂಧ ಪುರಸಭೆಯ ಮುಖ್ಯ ಅಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ ಈಗಾಗಲೇ ನಾವು 15ನೇ ಹಣಕಾಸು ಯೋಜನೆಯ ಹಣದಲ್ಲಿ ಉದ್ಯಾನವನ ಅಭಿವೃದ್ಧಿ ಪಡಿಸುವ ಸಲುವಾಗಿ ಟೆಂಡರ್ ಕರೆಯಲು ಎಸ್ಟಿಮೇಟ್ ಮಾಡಿದ್ದೇವೆ, ಜಿಲ್ಲಾಧಿಕಾರಿ ಅನುಮೋದನೆ ಸಿಕ್ಕ ಕೂಡಲೇ ಕೆಲಸ ಪ್ರಾರಂಭ ಮಾಡುತ್ತೇವೆ,ಇನ್ಮುಂದೆ ಯಾವುದೇ ಅಡಚಣೆ ಇಲ್ಲದೆ ಉದ್ಯಾನವನ ಸಮರ್ಪಕವಾಗಿ ನಿರ್ವಹಿಸುತ್ತೇವೆ ಎನ್ನುವ ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!