IMG-20261128-WA0011

ಕೆ.ಕೆ.ಅರ್.ಡಿ.ಬಿ. ಅಧ್ಯಕ್ಷರಾಗಿ ಬಸನಗೌಡ ದದ್ದಲ್‌ ಅಧಿಕಾರ ಸ್ವೀಕಾರ

ಮಂಡಳಿ ಬಲವರ್ಧನೆಗೆ ಅದ್ಯತೆ, ಹೈನುಗಾರಿಕೆಗೆ ಒತ್ತು

ಕಲಬುರಗಿ,ನ. 28 –  ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ರಾಜ್ಯ ಸರ್ಕಾರ ವಾರ್ಷಿಕ ನೀಡುವ 5,000 ಕೋಟಿ ರೂ. ಹಣವನ್ನು ಸಕಾಲದಲ್ಲಿ ಖರ್ಚು ಮಾಡಿ ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಮುಗಿಸುವುದು ತಮ್ಮ ಅದ್ಯತೆಯಾಗಿದೆ ಎಂದು ಮಂಡಳಿಯ ನೂತನ‌ ಅಧ್ಯಕ್ಷ ಬಸನಗೌಡ ದದ್ದಲ್ ತಿಳಿಸಿದರು.

ಶನಿವಾರ ಇಲ್ಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಚೇರಿಯಲ್ಲಿ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡಳಿಗೆ ಹಣದ ಕೊರತೆ ಇಲ್ಲ. ಹಣ ಖರ್ಚು ಮಾಡಲು ಸಿಬ್ಬಂದಿಗಳ ಕೊರತೆ ಇದ್ದು, ಸಿಬ್ಬಂದಿಗಳ ಭರ್ತಿ ಮಾಡಿ ಮಂಡಳಿ ಬಲವರ್ಧನೆ ಮಾಡಲಾಗುವುದು ಎಂದ ಅವರು, ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಗೆ ತಮ್ಮ ಅವಧಿಯಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು ಎಂದು ನೂತನ ಅಧ್ಯಕ್ಷರು ತಿಳಿಸಿದರು.

ಹಿಂದುಳುವಿಕೆಯ ಈ ಭಾಗವನ್ನು ಅಭಿವೃದ್ಧಿಪಡಿಸಲು ವಿಶೇಷವಾಗಿ ಉದ್ಯೋಗ, ಶಿಕ್ಷಣ, ಮೂಲಸೌಕರ್ಯ ಅಭಿವೃದ್ಧಿ ನಿಟ್ಟಿನಲ್ಲಿ371ಜೆ ಅನ್ವಯ ರಚನೆಗೊಂಡ ಮಂಡಳಿಯಿಂದ‌ ಸಾಕಷ್ಡು ಅಭಿವೃದ್ದಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಹಿಂದಿನ ಅಧ್ಯಕ್ಷರಾದ ಡಾ.ಅಜಯ್ ಸಿಂಗ್ ಅವರು ಅಕ್ಷರ ಆವಿಷ್ಕಾರ, ಆರೋಗ್ಯ ಆವಿಷ್ಕಾರದಂತಹ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪಕ್ಷ ಮತ್ತು ಸರ್ಕಾರ ತಮ್ಮ ಮೇಲೆ‌ ವಿಶ್ವಾಸ ಇಟ್ಟು ಈ ಹುದ್ದೆ ನೀಡಿದ್ದು, ಪ್ರದೇಶದ ಎಲ್ಲಾ ಸಚಿವರು, ಶಾಸಕರು, ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವೆ ಎಂದು ರಾಯಚೂರು ಗ್ರಾಮೀಣ ಶಾಸಕರಾಗಿರುವ ಬಸನಗೌಡ ದದ್ದಲ್‌ ತಿಳಿಸಿದರು.

ಕೇಂದ್ರ ಮ್ಯಾಚಿಂಗ್ ಗ್ರ್ಯಾಂಟ್ ನೀಡಲಿ:ಕೆ.ಕೆ.ಆರ್.ಡಿ.ಬಿ. ಮಂಡಳಿಗೆ ನಮ್ಮ ಸರ್ಕಾರ ಪ್ರತಿ ವರ್ಷ 5,000 ಕೋಟಿ ರೂ. ಅನುದಾನ ಪ್ರದೇಶದ ಅಭಿವೃದ್ಧಿಗೆ ಕಟಿಬದ್ದವಾಗಿದೆ. ಆದರೆ ಸಂವಿಧಾನಕ್ಕೆ ವಿಶೇಷ ತಿದ್ದುಪಡಿ ತಂದು ರಚನೆಯಾದ ಮಂಡಳಿಗೆ ರಾಜ್ಯ ಸರ್ಕಾರದ ಮಾದರಿಯಲ್ಲಿಯೇ ಕೇಂದ್ರ ಸರ್ಕಾರ ಸಹ 5,000 ಕೋಟಿ ರೂ. ಮ್ಯಾಚಿಂಗ್ ಗ್ರ್ಯಾಂಟ್‌ ನೀಡಬೇಕೆಂದು ಬಸನಗೌಡ ದದ್ದಲ್ ಒತ್ತಾಯಿಸಿದರು.

ನೂತನ ಅಧ್ಯಕ್ಷರಿಗೆ ಶುಭ ಕೋರಿದ ಸಚಿವರು, ಶಾಸಕರು: ನೂತನ‌ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಸನಗೌಡ ದದ್ದಲ್ ಅವರಿಗೆ ರಾಜ್ಯದ ಗೃಹ, ಐ.ಟಿ-ಬಿ-ಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಕೆ.ಕೆ.ಆರ್.ಡಿ.ಬಿ‌ ಮಂಡಳಿ ಕಾರ್ಯದರ್ಶಿ ನಲಿನ್ ಅತುಲ್ ಅದಿಯಾಗಿ ಅನೇಕ ಗಣ್ಯರು ಹೂಗುಚ್ಚ ನೀಡಿ ಶುಭಕೋರಿದರು.

ಈ ಸಂದರ್ಭದಲ್ಲಿ ಕರ್ನಾಟ‌ಕ ರೇಷ್ಮೆ ಉದ್ಯಮಗಳ ನಿಯಮಿತದ ಅಧ್ಯಕ್ಷರಾದ ಖನೀಜ್ ಫಾತಿಮಾ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ.ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕುಡಾ ಅಧ್ಯಕ್ಷ ಮಜಹರ್ ಆಲಂ ಖಾನ್, ಕರ್ನಾಟಕ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೆಮೂದ್ ಚಿಸ್ತಿ, ಕೆ.ಕೆ.ಆರ್.ಟಿ.ಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಕಲಬುರಗಿ ಜಿಲ್ಲಾಧಿಕಾರಿ ಇಕ್ರಂ ಶರೀಫ್ , ಕೆ.ಕೆ.ಅರ್.ಡಿ.ಬಿ ಮಂಡಳಿ ಉಪ ಕಾರ್ಯದರ್ಶಿ ಅವಿನಾಶ ಶಿಂಧೆ ಇದ್ದರು.

Leave a Reply

Your email address will not be published. Required fields are marked *

error: Content is protected !!