
ಜನಸ್ಪಂದನ ಕಾರ್ಯಕ್ರಮ : ಕಡ್ಡಾಯ ಹಾಜರಾತಿಗೆ ಅಧಿಕಾರಿಗಳಿಗೆ ಸೂಚನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 25- ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದಂತೆ ಜಿಲ್ಲೆಯಲ್ಲಿನ ಸಾರ್ವಜನಿಕರ ಕುಂದು-ಕೊರತೆಗಳನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಜೂನ್ 26 ರ ಬುಧವಾರದಂದು ಜಿಲ್ಲೆಯ ಕನಕಗಿರಿಯಲ್ಲಿ ತಾಲ್ಲೂಕು ಮಟ್ಟದ ಜನ ಸ್ಪಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಎಲ್ಲ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಜನ ಸ್ಪಂದನಾ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಜಿಲ್ಲಾಧಿಕಾರಿಗಲಾದ ನಲಿನ್ ಅತುಲ್ ಅವರು ಸೂಚಿಸಿದ್ದಾರೆ.
ಜೂ.26 ರಂದು ಕನಕಗಿರಿಯ ಬಸ್ ನಿಲ್ದಾಣದ ಹತ್ತಿರದ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10 ಗಂಟೆಯಿAದ ಸಂಜೆ 05.30 ಗಂಟೆಯವರೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಜಂಟಿಯಾಗಿ ಜನ ಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜನ ಸ್ಪಂದನಾ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಆಯೋಜಿಸಿ ಸಾರ್ವಜನಿಕರಿಗೆ ಅದರ ಫಲಿತಾಂಶವನ್ನು ಒದಗಿಸುವ ನಿಟ್ಟಿನಲ್ಲಿ ಅಂದು ಜನ ಸ್ಪಂದನಾ ಕೋಶ/ವಿಭಾಗದ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ತಪ್ಪದೇ ಹಾಜರಾಗಬೇಕು. ಒಂದು ವೇಳೆ ಗೈರು ಹಾಜರಾದಲ್ಲಿ ಅಂತವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.