ಜಿಲ್ಲೆಯ ಮೂವರು ಸಾಧಕರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 31- ರಾಜ್ಯಕ್ಕೆ ಕರ್ನಾಟಕ ನಾಮಕರಣವಾಗಿ ಐವತ್ತು ವರ್ಷದ ಸಂಭ್ರಮದಲ್ಲಿರುವಾಗ ರಾಜ್ಯೋತ್ಸವ ಪ್ರಶಸ್ತಿ ನೀಡುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿಯವರ ತವರು ಕೊಪ್ಪಳ ಜಿಲ್ಲೆಯ ಮೂವರು ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಂಗಳವಾರ ಸರಕಾರ ರಾಜ್ಯೋತ್ಸವ ಪ್ತಶಸ್ತಿಗೆ ಆಯ್ಕೆಯಾದವರ ಪಟ್ಟಿ ಪ್ರಕಟಿಸಿದಾಗ ಜಿಲ್ಲೆಯ ಮೂವರು ಪ್ರಶಸ್ತಿಗೆ ಆಯ್ಕೆ ಆಗಿದ್ದು ತಿಳಿದು ಅರ್ಹರಿಗೆ ಸಂದ ಗೌರವ ಎಂದು ಖುಷಿ ಪಟ್ಟಿದ್ದಾರೆ.
ಕೊಪ್ಪಳ ತಾಲೂಕಿನ ಕುಣಿಕೇರಿಯ ಶಾಲೆಗೆ ಎರಡು ಎಕರೆ ಭೂಮಿ ದಾನ ಮಾಡಿದ ಹುಚ್ಚಮ್ಮ ಚೌದ್ರಿ, ತಾಲೂಕಿನ ಮೊರನಾಳನ ತೊಗಲು ಬೊಂಬೆಯಾಟದ ಕಲಾವಿದ ಕೇಶಪ್ಪ ಶಿಳ್ಳೆಕ್ಯಾತರ, ಕಾರಟಗಿ ತಾಲೂಕಿನ ಸಿದ್ದಾಪುರದ ಹಗಲು ವೇಷ ಕಲಾವಿದ ಗುಂಡಪ್ಪ ವಿಭೂತಿಯವರು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹುಚ್ಚಮ್ಮ ಚೌದ್ರಿ : ಕೊಪ್ಪಳ ಹತ್ತಿರದ ಕುಣಿಕೇರಿಯ ಮಕ್ಕಳಿಲ್ಲದ ಅಜ್ಜಿ ಹುಚ್ಚಮ್ಮ ಅಕ್ಷರ ಕಲಿಯುವ ಮಕ್ಕಳಿಗಾಗಿ ಶಾಲೆ ನಿರ್ಮಾಣಕ್ಕೆ 30 ವರ್ಷಗಳ ಹಿಂದೆ 1 ಎಕರೆ ಭೂಮಿ ದಾನ ಮಾಡಿದ್ದರು.
20 ವರ್ಷಗಳ ಹಿಂದೆ ಸರಕಾರಿ ಶಾಲೆಯಲ್ಲಿ ಬಿಸಿ ಊಟ ಆರಂಭವಾದಾಗ ಮತ್ತೊಂದು ಎಕರೆ ಭೂಮಿ ದಾನ ಮಾಡಿದರು. ನಂತರ ಅದೇ ಶಾಲೆಯಲ್ಲಿ ಬಿಸಿ ಊಟ ಅಡುಗೆಯವರಾಗಿ ಕೆಲಸ ಮಾಡಿದರು. ಅರವತ್ತು ವರ್ಷ ಆದ ನಿಮಿತ್ಯ ಅಜ್ಜಿ ಆ ಕೆಲಸದಿಂದ ನಿವೃತ್ತಿ ಆದರು.
ಈಗ ಹೊಲಕ್ಕೆ ಹೋಗಲು ಆಗದಿದ್ದಾಗ ಶಾಲೆಗೆ ಹೋಗಿ ಅಲ್ಲಿದ್ದು ಮಕ್ಕಳ ಆಟ ಪಾಠ ನೋಡಿ ಖುಷಿ ಪಡುತ್ತಾರೆ. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಗೆ ಸ್ವಲ್ಪ ಹೊತ್ತಿನ ಮುಂಚೆ ಶಾಲೆಯ ಬಿಸಿ ಊಟದ ಕೋಣೆಯ ಮುಂದೆ ಕುಳಿತಿದ್ದರು. ಪ್ರಶಸ್ತಿ ಘೋಷಣೆ ಕೇಳಿ ಖುಷಿ ಆಗಿದೆ ಎಂದು ಅಜ್ಜಿ ಪ್ರತಿಕ್ರಿಯಿಸಿದರು.
ಕೇಶಪ್ಪ ಶಿಳ್ಳೆಕ್ಯಾತರ : ಕೊಪ್ಪಳ ತಾಲೂಕಿನ ಮೊರನಾಳ ಗ್ರಾಮದ ತೊಗಲು ಗೊಂಬೆ ಆಟ ಕಲಾವಿದರಾದ ಕೇಶಪ್ಪ ಶಿಳ್ಳೆಕ್ಯಾತರ
ಪುರಾತನ ಕಲೆ ತೊಗಲು ಗೊಂಬೆ ಆಟ ಕಲೆಯನ್ನು ಚಿಕ್ಕ ವಯಸ್ಸಿನಿಂದ ಅಪ್ಪಿಕೊಂಡು ಪೋಷಿಸಿಕೊಂಡು ಬಂದಿರುವ ಕೇಶಪ್ಪ ಅವರು ಹಳ್ಳಿಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ತೊಗಲು ಗೊಂಬೆ ಪ್ರದರ್ಶಿಸಿ ದೇಶಕ್ಕೂ ಹೆಮ್ಮೆ ತಂದವರು.
ಹಂಪಿ ಆನೆಗೊಂದಿ ಧಾರವಾಡ ಕನಕಗಿರಿ ಕಿತ್ತೂರು ಉತ್ಸವ ಮೈಸೂರು ದಸರಾ ಮಹೋತ್ಸವ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ತೊಗಲು ಗೊಂಬೆ ಕಲೆ ಪ್ರದರ್ಶಿಸಿದ್ದಾರೆ.
ಅಲ್ಲದೆ ಅಮೇರಿಕ ಪ್ಯಾರಿಸ್ ಸ್ವಿಜರ್ಲೆಂಡ್ ಐಲೆಂಡ್ ಸೇರಿದಂತೆ ಹಲವಾರು ದೇಶಗಳಲ್ಲಿ ತೊಗಲು ಗೊಂಬೆ ಕಲೆ ಪ್ರದರ್ಶಿಸಿ ಕಲೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿಕೊಟ್ಟಿದ್ದಾರೆ.
ಹಗಲುವೇಷ ಗುಂಡಪ್ಪ ವಿಭೂತಿ
ಹಗಲುವೇಷ ಕಲಾವಿದರಾಗಿ ಆರು ದಶಕಗಳಿಂದ ಕೆಲಸ ಮಾಡುತ್ತಿರುವ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಗುಂಡಪ್ಪ ವಿಭೂತಿ ಅವರ ಪ್ರತಿಭೆಗೆ ರಾಜ್ಯೋತ್ಸವ ಗೌರವ ಲಭಿಸಿದೆ.
ಅಲೆಮಾರಿಯ ಬುಡ್ಗಜಂಗಮ ಸಮುದಾಯದ ಗುಂಡಪ್ಪ ಹಗಲುವೇಷದ ರೂಪಕಗಳಲ್ಲಿ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಿನ್ನೆಲೆಯುಳ್ಳ ಈ ಸಂಪ್ರದಾಯವನ್ನು ಉಳಿಸುವ ಹಾಗೂ ಬೆಳೆಸುವ ಕೆಲಸವನ್ನು ಮಾಡುತ್ತಿದ್ದಾರೆ. ಹಗಲುವೇಷ ಕಲೆಯ ಜೊತೆಗೆ ಜನಪದ ಹಾಡು, ತತ್ವಪದ, ದಾಸರ ಪದ, ಭಕ್ತಿಗೀತೆ, ಭಾವಗೀತೆ ಮತ್ತು ವಚನ ಗಾಯನದ ಮೂಲಕವೂ ಹೆಸರು ಮಾಡಿದ್ದಾರೆ.
ವಂಶಪರಂಪರೆಯಿಂದ ಹಗಲುವೇಷ ಕಲೆಯಲ್ಲಿ ತೊಡಗಿಕೊಂಡಿರುವ ಅವರು ಹಾರ್ಮೋನಿಯಂ, ತಬಲಾ, ದಮ್ಮಡಿ, ತಾಳ, ರಾಗಮಾಲೆ ಹೀಗೆ ಬೇರೆ ಬೇರೆ ಕಲೆಗಳ ಮೂಲಕವೂ ಗಮನ ಸೆಳೆದಿದ್ದಾರೆ.
ಸಿದ್ದಾಪುರದ ಮಲ್ಲಿಕಾರ್ಜುನ ನಗರದಲ್ಲಿ ತಮ್ಮ ಹೆಸರಿನಲ್ಲಿ ಟ್ರಸ್ಟ್ ಮಾಡಿಕೊಂಡಿರುವ ಅವರು ಹೊಸ ತಲೆಮಾರಿನ ಜನರಿಗೆ ಈ ಕಲೆಯನ್ನು ಹೇಳಿಕೊಡುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇವರ ಕಲೆಯನ್ನು ಆಧರಿಸಿ ಶೂರ್ಪನಖಿ ಗರ್ವಭಂಗ, ಸುಂದೋಪ ಸುಂದರರು, ಮೋಹಿನಿ ಭಸ್ಮಾಸುರ, ಭೀಮಾಂಜನೇಯ ಯುದ್ಧ ಎನ್ನುವ ಕಿರುಚಿತ್ರಗಳು ನಿರ್ಮಾಣವಾಗಿವೆ. ಕರ್ನಾಟಕ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಲ್ಲಿ ಗುಂಡಪ್ಪ ವಿಭೂತಿ ಕಲಾ ಪ್ರದರ್ಶನ ನೀಡಿದ್ದಾರೆ.
ಕೇಶಪ್ಪ ಶಿಳ್ಳೆಕ್ಯಾತರ
ಕೊಪ್ಪಳ ತಾಲೂಕಿನ ಮೊರನಾಳ ಗ್ರಾಮದ ತೊಗಲು ಗೊಂಬೆ ಆಟ ಕಲಾವಿದರಾದ ಕೇಶಪ್ಪ ಶಿಳ್ಳೆಕ್ಯಾತರ ಪುರಾತನ ಕಲೆ ತೊಗಲು ಗೊಂಬೆ ಆಟ ಕಲೆಯನ್ನು ಚಿಕ್ಕ ವಯಸ್ಸಿನಿಂದ ಅಪ್ಪಿಕೊಂಡು ಪೋಷಿಸಿಕೊಂಡು ಬಂದಿರುವ ಕೇಶಪ್ಪ ಅವರು ಹಳ್ಳಿಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ತೊಗಲು ಗೊಂಬೆ ಪ್ರದರ್ಶಿಸಿ ದೇಶಕ್ಕೂ ಹೆಮ್ಮೆ ತಂದವರು.
ಹಂಪಿ ಆನೆಗೊಂದಿ ಧಾರವಾಡ ಕನಕಗಿರಿ ಕಿತ್ತೂರು ಉತ್ಸವ ಮೈಸೂರು ದಸರಾ ಮಹೋತ್ಸವ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ತೊಗಲು ಗೊಂಬೆ ಕಲೆ ಪ್ರದರ್ಶಿಸಿದ್ದಾರೆ.
ಅಲ್ಲದೆ ಅಮೇರಿಕ ಪ್ಯಾರಿಸ್ ಸ್ವಿಜರ್ಲೆಂಡ್ ಐಲೆಂಡ್ ಸೇರಿದಂತೆ ಹಲವಾರು ದೇಶಗಳಲ್ಲಿ ತೊಗಲು ಗೊಂಬೆ ಕಲೆ ಪ್ರದರ್ಶಿಸಿ ಕಲೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿಕೊಟ್ಟಿದ್ದಾರೆ ಒಟ್ಟಿನಲ್ಲಿ ಉಸ್ತುವಾರಿ ಸಚಿವರ ತವರು ಜಿಲ್ಲೆಗೆ ಭರಪೂರ ಕೊಡುಗೆ ಸಿಕ್ಕಿದೆ.