
ಹೈಲೈಟ್ಸ್:
ಕೊಪ್ಪಳ ಲೋಕಸಭಾ ಟಿಕೆಟ್‌ಗೆ ಒಳಗೊಳಗೆ ಸ್ಪರ್ಧೆ
ಕೊಪ್ಪಳ ಕಾಂಗ್ರೆಸ್‌ನಲ್ಲಿ ಗರಿಗೆದರಿದ ಚಟುವಟಿಕೆ, ಬಯ್ಯಾಪುರ, ಹಿಟ್ನಾಳ್ ರೇಸ್!
ಬಿಜೆಪಿಯಲ್ಲಿಯೂ ಹೆಚ್ಚುತ್ತಿರುವ ಪೈಪೋಟಿ, ಮೈತ್ರಿಯಿಂದ ಯಾರಿಗೆ ಲಾಭ-ನಷ್ಟ?
ಲೋಕಸಭೆ ಚುನಾವಣೆಗೆ ಇನ್ನೇನು 6 ತಿಂಗಳು ಬಾಕಿ ಉಳಿದಿರುವ ಬೆನ್ನಲ್ಲೆ ಕಾಂಗ್ರೆಸ್ ಮತ್ತು ಬಿಜೆಪಿ ಪಡಸಾಲೆಯಲ್ಲಿ ಟಿಕೆಟ್‌ಗೆ ಒಳಗೊಳಗೆ ಬಿರುಸಿನ ಸ್ಪರ್ಧೆ ನಡೆದಿದೆ. ಕೈ ಪಡೆಯಿಂದ ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್ ತುರುಸಿನ ಪೈಪೋಟಿ ನಡೆಸಿದ್ದಾರೆ. ಸಹೋದರ, ಶಾಸಕ ರಾಘವೇಂದ್ರ ಹಿಟ್ನಾಳ್ ಜತೆಗೆ ಈಚೆಗೆ ದಿಲ್ಲಿಗೆ ತೆರಳಿ ಟಿಕೆಟ್‌ಗೆ ಲಾಬಿ ನಡೆಸಿದ್ದಾರೆ. ಜತೆಗೆ ಕೊಪ್ಪಳ, ಯಲಬುರ್ಗಾ, ಕುಷ್ಟಗಿ, ಕನಕಗಿರಿ, ಗಂಗಾವತಿ, ಸಿರುಗುಪ್ಪ, ಮಸ್ಕಿ, ಸಿಂಧನೂರು ವಿಧಾನಸಭೆ ಕ್ಷೇತ್ರ ಹೊಂದಿರುವ ಕೊಪ್ಪಳ ಲೋಕಸಭಾ ಕ್ಷೇತ್ರದ್ಯಾಂತ ಸದ್ದಿಲ್ಲದೇ ಓಡಾಡುತ್ತಿದ್ದಾರೆ.
ಕುಷ್ಟಗಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪೂರ ಅವರು ಕೈ ಟಿಕೆಟ್ ಮೇಲೆ ಕಣ್ಣಿಟ್ಟು ಮುಖಂಡರು, ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಕೈ ಟಿಕೆಟ್‌ಗಾಗಿ ರಾಜಶೇಖರ ಹಿಟ್ನಾಳ್ ಮತ್ತು ಅಮರೇಗೌಡರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅಲ್ಲದೆ, ಅಮರೇಗೌಡರು ಎಲ್ಲೆಲ್ಲಿ ಭೇಟಿ ನೀಡುತ್ತಿದ್ದಾರೆಯೋ, ಅಲ್ಲಿಗೆ ತಪ್ಪದೆ ಹೋಗಿ ರಾಜಶೇಖರ ಹಿಟ್ನಾಳ್ ಕೂಡ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ಪ್ರಮುಖವಾಗಿ ತಮ್ಮ ಕುಟುಂಬದ ಮೇಲೆ ಅಸಮಾಧಾನಗೊಂಡಿರುವವರ ಮನೆಗೆ ತೆರಳಿ ಸಮಾಧಾನಪಡಿಸುವ ಪ್ರಯತ್ನವನ್ನು ಜೋರಾಗಿ ಮಾಡುತ್ತಿದ್ದಾರೆ.