
ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಸಹಿ ಸಂಗ್ರಹ ಅಭಿಯಾನ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,25- ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದಿಂದ ಇದೇ 28 ರಂದು ನಡೆಯುವ ಪ್ರತಿಭಟನಾ ಧರಣಿಗೆ ಪೂರಕವಾಗಿ ಪಕ್ಷದ ಕಂಟೋನ್ಮೆಂಟ್ – ಕುಡತಿನಿ ಸ್ಥಳೀಯ ಸಮಿತಿ ವತಿಯಿಂದ ಇಂದು ಕೌಲ್ ಬಜಾರ್ ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಯಿತು.
SUCI ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಕಾಮ್ರೆಡ್ ಎಂ.ಎನ್. ಮಂಜುಳಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳೇ ಕಳೆದಿವೆ. ಹಲವಾರು ಚುನಾವಣೆಗಳನ್ನು, ಪಕ್ಷಗಳ ಆಡಳಿತವನ್ನು ಜನತೆ ಕಂಡಿದ್ದಾರೆ. ಆದರೆ ಪ್ರತಿಬಾರಿಯೂ ನಿರಾಸೆಯೇ ಜನಗಳ ಪಾಲಿಗೆ ಕಟ್ಟಿಟ್ಟ ಬುತ್ತಿಯಾಗಿದೆ. ಅಚ್ಛೇ ದಿನದ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಜನಗಳಿಗೆ ಕೊಟ್ಟಿದ್ದು ಮಾತ್ರ ನರಕರ ದಿನಗಳನ್ನೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳು ಸೇರಿದಂತೆ ಹಲವಾರು ಸಾರ್ವಜನಿಕ ಕ್ಷೇತ್ರಗಳನ್ನು ಕಾರ್ಪೊರೇಟ್ ಮಾಲೀಕರ ಕೈಗಿಟ್ಟು ಅವರ ಪ್ರಧಾನ ಸೇವಕನಾಗಿ ಕೆಲಸ ಮಾಡುತ್ತಿದೆ.
ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಭರ್ತಿಯಾಗುತ್ತಿಲ್ಲ, ಅಗತ್ಯ ವಸ್ತುಗಳ ಬೆಲೆಗಳು ಏರುತ್ತಲೇ ಇವೆ, ರೈತರಿಗೆ ಕನಿಷ್ಠ ಬೆಂಬಲ ಬೆಲೆ ಜಾರಿ ಮಾಡುತ್ತಿಲ್ಲ, ಮಹಿಳೆಯರು ಹಾಗೂ ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೇವಲ ಚುನಾವಣಾ ಜುಮ್ಲಾಗಳಲ್ಲೇ ಜನಗಳನ್ನು ತೇಲಾಡಿಸುತ್ತಿದೆ. ಇಂತಹ ಸಂದರ್ಭದಲ್ಲಿ ಜನತೆ ಚುನಾವಣೆ ಭ್ರಮೆಯಲ್ಲಿ ಕೊಚ್ಚಿ ಹೋಗದೆ ಸತ್ಯ ಅರ್ಥ ಮಾಡಿಕೊಂಡು ಪ್ರಬಲ ಹೋರಾಟಕ್ಕೆ ಸಿದ್ಧರಾಗಬೇಕು. ಅದೊಂದೇ ಜನತೆಯ ಮುಂದಿರುವ ದಾರಿ” ಎಂದು ಹೇಳಿದರು.
ನಂತರ SUCI ಕಮ್ಯುನಿಸ್ಟ್ ಪಕ್ಷದ ಇನ್ನೋರ್ವ ಜಿಲ್ಲಾ ಸಮಿತಿ ಸದಸ್ಯರಾದ ಕಾಮ್ರೆಡ್ ಎ. ದೇವದಾಸ್ ಮಾತನಾಡಿ “ರಾಜ್ಯ ಸರ್ಕಾರವು ಕೂಡ ಕೇವಲ ಗ್ಯಾರಂಟಿಗಳ ಬಂಡವಾಳ ಇಟ್ಟುಕೊಂಡು ಆಡಳಿತ ಮಾಡುತ್ತಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದೆ, ನರೇಗಾ ಯೋಜನೆ ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ, ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರಿಗೆ ಸರಿಯಾದ ವೇತನ ಇಲ್ಲ. ಇಂತಹ ಹಲವಾರು ಸಮಸ್ಯೆಗಳಿಗೆ ಜನಗಳು ತುತ್ತಾಗಿದ್ದಾರೆ.
ಇಲ್ಲಿ ಜನತೆಯ ಕಷ್ಟಗಳಿಗೆ ಧ್ವನಿಯಾಗಿರುವ SUCI ಕಮ್ಯುನಿಸ್ಟ್ ಪಕ್ಷ ದೇಶವ್ಯಾಪಿ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳುವುದರ ಮೂಲಕ ಇಂತಹ ಹಲವಾರು ಸಮಸ್ಯೆಗಳ ವಿರುದ್ಧ ಹೋರಾಟ ಗಳನ್ನು ಕಟ್ಟುತ್ತಿದೆ. ಬಳ್ಳಾರಿಯಲ್ಲಿಯು ಕೂಡ ಇದೇ 28 ರಂದು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಂಡಿದೆ. ಇಂತಹ ಹೋರಾಟಗಳಲ್ಲಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಬಂಡವಾಳಶಾಹಿ ಪರವಾದ ಈ ವ್ಯವಸ್ಥೆಯನ್ನು ಕಿತ್ತೊಗೆದು ಸಮಾಜವಾದಿ ಸಮಾಜವನ್ನು ತರಲು ಎಲ್ಲಾ ದಮನಿತ ಜನತೆ ಒಂದಾಗಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಸದಸ್ಯರು ಎ.ಶಾಂತ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಸುರೇಶ್, ಗುರಳ್ಳಿ ರಾಜ, ರವಿಕಿರಣ್, ಈರಣ್ಣ , ಅನುಪಮಾ, ಉಮಾ, ಪ್ರಮೋದ್ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.