ವೀಣಾ ಪಾಟೀಲ್

ನಿವೃತ್ತರೇ ಗಮನಿಸಿ…ಪ್ರವೃತ್ತಿಗೆ ಇದು ಸಕಾಲ : ವೀಣಾ ಪಾಟೀಲ್‌

ಕರುನಾಡ ಬೆಳಗು ಸುದ್ದಿ

ಪ್ರತಿ ವರ್ಷ ಜೂನ್ ತಿಂಗಳು ಬಂತೆಂದರೆ ಸಾಲು ಸಾಲಾಗಿ ಹುಟ್ಟು ಹಬ್ಬಗಳ ಆಚರಣೆ. ಅದೂ ಜೂನ್ ತಿಂಗಳ ಮೊದಲನೇ ದಿನವೇ ಹೆಚ್ಚಾಗಿ. ಈ ಸಾಲು ಸಾಲು ಹುಟ್ಟುಹಬ್ಬಗಳ ಹಿಂದಿನ ಗುಟ್ಟೇನು ? ಮತ್ತೇನೂ ಇಲ್ಲ.ಅಂದು ವಾರ, ತಿಥಿ, ನಕ್ಷತ್ರಗಳ ಮೂಲಕ ದಿನಗಳನ್ನು ಗೊತ್ತು ಪಡಿಸುತ್ತಿದ್ದ ಕಾಲ. ಅಮಾವಾಸ್ಯೆಗೆ 3 ದಿನ ಮುಂಚೆ,ಹುಣ್ಣಿವೆಗೆ 4 ದಿನ ಹಿಂದೆ, ಬಸವ ಜಯಂತಿ,ಎಳ್ಳಮಾಸೆ ಹೀಗೆ ತಮ್ಮಮಕ್ಕಳ ಹುಟ್ಟುಹಬ್ಬ,ವಿಶೇಷ ದಿನಗಳನ್ನು,ಹಿರಿಯರ ಸಾವುಗಳನ್ನ ಗುರುತಿಸುತ್ತಿದ್ದ ಕಾಲ.ಆಗಿನ ಕಾಲದ ಮಕ್ಕಳನ್ನು ಶಾಲಾ ಪ್ರವೇಶಾತಿಗೆ ದಾಖಲು ಮಾಡಿಕೊಳ್ಳುತ್ತಿದ್ದ ಸಮಯದಲ್ಲಿ ಶಿಕ್ಷಕರು ಜೂನ್ ಒಂದನೇ ತಾರೀಕು ಅವರ ಹುಟ್ಟಿದ ದಿನ ಎಂದು ಬರೆದುಕೊಂಡು ಬಿಡುತ್ತಿದ್ದರು.ಅದುವೇ ಇಂದು ಮೇ ತಿಂಗಳ ಕೊನೆಯ ದಿನಾಂಕದಲ್ಲಿ ನಿವೃತ್ತಿ ಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗಲು ಕಾರಣ.

ಜೂನ್ ತಿಂಗಳ ಮೊದಲ ದಿನ ಹುಟ್ಟಿದ ಹಬ್ಬದ ಸಡಗರ.ಕೇವಲ ಒಂದು ದಶಕದ ಹಿಂದೆ ಈ ಹುಟ್ಟು ಹಬ್ಬಗಳ ಸಡಗರ ಅಷ್ಟಾಗಿ ಇರುತ್ತಿರಲಿಲ್ಲ,ಆದರೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಎಲ್ಲರೂ ಆರಂಭಿಸಿದಾಗಿನಿಂದ ಮನೆಯ ಸಾಕು ಪ್ರಾಣಿಗಳಿಂದ ಹಿಡಿದು ಮನೆಯ ಎಂಭತ್ತು, ತೊಂಭತ್ತರ ವೃದ್ಧರವರೆಗೆ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಗಳ ಭರಾಟೆಯೇ ಭರಾಟೆ.ಆಚರಣೆಗಳ ಜೊತೆಜೊತೆಗೆ ಆಚರಣೆಯಲ್ಲಿ ವೈವಿಧ್ಯತೆ ಮತ್ತು ಅವುಗಳನ್ನು ಪ್ರದರ್ಶಿಸುವ , ಶೋಕೇಸ ಮಾಡುವ ವಿಧಾನವೂ ವೈವಿಧ್ಯಮಯವೇ. ಹಲವಾರು ಆ್ಯಪ್ ಗಳ ಸಹಾಯದಿಂದ ವಿವಿಧ ಹಾಡುಗಳನ್ನು ಅವರ ಭಾವಚಿತ್ರಗಳಿಗೆ ಕೂಡಿಸುವ ಮೂಲಕ ಮತ್ತು ಅನೇಕ ಭಾವಚಿತ್ರಗಳನ್ನು ಒಂದೇ ಚೌಕಟ್ಟಿನಲ್ಲಿ ಕೂರಿಸುವ ಮೂಲಕ ಹೀಗೆ ಹಲವು ವಿಧಗಳಲ್ಲಿ ಆಚರಣೆ ಮಾಡುತ್ತಿದ್ದಾರೆ.ಸಾಮಾಜಿಕ ಬದಲಾವಣೆಯ ಈ ಸ್ಥಿತ್ಯಂತರದ ಕಾಲದಲ್ಲಿಯೂ ಕೂಡಾ ನಿವೃತ್ತಿಯ ನಂತರದ ಜೀವನದ ಕುರಿತು ನಾವು ಯೋಚಿಸಬೇಕಾಗಿದೆ.

ಜೀವನ ನಿರ್ವಹಣೆಗಾಗಿ,ಕೌಟುಂಬಿಕ ಜೀವನದ ಸುಗಮ ಹಾದಿಗಾಗಿ ನೌಕರಿ ಹಿಡಿದ ಲಕ್ಷಾಂತರ ಕೋಟ್ಯಂತರ ಉದ್ಯೋಗಿಗಳಿಗೆ ಜೀವನದ ಅರವತ್ತನೇ ವಯಸ್ಸು ನಿವೃತ್ತಿಯ ಕಾಲ. ಕೃಷಿ, ಸ್ವಂತ ಉದ್ಯಮ, ವ್ಯಾಪಾರ, ವ್ಯವಹಾರಗಳನ್ನು ನಡೆಸಿಕೊಂಡು ಹೋಗುವ,ಆಯಾ ವೃತ್ತಿಯಲ್ಲಿರುವವರಿಗೆ ಅವರವರ ಮಕ್ಕಳು ಅವರ ಕೈಗೆ ಬಂದು ಅವರ ವ್ಯಾಪಾರ ವ್ಯವಹಾರಗಳನ್ನು ಅವರಷ್ಟೇ ದಕ್ಷತೆಯಿಂದ ನಿರ್ವಹಿಸಲು ಆರಂಭಿಸಿದರೆ ಆಗ ಅವರಿಗೆ ಅದು ನಿವೃತ್ತಿಯ ಕಾಲ .ನಂತರ ಅವರಿಗೆ ಮಕ್ಕಳ ಶ್ರೇಯೋಭಿವೃದ್ಧಿಯಲ್ಲಿ ಸಲಹಾ ಮಂಡಳಿಯ ಸದಸ್ಯರಾಗುವ ಯೋಗ.ಆದರೆ ನೌಕರಿಯ ಜನರಿಗೆ ಈ ಯೋಗ ಇರದೇ ಹೋದರೂ ವೃತ್ತಿಯಿಂದ ನಿವೃತ್ತರಾದ ನಂತರ ಮುಂದೇನು? ಎಂಬ ಯೋಚನೆ ಸಹಜವೇ.ಹಾಗೆ ವೃತ್ತಿಯಿಂದ ನಿವೃತ್ತರಾಗಿ ಪ್ರವೃತ್ತಿಯ ಕಡೆಗೆ ತೆರಳುವ ಜನರು ಬೆರಳೆಣಿಕೆಯಷ್ಟಾದರೂ ಉಳಿದವರು ಕೂಡ ತಮ್ಮ ಪ್ರವೃತ್ತಿಯ ಕುರಿತು ಯೋಚಿಸಲೇಬೇಕು.

ಅಂತಹ ಪುರುಷರಿಗೆ/ಮಹಿಳೆಯರಿಗೆ ಕೆಲವು ಸಲಹೆಗಳು.
೧ .ಇದುವರೆಗೂ ದಿನದ ಮುಂಜಾನೆ ಮತ್ತು ಸಾಯಂಕಾಲ ದ ಕೆಲವು ಗಂಟೆಗಳನ್ನು ಮಾತ್ರ ನೀವು ಕುಟುಂಬದೊಂದಿಗೆ ಕಳೆಯುತ್ತಿದ್ದೀರಿ. ಅದು ತುಂಬ ಆರಾಮದಾಯಕ .ಆಗ ನಿಮಗೆ ನಿಮ್ಮ ಸಂಗಾತಿಯು ಪ್ರೇಯಸಿಯಂತೆ ತೋರಿದರೆ ಆಶ್ಚರ್ಯವೇನಿಲ್ಲ .ಆದರೆ ಇನ್ನು ಮುಂದೆ ನೀವು ದಿನದ ೨೪ಗಂಟೆಯೂ ಅವರೊಂದಿಗೆ ಕಳೆಯಬೇಕಾಗಬಹುದು. ಹೊಸತರಲ್ಲಿ ಎಲ್ಲವೂ ಚೆನ್ನವೇ.ಅದೇನೋ ಗಾದೆ ಹೇಳುತ್ತಾರಲ್ಲ ‘ಅಗಸ ಗೋಣಿ ಚೀಲವನ್ನು ಎತ್ತಿ ಎತ್ತಿ ಒಗೆದಂತೆ’ ಹಾಗೆಯೇ ನಿವೃತ್ತಿಯಾದ ಮೊದಮೊದಲು ಕುಳಿತಲ್ಲಿಯೇ ತಿಂಡಿ ಕಾಫೀ ತಂದುಕೊಡುವ ಪತ್ನಿ, ಸಮಯದ ಅಂಕೆ, ಅಂಕುಶವಿಲ್ಲದೆ ಆರಾಮವಾಗಿ ಪೇಪರ್ ಓದುತ್ತ, ಸ್ನೇಹಿತರೊಂದಿಗೆ ಹರಟೆಯಲ್ಲಿ ಕಾಲಹರಣ ಮಾಡುತ್ತಾ ವೃತ್ತಿಜೀವನದಲ್ಲಿ ಸಿಗದ ವಿರಾಮವನ್ನು ಅನುಭವಿಸಬಹುದು.ಆದರೆ ವಿಚಿತ್ರ ನೋಡಿ …ಯಾವುದನ್ನು ನಾವು ಪದೇಪದೇ ಬಯಸುತ್ತೇವೆಯೋ ಅದು ಕಣ್ಣ ಮುಂದೆಯೇ ಇದ್ದಾಗ …ಅಥವಾ ಅತಿಯಾದ ಸಾಮೀಪ್ಯತೆಯ ಅಂಕುಶವೆನಿಸಬಹುದು. ಪತ್ನಿ
ಮೇಲ್ವಿಚಾರಕಳೆನಿಸಬಹುದು. ಒಂದು ರೀತಿಯ ಇನ್ಸ್ಟ್ರಕ್ಷನ್ ಮ್ಯಾನ್ಯುಯಲ್ ಎಂದು ಕೂಡ ಅನಿಸಬಹುದು. ಅದನ್ನು ಮಾಡಿ, ಹೀಗೆ ಮಾಡಿ, ಹೀಗೇ ಇರಿ,ಹಾಗೇ ಇರಿ ಎಂದು ಆಕೆ ಪದೇ ಪದೇ ಹೇಳಿದಂತೆ ಎನ್ನಿಸಬಹುದು. ವೃತ್ತಿಜೀವನದಲ್ಲಿ ಇದ್ದಾಗ ಹೆಂಡತಿ ಮಕ್ಕಳೊಡನೆ ಆರಾಮವಾಗಿ ಕಾಲ ಕಳೆಯಬೇಕು ಎಂಬ ಮಹದಾಸೆಯೇ ನಿವೃತ್ತಿಯಾದಾಗ ಅಷ್ಟೇನು ಮಹತ್ವದ್ದಲ್ಲ ಎನಿಸಲು ಕಾರಣವಾಗಬಹುದು.
ಹಲವಾರು ವರ್ಷ ಮನೆಯಿಂದ ಹೊರಗೇ ಇದ್ದು ಮನೆಯವರೆಲ್ಲ ಸದರ ಎಂದೆನಿಸುವುದು ಕೂಡ ಒಂದು ಕಾರಣವೇ ಇರಬಹುದು. ನೀವು ಹಲವಾರು ವರ್ಷ, ಹಲವಾರು ಮೇಲಧಿಕಾರಿಗಳ ಕೈಯಲ್ಲಿ ಕೆಲಸ ಮಾಡಿರಬಹುದು ಅಥವಾ ನೀವೇ ಮೇಲಧಿಕಾರಿಯಾಗಿ ಕಾರ್ಯ ನಿರ್ವಹಿಸಿರಬಹುದು, ಆದರೆ ಮನೆಯಲ್ಲಿ ನಿಮ್ಮ ಸಂಗಾತಿಯೇ ನಿಮ್ಮ ಮೇಲಧಿಕಾರಿ. ಸರಿಯೋ ತಪ್ಪೋ ಅದು ಬೇಕಿಲ್ಲ ಒಟ್ಟಿನಲ್ಲಿ ಆಕೆಯ ಅಥವಾ ಆತನ ಎಲ್ಲಾ ಮಾತುಗಳಲ್ಲಿ ನಿಮ್ಮ ಸಹಮತಿ ಇರುವುದು ಕೌಟುಂಬಿಕ ಶಾಂತಿ, ಸಹನೆ ಕಾಪಾಡಿಕೊಳ್ಳಲು ಅತ್ಯಂತ ಅಗತ್ಯ. ಪ್ರತಿ ಬಾರಿಯೂ ನೀವೇ ಒಪ್ಪಿಕೊಳ್ಳಬೇಕಾದ ಅಗತ್ಯ ಬಂದರೂ ಕೂಡ ಹಿಂಜರಿಯಬೇಡಿ .ಇಲ್ಲಿಯವರೆಗೆ ಕುಟುಂಬದ ಎಲ್ಲಾ ಬೇಕು ಬೇಡಗಳನ್ನು ನಿಮ್ಮ ಅನುಪಸ್ಥಿತಿಯಲ್ಲಿ ಸಮರ್ಥವಾಗಿ ನಿರ್ವಹಿಸಿರುವ ನಿಮ್ಮ ಸಂಗಾತಿಗೆ ಇಷ್ಟಾದರೂ ಅವಕಾಶ ಮಾಡಿಕೊಟ್ಟರೆ ನಿಮ್ಮ ಜನ್ಮ ಸಾರ್ಥಕ. ಹಿತ ಮಿತವಾದ ಮಾತು, ಪ್ರೀತಿಯ ಸ್ಪರ್ಶ, ಒಂದು ಪುಟ್ಟ ವಾಕಿಂಗ್, ಸಾಯಂಕಾಲದ ಒಂದು ಕಪ್ ಚಹಾ ನೀವೇ ಆಕೆಗೆ ಮಾಡಿಕೊಟ್ಟರೆ ಆಕೆಗೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಎಂಬಂತಹ ಭಾವ ತಂದುಕೊಡುವುದರಲ್ಲಿ ಆಶ್ಚರ್ಯವೇನಿಲ್ಲ.

ಅರೆ!! ಗಂಡಸಾಗಿ ನಾನು ಆಕೆಗೆ ಚಹಾ ಮಾಡಿಕೊಡಬೇಕೆ ? ಎಂಬ ಅಹಂ ಖಂಡಿತ ಬೇಡ .ಯಾಕೆ ಗಂಡಸಾಗಿ ನಿಮಗೆ ಹಸಿವಾಗುವುದಿಲ್ಲವೇ?? ಹಸಿವಿಗೆ ಯಾವುದೇ ಲಿಂಗಬೇಧವಿಲ್ಲ!! ಹಾಗಿದ್ದರೆ ಅಡುಗೆ ಮನೆಗೆ ಯಾಕೆ ಹೆಣ್ಣನ್ನು ಥಳಕು ಹಾಕುವುದು.ಅಡುಗೆ ಮನೆ ಕೇವಲ ಹೆಣ್ಣಿನ ಸೊತ್ತಲ್ಲ, ಹಾಗೆಂದು ಎಲ್ಲೂ ಬರೆದಿಲ್ಲ.ಹೆಣ್ಣಿನಷ್ಟೇ ಗಂಡೂ ಕೂಡ ಅಡುಗೆ ಮನೆಯ ಕೆಲಸಗಳನ್ನು ಮಾಡಲು ಅರ್ಹ.. ಸಮಯದ ಅಭಾವದಿಂದಲೋ, ಕಾಲದ ಪ್ರಭಾವದಿಂದಲೋ ಪ್ರಯತ್ನ ಮಾಡಿಲ್ಲವಷ್ಟೇ..ಈಗ ನಿವೃತ್ತಿಯ ಈ ಹಂತದಲ್ಲಿ ಅಡುಗೆಯನ್ನು ಕೂಡ ಒಂದು ಹವ್ಯಾಸವನ್ನಾಗಿಸಿಕೊಂಡು ಪತ್ನಿಯ ಹೊರೆಯನ್ನು ಕೊಂಚಮಟ್ಟಿಗೆ ತಗ್ಗಿಸಿದರೆ ಆಯಿತಷ್ಟೆ .

ಇಂಗ್ಲೀಷಿನ ಖ್ಯಾತ ಲೇಖಕ ರೊಬ್ಬರ ಹೇಳಿಕೆ ಹೀಗಿದೆ ನಾವು ಎಷ್ಟು ಮುಂದುವರಿದಿದ್ದೇವೆಂದರೆ ಎಂದರೆ ನಮ್ಮ ಹೆಣ್ಣುಮಕ್ಕಳು ಈಗ ಅಂತರಿಕ್ಷಯಾನಿ ಗಳಾಗಿದ್ದಾರೆ,ವಿಪರ್ಯಾಸವೆಂದರೆ ನಮ್ಮ ಗಂಡುಮಕ್ಕಳಿಗೆ ಅಡುಗೆ ಮನೆಯಲ್ಲಿ ಗ್ಯಾಸ್ ಸ್ಟೌವ್ ಆನ್ ಮಾಡಲು ಕಲಿಸುತ್ತಿಲ್ಲ.ಅವರನ್ನು ನಾವು ಪರಾವಲಂಬಿಗಳಾಗಿಸಿದ್ದೇವೆ ಕನಿಕರವೆನಿಸುತ್ತದೆ ನನಗೆ ಗಂಡಸರನ್ನು ಕಂಡರೆ ಎಂದು ….ನಿಜವಲ್ಲವೇ ಅವರ ಮಾತು. ಸದ್ಯ ನೀವು ಹಾಗಾಗುವುದು ಬೇಡ .

೨. ಈಗಾಗಲೇ ನೌಕರಿಯ ಗಡಿಬಿಡಿಯಲ್ಲಿ ವಿರಾಮ ರಹಿತ ಜೀವನದಲ್ಲಿ, ನೀವು ಹಲವಾರು ಕೌಟುಂಬಿಕ ಕಾರ್ಯಕ್ರಮಗಳಿಗೆ, ಶುಭ ಸಮಾರಂಭಗಳಿಗೆ ಗೈರುಹಾಜರಾಗಿದ್ದೀರಿ ಅಲ್ಲವೇ?ಇದೀಗ ಈ ಎಲ್ಲಾ ಕೊರತೆಗಳನ್ನು ತುಂಬಿಕೊಳ್ಳಲು ಸಕಾಲ. ಸ್ನೇಹವನ್ನು ಪುನರ್ನವೀಕರಿಸಿಕೊಳ್ಳಲು,ಆತ್ಮೀಯತೆಯ ಬಂಧವನ್ನ ಹೆಚ್ಚಿಸಿಕೊಳ್ಳಲು ಈಗ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ.ಎಲ್ಲ ರೀತಿಯ ಹಮ್ಮುಬಿಮ್ಮುಗಳನ್ನು ಬದಿಗಿರಿಸಿ ಎಲ್ಲರೊಂದಿಗೂ ಆತ್ಮೀಯವಾಗಿ ವ್ಯವಹರಿಸಿ ಪ್ರೀತಿಯನ್ನ ಹಂಚಿ ಪ್ರೀತಿಯನ್ನ ಪಡೆಯಿರಿ.

೩ ವೃತ್ತಿಜೀವನದಲ್ಲಿ ನೀವು ಸಾಕಷ್ಟು ಪ್ರಗತಿಯನ್ನು ಪಡೆದಿರಬಹುದು…ಬಡ್ತಿ ಗಳ ಮೇಲೆ ಬಡ್ತಿ ಪಡೆದಿರಬಹುದು .ಆದರೆ ಮನೆಯಲ್ಲಿ ನೀವು ಕೇವಲ ಒಬ್ಬ ಮಗ, ಪತಿ, ತಂದೆ, ಸಹೋದರ, ಮಾವ ಎಂದು ಗುರುತಿಸಿಕೊಳ್ಳಬೇಕು.ನಿಮ್ಮ ಯಾವುದೇ ಅಧಿಕಾರದ ಕಿರೀಟವನ್ನು, ಅದರ ಭಾರವನ್ನು ಮನೆಯಲ್ಲಿ ಯಾರ ಮೇಲೂ ಹೇರಬೇಡಿ. ನೀವೀಗ ವೃತ್ತಿಯಿಂದ ನಿವೃತ್ತರಾದ ಹಾಗೆಯೇ ನಿಮ್ಮ ಅಹಮ್ಮಿನ ಕೋಟೆಯಿಂದಲೂ ಹೊರ ಬಂದು ನೋಡಿ, ಅದೆಷ್ಟು ವರ್ಷ ನಿಮ್ಮ ಪತ್ನಿ, ಮಕ್ಕಳು ನಿಮ್ಮ ಅಹಮ್ಮಿನ ಕಿರೀಟದಡಿ ಮನೆಯ ಎಷ್ಟೋ ಕೆಲಸಗಳನ್ನು ಮಾಡಿ ತೋರಿದ್ದಾರೆ ಎಂದು. ಹಾಗೆ ಆಕೆ ಕುಟುಂಬದ ಸಮಸ್ತ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದರಿಂದಲೇ ನೀವಿಂದು ನಿಮ್ಮ ವೃತ್ತಿಜೀವನದ ವಿಶಿಷ್ಟ ತುರಾಯಿಯನ್ನು ತಲೆಯಲ್ಲಿ ಸಿಕ್ಕಿಸಿಕೊಂಡಿರುವಿರಿ ಎಂದು. ಹಾಗೆಂದು ಹೆಣ್ಮಕ್ಕಳಿಗೆ ಅಹಂ ಇಲ್ಲ ಎಂದಲ್ಲ,ಅವರ ಅಹಂ ಅವರಿಗೆ ಹೆಚ್ಚು ವಾಚಾಳಿತನವನ್ನು ತಂದುಕೊಡಬಹುದು ಇಲ್ಲವೇ ನೋವಿನಿಂದ ಮೌನಿಯಾಗಿಸಬಹುದು.

೪ ಪತ್ನಿಯ, ಮನೆಯ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಅದು ನೀವು ಆಕೆಗೆ ಮಾಡುವ ಸಹಾಯವಲ್ಲ ಬದಲಾಗಿ ಆಕೆಯ ಕೆಲಸದ ಹೊರೆಯನ್ನು ಕಡಿಮೆ ಮಾಡುವ ಪ್ರಯತ್ನ …ಹೊರೆ ಕಡಿಮೆ ಆಗುತ್ತದೋ ಬಿಡುತ್ತದೋ ಅದು ಬೇರೆ ಪ್ರಶ್ನೆ! ಆದರೆ ನಿಮ್ಮ ಪ್ರಯತ್ನ ಮಾತ್ರ ಆಕೆಯ ಪ್ರಶಂಸೆ ಪಡೆಯುವುದು ನೂರು ಪ್ರತಿಶತ ನಿಜ .
೪ ಇನ್ನು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಕೈಜೋಡಿಸುವುದು .ದೇವಸ್ಥಾನ, ವಾಚನಾಲಯ, ಧ್ಯಾನ – ಯೋಗ ಕೇಂದ್ರಗಳು , ಸಂಬಂಧಿಗಳ ಮನೆ, ಅನಾಥಾಲಯಗಳಿಗೆ ಭೇಟಿ ನೀಡುವುದು ನಿಮ್ಮ ಸಮಯದ ಸದ್ವಿನಿಯೋಗಕ್ಕೆ ಕಾರಣವಾಗುವುದು.ಜೊತೆಗೆ ಸಮಾಜಪರ ದೃಷ್ಟಿಕೋನವನ್ನು ಬದಲಾಯಿಸಬಹುದು.

೫. ಮಿನಿಮಲಿಸಂ ಎಂಬ ಪದ ಬಳಕೆ ಗೊತ್ತೆ ನಿಮಗೆ ? ಅತ್ಯಂತ ಕಡಿಮೆ ವಸ್ತುಗಳ ಬಳಕೆ ಅಥವಾ ಅತ್ಯಂತ ಕಡಿಮೆ ಅವಶ್ಯಕತೆ ಹೊಂದಿರುವುದು ಎಂಬುದು .ಇದನ್ನು ಜೀವನದಲ್ಲಿ ಪ್ರಯತ್ನಪೂರ್ವಕವಾಗಿ ಅಳವಡಿಸಿಕೊಳ್ಳುವುದು ಬಹಳ ಒಳ್ಳೆಯದು .ಲೆಸ್ ಲಗೇಜ್ ಮೋರ್ ಕಂಫರ್ಟ್ ಎಂಬ ನುಡಿ ಇಲ್ಲಿ ತುಂಬ ಸೂಕ್ತವೆನಿಸುವುದು .
ಹಾಗೆಯೇ ನೀವು ಹೆಚ್ಚಿನ ಆಸ್ತಿ ಪಾಸ್ತಿ ಹೊಂದಿಲ್ಲದಿದ್ದರೂ ಪರವಾಗಿಲ್ಲ ನಿಮ್ಮ ನಂತರದಲ್ಲಿ ನಿಮ್ಮ ಪತ್ನಿಯ, ಕುಟುಂಬದ ಆಸ್ತಿ ಪಾಸ್ತಿಗಳ ನಿರ್ವಹಣೆಯ ಹೊಣೆಗಾರಿಕೆಯನ್ನು ಉಯಿಲು
ಮಾಡಿ ಇಟ್ಟಿರುವುದು ಒಳ್ಳೆಯದು .ಇದು ನಿಮ್ಮ ನಂತರದ, ನೀವಿಲ್ಲದ ಕಾಲದಲ್ಲಿಯೂ ನಿಮ್ಮ ಮನೆ ಮನಗಳಿಗೆ ಶಾಂತಿ ತರುವ ಕೆಲಸ ..ಕೊಂಚ ಕ್ರೂರವೆನಿಸಿದರೂ ಇದು ವಾಸ್ತವಕ್ಕೆ ಹತ್ತಿರವಾದ ಕಾರ್ಯ.
೬ ಪ್ರಕೃತಿಯೊಂದಿಗಿನ ಒಡನಾಟ ಮನಸ್ಸಿಗೆ, ದೇಹಕ್ಕೆ ಮುದ ನೀಡಬಲ್ಲದು.ಪಂಚ ಮಹಾಭೂತಗಳಾದ ಅಗ್ನಿ, ಜಲ, ವಾಯು, ಆಕಾಶ ಮತ್ತು ಭೂಮಿ ಅವುಗಳೊಂದಿಗಿನ ಒಡನಾಟ ಮನಕ್ಕೆ ಹಿತ ಕೊಡುತ್ತದೆ . ಮುಂಜಾನೆ ಮತ್ತು ಸಾಯಂಕಾಲ ಬೆಚ್ಚಗಿನ ವಾತಾವರಣದಲ್ಲಿ ಸೂರ್ಯನ ಶಾಖಕ್ಕೆ ಮೈಕಾಯಿಸಿಕೊಳ್ಳುವುದು, ಹರಿಯುವ ನೀರಿನಲ್ಲಿ ಕಾಲಿಟ್ಟು ಕುಳಿತುಕೊಳ್ಳುವುದು , ಮುಂಜಾನೆಯ ಹಿತಮಿತವಾದ ಬೆಳಕಿನಲ್ಲಿ ವಾಕಿಂಗ್ ಮಾಡುವುದು,ಸಮಾನ ಮನಸ್ಕ ಸ್ನೇಹಿತರೊಂದಿಗೆ ಒಡನಾಡುವುದು , ಧ್ಯಾನ, ಚಿಂತನ ಮಂಥನಗಳ ಮೂಲಕ ನಿಮ್ಮನ್ನು ನೀವು ಪುನರ್ ವಿಮರ್ಶೆಗೆ ಒಳಪಡಿಸುವುದು ಮತ್ತು ತಿದ್ದಿಕೊಳ್ಳುವುದು , ಭೂಮಿ ತಾಯಿಯ ಮಡಿಲಲ್ಲಿ ಸಸಿಗಳನ್ನು ನೆಡುವುದು,ಪಾತಿ ಮಾಡುವ,ನೀರು ಹಾಯಿಸುವ,ಮನೆಯಲ್ಲಿ ಪುಟ್ಟ ಉದ್ಯಾನವನ್ನ ಸೃಷ್ಟಿ ಮಾಡುವುದು ನಮ್ಮ ಹವ್ಯಾಸಗಳಲ್ಲಿ ಒಂದಾಗಬೇಕು
೭. ಪುಟ್ಟ ಮಗುವಿನ ಮುಗ್ಧತೆ, ಸ್ನಿಗ್ಧತೆ,ಕುತೂಹಲ,ಹಮ್ಮು ಬಿಮ್ಮುಗಳಿಲ್ಲದ ಜೀವನ ವೃದ್ಧಾಪ್ಯವನ್ನು ಸಹನೀಯವಾಗಿಸುವುದು.

ಹಾ೦ ಇನ್ನೊಂದು ಮಾತು….ಹರೆಯದಲ್ಲಿ ಸಾಕಷ್ಟು ದುಡಿದು ವೃದ್ಯಾಪ್ಯ ಜೀವನಕ್ಕೆಂದೇ ಹಣವನ್ನ ಎತ್ತಿಟ್ಟಿರುವಿರಿ ಅಲ್ಲವೇ ?? ಹಲವು ಪ್ರವಾಸಗಳು ನಿಮ್ಮನ್ನು ಕಾಯುತ್ತಿರುವವು. ಆಗಾಗ ಕುಟುಂಬದೊಂದಿಗೆ, ಮಿತ್ರರೊಂದಿಗೆ ಪ್ರವಾಸಗಳನ್ನು ಮಾಡುವುದರಿಂದ ಅದು ನಿಮ್ಮ ಮೈಮನಗಳನ್ನು ತಣಿಸಿ ಮುದ ನೀಡುತ್ತ ನಿಮ್ಮನ್ನು ಚಿರಯವ್ವನಿಗರಂತೆ ಕಾಪಿಡುತ್ತದೆ.ಜತೆಗೆ ಇನ್ನೊಂದು ಮಾತು ಹರೆಯದಲ್ಲಿ ಜೀವನ ನಡೆಸುವ,ದುಡ್ಡು ಮಾಡುವ ಭರದಲ್ಲಿ ನಮ್ಮ ಆರೋಗ್ಯವನ್ನು ಕಡೆಗಣಿಸಬಾರದು.ನಾವು ಹಣವನ್ನು ಗಳಿಸಿ ಉಳಿಸುವುದು ವೃದ್ಧಾಪ್ಯದಲ್ಲಿ ನಮ್ಮ ಭವಿಷ್ಯತ್ತಿಗಾಗಿಯೇ ಹೊರತು ನಮ್ಮ ಅನಾರೋಗ್ಯಗಳಿಗೆ ಅಲ್ಲ …ಆದ್ದರಿಂದ ನಿಯಮಿತ ತಪಾಸಣೆ ಔಷಧಿ, ಉಪಚಾರ ಸರಿಯಾಗಿ ನಿರ್ವಹಿಸಿ ಒಳ್ಳೆಯ ಆರೋಗ್ಯವನ್ನು ಹೊಂದಿರಿ ಮತ್ತು ವಯೋಸಹಜವಾಗಿ ಬರುವ ಕಾಯಿಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಕಾಪಾಡಿಕೊಳ್ಳಿ ೮. ನಿಮ್ಮ ಮಕ್ಕಳು ನಿಮ್ಮವರೇ ಆದರೂ ಅವರು ನಿಮ್ಮ ಕನಸಿನ ಕೂಸುಗಳು, ಅವರಿಗೆ ಅವರದೇ ಆದ ಆಸೆ ಆಕಾಂಕ್ಷೆಗಳು ಇರುತ್ತವೆ.ಆದ್ದರಿಂದ ನಿಮ್ಮ ಆಸೆ ಆಶಯಗಳನ್ನು ಅವರ ಮುಂದೆ ವ್ಯಕ್ತಪಡಿಸಬಹುದೇ ಹೊರತು ನಿಮ್ಮ ಅಭಿಪ್ರಾಯಗಳನ್ನು ಅವರು ಪಾಲಿಸಲೇಬೇಕು ಎಂಬ ಒತ್ತಡ ಹೇರಬಾರದು. ಇದು ವೃದ್ಧಾಪ್ಯ ಕಾಲದಲ್ಲಿ ಮಾನಸಿಕ ಶಾಂತಿಯನ್ನು ಕಾಯ್ದುಕೊಳ್ಳಲು ಅತ್ಯಂತ ಅವಶ್ಯಕವಾದ ಸ್ಥಿತಿ . ಇನ್ನು ನಿಮ್ಮ ಮಕ್ಕಳಿಗೆ ಮದುವೆ ಆಗಿದ್ದರೆ ನಿಮ್ಮ ಅಳಿಯನನ್ನು ಗೌರವಿಸುವಷ್ಟೇ ನಿಮ್ಮ ಸೊಸೆಯನ್ನು ಗೌರವಿಸಿ ಆಕೆಯ ಅಭಿಪ್ರಾಯಗಳಿಗೆ ಬೆಲೆ ನೀಡಿ.ಆಕೆ ನಿಮ್ಮಮಗನ ಬಾಳಸಂಗಾತಿಯಾಗಿ ಬಂದಿರುವಳೇ ಹೊರತು ನಿಮ್ಮ ಮನೆಯ ತೊತ್ತಾಗಿ ಅಲ್ಲ.ನಿಮ್ಮ ಮನೆಯ ರೀತಿ ರಿವಾಜುಗಳನ್ನು ಕಲಿಸುವ ಭರದಲ್ಲಿ ಆಕೆಯ ಭಾವನೆಗಳಿಗೆ ಪೆಟ್ಟು ನೀಡಬೇಡಿ, ಬದಲಾಗಿ ನಯವಾಗಿ ತಿಳಿಸಿಕೊಡಿ.ನಿಮ್ಮ ಅಳಿಯನೊಂದಿಗಿನ ನಿಮ್ಮ ಮಗಳ ಬದುಕು ಹೇಗೆ ಹಸನಾಗಿರಲಿ ಎಂದು ಆಶಿಸುವಿರೋ ಹಾಗೆಯೇ ನಿಮ್ಮ ಮಗ ಸೊಸೆಯರ ಬಾಂಧವ್ಯ ವೃದ್ಧಿಗೆ ಆಶಿಸಿ.ಇನ್ನು ಮಕ್ಕಳಾಗಿದ್ದರಂತೂ ನೀವು ಇನ್ನೂ ಹೆಚ್ಚಿನ ಕಾಳಜಿ ವಹಿಸಬೇಕು ಅದೇನೋ ಗಾದೆ ಹೇಳ್ತಾರಲ್ಲ ‘ಅಸಲಿಗಿಂತ ಬಡ್ಡಿಯ ಮೇಲೆ ಪ್ರೀತಿ ಜಾಸ್ತಿ’ ಎಂದು.ಹಾಗೆ ಅತಿಯಾದ ಅಕ್ಕರೆ, ಪ್ರೀತಿ, ಮಮತೆ ಮಗುವನ್ನು ಹಾಳು ಮಾಡಬಾರದು.ನಿಮಗೆ ನಿಮ್ಮ ಮಕ್ಕಳೆಡೆಗೆ ಇರುವ ಪ್ರೀತಿಯ ಹತ್ತುಪಟ್ಟು ಜವಾಬ್ದಾರಿ,ಕರ್ತವ್ಯಗಳು ಆ ಮಗುವಿನ ತಂದೆ ತಾಯಿಗಳಿಗೆ ಇರುತ್ತದೆ.ಆ ಮಗುವನ್ನು ಸರಿದಾರಿಗೆ ತರಲು ತಿದ್ದಲು ಅವರಿಗೆ ಅವಕಾಶ ಮಾಡಿಕೊಡಿ.ಒಂದೊಮ್ಮೆ ನಿಮಗೆ ಆ ತಂದೆ ತಾಯಿಗಳು ಮಗುವನ್ನು ಅತಿಯಾದ ಶಿಸ್ತಿನಲ್ಲಿಡುವುದು ಸಹಿಸಲಾಗದೆ ಹೋದರೆ,ಆ ಪಾಲಕರು ಅಂದರೆ ನಿಮ್ಮ ಮಗ ಸೊಸೆ ಅವರ ಮಕ್ಕಳಿಗೆ ಪಾಠ ಹೇಳಿಕೊಡುವ, ಶಿಕ್ಷೆ ಕೊಡುವ ಸಮಯದಲ್ಲಿ ನೀವು ಮನೆಯಿಂದ ಹೊರಗೆ,ದೇವಸ್ಥಾನಗಳಿಗೆ ಭೇಟಿ ನೀಡಿ,ಇಲ್ಲವೇ ಮನೆಯ ಉದ್ಯಾನದಲ್ಲಿ ಕಾಲ ಕಳೆಯಿರಿ.ಏಕೆಂದರೆ ಇಂದಿನ ಮಕ್ಕಳು ಮುಂದಿನ ನಾಗರಿಕರು …ನಮ್ಮ ಅತಿಯಾದ ಅಕ್ಕರೆ ಮಕ್ಕಳಿಗೆ ಬಿಳಿ ಸಕ್ಕರೆಯಂತಹ ವಿಷವಾಗಬಾರದು ಮತ್ತು ಇದೇ ಭಿನ್ನಾಭಿಪ್ರಾಯಗಳು ಮನೆಯ,ಕುಟುಂಬದ ಒಡಕಿಗೆ ಕಾರಣವಾಗಬಾರದು. ಹಾಗಾಗಿ ಅವರವರ ಮಕ್ಕಳ ಜವಾಬ್ದಾರಿಯನ್ನು ಅವರವರಿಗೆ ಬಿಟ್ಟು ಕೇವಲ ಸಲಹೆ ಕೊಡಬಹುದು (ಅದೂ ಅವರು ತೆಗೆದುಕೊಳ್ಳುವುದಾದರೆ ಮಾತ್ರ).

೯. ಉತ್ತಮವಾದ ಆರೋಗ್ಯವನ್ನು ಹೊಂದಲು ಯೋಗ, ವ್ಯಾಯಾಮ,ವಾಕಿಂಗ್ ಅತ್ಯಂತ ಅವಶ್ಯಕ. ಕಠಿಣವಲ್ಲದ, ನಿಮ್ಮ ದೇಹಕ್ಕೆ ಸರಿಹೊಂದುವ ಹಲ-ಕೆಲವು ಆಸನಗಳ ನಿಯಮಿತ ಅಭ್ಯಾಸ ಅಪೇಕ್ಷಣೀಯ, ಅಂತೆಯೇ ವೃದ್ಧಾಪ್ಯದಲ್ಲಿ ನಿಮ್ಮ ದೈಹಿಕ ನೋವುಗಳ ಮೀರಿ ಉತ್ತಮ ಆರೋಗ್ಯವಂತ ಶರೀರವನ್ನ ಹೊಂದಲು ಯೋಗ,ಧ್ಯಾನ, ನಡಿಗೆ ಗಳನ್ನ ಸತತವಾಗಿ ಪಾಲಿಸಿ .ನಿಮ್ಮ ದೈಹಿಕ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ . ‘ವಿನಾ ದೈನ್ಯೇನ ಜೀವನಂ, ಅನಾಯಾಸೇನ ಮರಣಂ’ ಇದೇ ನಿಮ್ಮ ಮೊದಲ ಮತ್ತು ಕೊನೆಯ ಮಂತ್ರವಾಗಿರಬೇಕು
ಅಂದಾಗ ಮಾತ್ರ ನೀವು ಉತ್ತಮ ಆರೋಗ್ಯಯುತ ನಿವೃತ್ತ ಜೀವನವನ್ನು ಸಾಗಿಸಲು ಸಾಧ್ಯ.

ವೀಣಾ ಹೇಮಂತ್ ಗೌಡ ಪಾಟೀಲ್

ಮುಂಡರಗಿ ಗದಗ್

Leave a Reply

Your email address will not be published. Required fields are marked *

error: Content is protected !!