1

ಅರುಣ್ ಬಡಿಗೇರ್‌ಗೆ ಮೀಡಿಯಾ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ

ಪತ್ರಕರ್ತರು ಪ್ರಾಮಾಣಿಕತೆ ರೂಢಿಸಿಕೊಳ್ಳಲಿ- ಶಿವಕುಮಾರ್ ಮೆಣಸಿನಕಾಯಿ

ಕೊಪ್ಪಳ01- ಪತ್ರಕರ್ತರು ನೈತಿಕವಾಗಿ ತಲೆ ಎತ್ತಿ ಮಾತನಾಡುವ ವೃತ್ತಿಪರತೆ ಹಾಗೂ ಪ್ರಾಮಾಣಿಕತೆ ರೂಢಿಸಿಕೊಳ್ಳಿ ಎಂದು ಸಂಯುಕ್ತ ಕರ್ನಾಟಕದ ಸಹಾಯಕ ಸಂಪಾದಕ ಶಿವಕುಮಾರ ಮೆಣಸಿನಕಾಯಿ ಹೇಳಿದರು.
ಕೊಪ್ಪಳ ಮೀಡಿಯಾ ಕ್ಲಬ್‌ ವತಿಯಿಂದ ಭಾಗ್ಯನಗರ ರಸ್ತೆಯಲ್ಲಿರುವ ಬಾಲಾಜಿ ಫಂಕ್ಷನ್‌ ಹಾಲ್‌ನಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರು ಎನ್ನಿಸಿಕೊಂಡ ಮೇಲೆ ಎಲ್ಲರಿಗಿಂತ ಹೆಚ್ಚು ಜವಾಬ್ದಾರಿಯಿಂದ ಇರಬೇಕು. ಪತ್ರಿಕಾ ರಂಗ ಉದ್ಯಮವಾಗಿ ಬದಲಾಗಿರಬಹುದು. ಆದರೆ, ಪತ್ರಕರ್ತ ವರ್ತಕನಾಗಬಾರದು. ಅಪರಾಧಿ ಸ್ಥಾನದಲ್ಲಿ ಪತ್ರಿಕೋದ್ಯಮ ಸಾಗುತ್ತಿದೆ. ಈ ಕಾಲಘಟ್ಟದಲ್ಲಿ ಇತಿ- ಮಿತಿಯಲ್ಲಿ ಕನಿಷ್ಠ ಮಟ್ಟದ ಪ್ರಾಮಾಣಿಕ ಪತ್ರಕರ್ತನಾಗಿ ಬದುಕಬೇಕು‌. ವೃತ್ತಿ ಧರ್ಮ, ವೃತ್ತಿಪರತೆ ಕಾಪಾಡಿಕೊಳ್ಳಬೇಕು ಎಂದರು.
ಪತ್ರಕರ್ತ ಕ್ಷಣಿಕ ಆಸೆ- ಆಕಾಂಕ್ಷೆಗಳಿಗೆ ಬಲಿಯಾದರೆ ಇತಿಹಾಸದಲ್ಲಿ ಉಳಿಯುವುದಿಲ್ಲ. ಆತ್ಮತೃಪ್ತಿ ಯಿಂದ ಕೆಲಸ ಮಾಡಿದರೆ, ದೀರ್ಘಕಾಲ ಕೆಲಸ ಮಾಡುವುದಲ್ಲದೇ ಇತಿಹಾಸ ಪುಟದಲ್ಲಿ ಇರುತ್ತಾರೆ. ಪ್ರಸ್ತುತ ಸಮಾಜ ಹಾಗೂ ವ್ಯವಸ್ಥೆ ಅಂಕು ಡೊಂಕಾಗಿದೆ. ಇಂದು ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್ ಮಾಧ್ಯಮ ಗಳಲ್ಲಿ ಸುದ್ದಿಗಳು ಬೆರಳ ತುದಿಗೆ ಬರುತ್ತಿದೆ. ಆದರೆ, ಸತ್ಯ ಹಾಗೂ ವಾಸ್ತವಿಕ ಚಿತ್ರಣವನ್ನು ಸಮಾಜಕ್ಕೆ ತಲುಪಿಸುವ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಇತ್ತೀಚಿನ ದಿನಗಳಲ್ಲಿ ಪತ್ರಕರ್ತರಿಗೆ ಅಧ್ಯಯನ ಶೀಲತೆ ಕಡಿಮೆ ಆಗುತ್ತಿದೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಮಾತನಾಡಿ, ಪತ್ರಿಕೋದ್ಯಮ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಅವಲೋಕಿಸಬೇಕಿದೆ. ನಿಕೋಬಾರ್ ದ್ವೀಪದಲ್ಲಿ ಅದ್ಬುತವಾದ ಹೈ ಲ್ಯಾಂಡ್ ಇದೆ. ಅಲ್ಲಿ 215 ಜನರ ಸಮುದಾಯ ವಾಸ ಮಾಡುತ್ತಿತ್ತು. ಇಂತಹ ಸ್ಥಳಗಳಲ್ಲಿ ಕಂಪನಿ ಆರಂಭಿಸಲು ಅವಕಾಶ ಇಲ್ಲ. ಆದರೆ, ದೇಶದ ಪ್ರತಿಷ್ಠಿತ ಕಂಪನಿಯೊಂದು ದ್ವೀಪದಲ್ಲಿ ಕಾಲಿಟ್ಟಿದೆ. ಇದೀಗ ಅಲ್ಲಿ ವಾಸಿಸುತ್ತಿರುವ ಜನರು ದ್ವೀಪದಲ್ಲಿ ಇಲ್ಲ. ಆ ಕಾಡು ಖಾಲಿಯಾಗಿದೆ. ಈ ಬಗ್ಗೆ ಒಂದೂ ವರದಿ ಬಂದಿಲ್ಲ. ಈ ಬಗ್ಗೆ ಚರ್ಚಿಸುವ ಅಗತ್ಯತೆ ಇದೆ ಎಂದರು.
ಮೀಡಿಯಾ ಕ್ಲಬ್‌ ಅಧ್ಯಕ್ಷ ರವೀಂದ್ರ ವಿ.ಕೆ. ಮಾತನಾಡಿ, ಸದ್ಯ ಮಾಧ್ಯಮ ಕ್ಷೇತ್ರ ಬದಲಾಗಿದೆ. ಪತ್ರಿಕೋದ್ಯಮ ದಲ್ಲಿ ಹಲವು ಸವಾಲುಗಳಿವೆ. ದೇಶ ಕಟ್ಟುವಲ್ಲಿ ಮೂರು ಅಂಗಗಳ ಜತೆಗೆ ಪತ್ರಿಕೋದ್ಯಮವೂ ಸೇರಿದೆ. ಪತ್ರಿಕೋದ್ಯಮ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪತ್ರಿಕಾ ರಂಗವನ್ನು ರಾಜಕೀಯ ಪಕ್ಷಗಳಿಗೆ ಗುರುತಿಸುವ ಕೆಲಸ ಆಗುತ್ತಿದೆ. ಆದರೆ, ಈಗಲೂ ವಿಪಕ್ಷವಾಗಿ ಕೆಲಸ ಮಾಡುತ್ತಿದೆ. ಪತ್ರಿಕಾ ರಂಗ ಉದ್ಯಮವಾಗಿ ಮಾರ್ಪಟ್ಟಿದ್ದರೂ, ಪತ್ರಿಕೆಗಳು ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿವೆ ಎಂದು ತಿಳಿಸಿದರು.
ಕೊಪ್ಪಳ ಮೀಡಿಯಾ ಕ್ಲಬ್ ನಿಂದ ಪ್ರತಿ ವರ್ಷ ಕ್ರೀಡಾ ಚಟುವಟಿಕೆ, ನಾಟಕ ಪ್ರದರ್ಶನ, ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪತ್ರಕರ್ತ ನಿಧಿ ರಚಿಸಿ ಪತ್ರಕರ್ತರ ರಕ್ಷಣೆ ಮಾಡಲಾಗುತ್ತಿದೆ. ಕಾರ್ಯಕ್ರಮ, ಚಟುವಟಿಕೆಗಳಿಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳಿಂದ ನೆರವು ಪಡೆದಿಲ್ಲ. ಪತ್ರಿಕಾಗೋಷ್ಠಿಯಿಂದ ಬಂದ ಹಣದಿಂದಲೇ ಕಾರ್ಯಚಟುವಟಿಕೆ ಮಾಡಲಾಗುತ್ತಿದೆ. ಮೀಡಿಯಾ ಕ್ಲಬ್ ನಡೆಯನ್ನು ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
 ವಾರ್ಷಿಕ ಪ್ರಶಸ್ತಿ ಪ್ರದಾನ:ಅನ್ವಿತಾ ಮಹಿಳೆಯರ ವೃದ್ಧರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ರೇವಣಕಿ ವತಿಯಿಂದ ಪ್ರಥಮ ಬಾರಿಗೆ ಕೊಡುವ ವಾರ್ಷಿಕ ಪ್ರಶಸ್ತಿ ಯನ್ನು ಪಬ್ಲಿಕ್‌ ಟಿ.ವಿ. ಸುದ್ದಿ ನಿರೂಪಕ ಅರುಣ್‌ ಸಿ. ಬಡಿಗೇರ್ ಅವರಿಗೆ ಪ್ರದಾನ ಮಾಡಲಾಯಿತು.
 ನಾಟಕ ಕೃತಿ ಲೋಕಾರ್ಪಣೆ: ಇದೇ ವೇಳೆ ಹಿರಿಯ ಪತ್ರಕರ್ತ ಬಸವರಾಜ ಬಿನ್ನಾಳ ಅವರು ಬರೆದ ‘ದೊಡ್ಮನೆ ದೇವರು’ ನಾಟಕ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಬಳಿಕ ಕೃಷಿ ಹಿರೇಗೌಡರ್ ಭರತನಾಟ್ಯ ಪ್ರದರ್ಶನ ಮಾಡಿದರು. ವನ್ಯಜೀವಿ ಛಾಯಾಗ್ರಾಹಕ ಸೇನಾನಿ ಇದ್ದರು.

ಸಾಧಕ ಪತ್ರಕರ್ತರಿಗೆ ಸನ್ಮಾನ
ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಉದಯಕಾಲ ದಿನಪತ್ರಿಕೆ ಜಿಲ್ಲಾ ವರದಿಗಾರ ಬಸವರಾಜ ಕರುಗಲ್‌ ಮತ್ತು ಕರುನಾಡು ಬೆಳಗು ಪತ್ರಿಕೆ ಸಂಪಾದಕ ಸಂತೋಷ ದೇಶಪಾಂಡೆ ಅವರನ್ನು ಸನ್ಮಾನಿಸಲಾಯಿತು. ಇದೇ ವರ್ಷ ಕರ್ನಾಟಕ ಮಾಧ್ಯಮ ಅಕಾಡೆಮಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕ್ಲಬ್‌ನ ಗೌರವಾಧ್ಯಕ್ಷ ಪ್ರಕಾಶ ಕಂದಕೂರ, ತೃತೀಯ ಬಹುಮಾನ ಪಡೆದ ಪ್ರಜಾವಾಣಿ ಛಾಯಾಗ್ರಾಹಕ ಭರತ್‌ ಕಂದಕೂರ, ಸಮಾಧಾನಕರ ಬಹುಮಾನ ಪಡೆದ ಕನ್ನಡಪ್ರಭದ ಹಿರಿಯ ಛಾಯಾಗ್ರಾಹಕ ನಾಭಿರಾಜ ದಸ್ತೇನವರ ಮತ್ತು ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಗೆ ಭಾಜನರಾಗಿರುವ ಪ್ರಜಾವಾಣಿ ಜಿಲ್ಲಾ ಹಿರಿಯ ವರದಿಗಾರ ಪ್ರಮೋದ ಕುಲಕರ್ಣಿ ಅವರನ್ನು ಹಾಗೂ ಹಲವಾರು ವರ್ಷಗಳಿಂದ ಪತ್ರಿಕೆ ವಿತರಕರಾಗಿ ಕೆಲಸ ಮಾಡುತ್ತಿರುವ ಮೆಹಬೂಬ್‌ ಮನಿಯಾರ್‌ ಅವರನ್ನು ಸನ್ಮಾನಿಸಲಾಯಿತು.

ಸದ್ಯ ಪತ್ರಿಕೋದ್ಯಮ ಐಸಿಯು ನಲ್ಲಿದೆ. ಹೊರಗಡೆ ಕಲರ್ ಫುಲ್ ಆಗಿ ಕಾಣುತ್ತಿದೆಯೇ ಹೊರತು ಒಳಗಡೆ ಐಸಿಯು ನಲ್ಲಿದೆ. ನಾನು ಪತ್ರಿಕೋದ್ಯಮ ಕ್ಕೆ ಸೇರುವಾಗ ಇದ್ದ ಮೌಲ್ಯವು ಈಗ ಕಳೆದುಕೊಂಡಿದೆ. ಪತ್ರಿಕೋದ್ಯಮ ಕ್ಕೆ ಬಂದರೆ ಒಂದೇ ಕೆಲಸಕ್ಕೆ ಸೀಮಿತವಿಲ್ಲ. ಎರಡ್ಮೂರು ವಿಭಾಗಗಳಲ್ಲಿ ಕೆಲಸ ಮಾಡಬೇಕು. ಪ್ರತಿಭೆ ಇದ್ದರೆ ಮಾಧ್ಯಮಕ್ಕೆ ಏಕೆ ಬರಬೇಕು? ಡಿಜಿಟಲ್ ಮಾಧ್ಯಮ, ಸಾಮಾಜಿಕ ಜಾಲತಾಣ ಅವಕಾಶ ಸೃಷ್ಟಿಸಿಕೊಳ್ಳಿ.
– ಅರುಣ್ ಸಿ.ಬಡಿಗೇರ್, ನಿರೂಪಕ.

ಪತ್ರಿಕೆಗಳು ಸ್ವಾತಂತ್ರ್ಯ ಪೂರ್ವದಿಂದಲೂ ಪಾತ್ರ ಮಹತ್ವವಹಿಸಿವೆ. ಸ್ವಾತಂತ್ರ್ಯ ಕ್ಕಾಗಿ ಜನರನ್ನು ಒಗ್ಗೂಡಿಸಲು ಮಹನೀಯರು ಅಸ್ತ್ರವಾಗಿ ಬಳಸಿಕೊಂಡಿದ್ದರು. ಇದೀಗ ಪತ್ರಿಕೋದ್ಯಮ ಬದಲಾಗಿದೆ. ಶಾಸಕಾಂಗ, ಕಾರ್ಯಾಂಗ ದಾರಿತಪ್ಪಿದಾಗ ಸರಿ ದಾರಿಗೆ ಪತ್ರಿಕೋದ್ಯಮ ತರುತ್ತಿದೆ. ಮುದ್ರಣ ಮಾಧ್ಯಮ ವಿಶ್ವಾಸಾರ್ಹ ತೆ ಬೆಳೆಸಿಕೊಂಡಿದೆ. ನಿಸ್ವಾರ್ಥ ಸೇವೆಯಾಗಿದೆ. ಧ್ವನಿ ಇಲ್ಲದವರಿಗೆ ಧ್ವನಿ ಯಾಗಿದೆ.
– ಡಾ.ಜಿ.ಸುರೇಶ್, ವಾರ್ತಾಧಿಕಾರಿ.

ಸಮಾಜ ಕ್ರಮಬದ್ಧವಾಗಿ ಬದುಕಲು ಪತ್ರಿಕೋದ್ಯಮ ಕೊಡುಗೆ ಅಪಾರವಾಗಿದೆ. ಮಂಗಳೂರು ಸಮಾಚಾರದಲ್ಲಿ ಕನಕದಾಸ ಸೇರಿ ಮಹನೀಯರ ಕೀರ್ತನೆಗಳು ಪ್ರಕಟವಾಗುತ್ತಿದ್ದವು. ಹೊರದೇಶದವರು ಕನ್ನಡಕ್ಕೆ ಆದ್ಯತೆ ನೀಡಿದ್ದಾರೆ. ಕರ್ನಾಟಕ ಎಲ್ಲರನ್ನೂ ಸ್ವಾಗತಿಸಿದೆ. ಎಲ್ಲರೂ ತಪ್ಪದೇ ಕನ್ನಡಲ್ಲೇ ಮಾತನಾಡಬೇಕು ಹಾಗೂ ವ್ಯವಹರಿಸಬೇಕು.
– ಫಾದರ್ ಜಬಮಲೈ, ಎಸ್ಎಫ್ಎಸ್ ಶಾಲೆಯ ಪ್ರಾಚಾರ್ಯ

Leave a Reply

Your email address will not be published. Required fields are marked *

error: Content is protected !!