WhatsApp Image 2023-10-14 at 10.52.38

ಅಹ್ಮದಾಬಾದ್ : ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಅಮೋಘ ಗೆಲುವು ಕಂಡಿದೆ. ಬ್ಯಾಟಿಂಗ್ – ಬೌಲಿಂಗ್ ನಲ್ಲಿ ಮಿಂಚಿದ ಟೀಮ್ ಇಂಡಿಯಾ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿ 86 ರನ್ ಚಚ್ಚಿ ಪಾಕ್ ಬೌಲರ್ ಗಳು ಬೆವರಿಳಿಸಿದರು. ಈ ಗೆಲುವಿನ ಮೂಲಕ ಭಾರತ ತಂಡ ವಿಶ್ವಕಪ್ ಪಾಯಿಂಟ್ ಟೇಬಲ್ ನಲ್ಲಿ ಆರು ಅಂಕ ಸಂಪಾದಿಸಿ ಅಗ್ರಸ್ಥಾನಕ್ಕೇರಿದೆ. ಅಲ್ಲದೆ ಪಾಕ್ ವಿರುದ್ಧ ವಿಶ್ವ ಕಪ್ ನಲ್ಲಿ ತನ್ನ ಗೆಲುವಿನ ದಾಖಲೆ ಮುಂದುವರೆಸಿದೆ.

ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಪಾಕಿಸ್ತಾನ ತಂಡ ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 191 ರನ್ಗೆ ಆಲೌಟ್ ಆಯಿತು. ಬಳಿಕ ಟಾರ್ಗೆಟ್ ಬೆನ್ನಟ್ಟಲು ಬಂದ ಭಾರತ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆಗೆ 2 ಪ್ರಮುಖ ವಿಕೆಟ್ ಕಳೆದುಕೊಂಡಿತು. ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ತಲಾ 16 ರನ್ ಗಳಿಸಿ ಔಟಾದರು. ಆದರೆ, ನಾಯಕ ರೋಹಿತ್ ಶರ್ಮಾ ಮನಬಂದಂತೆ ಬ್ಯಾಟ್ ಬೀಸಿದರು. ಕೇವಲ 36 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.

ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿದ ಹಿಟ್ಮ್ಯಾನ್ 63 ಎಸೆತಗಳಲ್ಲಿ 6 ಫೋರ್, 6 ಸಿಕ್ಸರ್ ಚಚ್ಚಿ 86 ರನ್ ಗಳಿಸಿದರು. ಈ ಮೂಲಕ ತಂಡ ಬೇಗನೆ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಶ್ರೇಯಸ್ ಅಯ್ಯರ್ 53 ಹಾಗೂ ಕೆಎಲ್ ರಾಹುಲ್ 19 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತ 30.3 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ ಜಯ ಕಂಡಿತು

ಇದಕ್ಕೂ ಮುನ್ನ ಟಾಸ್ ಸೋತು ಪಾಕ್ ಪರ ಇನ್ನಿಂಗ್ಸ್ ಆರಂಭಿಸಿದ ಅಬ್ದುಲ್ ಶಫೀಖ್ ಹಾಗೂ ಇಮಾನ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. 8 ಓವರ್ ಆಗುವ ಹೊತ್ತಿಗೆ 41 ರನ್ ಗಳಿಸಿದ್ದಾಗ ಸಿರಾಜ್ ಬೌಲಿಂಗ್ನಲ್ಲಿ ಶಫೀಖ್ (20) ಎಲ್ಬಿ ಬಲೆಗೆ ಸಿಲುಕಿದರು. ನಂತರ ಇಮಾಮ್ (36) ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಕೀಪರ್ ರಾಹುಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ, ಈ ಸಂದರ್ಭ ಜೊತೆಯಾದ ಪಾಕ್ ಅನುಭವಿ ಬ್ಯಾಟರ್ ಗಳಾದ ನಾಯಕ ಬಾಬರ್ ಅಝಂ ಹಾಗೂ ಮೊಹಮ್ಮದ್ ರಿಝ್ವಾನ್ ಎಚ್ಚರಿಕೆಯ ಆಟ ಪ್ರದರ್ಶಿಸಿದರು.

ಭಾರತೀಯ ಬೌಲರ್ ಗಳು ಮರ್ಮವನ್ನು ಅರಿತ ಬಾಬರ್-ರಿಝ್ವಾನ್ ಜೋಡಿ 82 ರನ್ಗಳ ಕಾಣಿಕೆ ನೀಡಿದರು. ಫಾರ್ಮ್ ವೈಫಲ್ಯದಿಂದ ಬಳಲುತ್ತಿದ್ದ ಬಾಬರ್ ಅರ್ಧಶತಕ ಸಿಡಿಸಿದರು. ಆದರೆ, 50 ರನ್ ಗಳಿಸಿದ ಕೂಡಲೇ ಬಾಬರ್ ಅವರು ಸಿರಾಜ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಇದರ ಬೆನ್ನಲ್ಲೆ ಕುಲ್ದೀಪ್, ಸೌದ್ ಶಕೀಲ್ (6) ಅವರನ್ನು ಎಲ್ಬಿಡಬ್ಲ್ಯೂ ಮಾಡಿದರೆ, ಇಫ್ತಿಖರ್ ಅಹ್ಮದ್ರನ್ನು (4) ಬೌಲ್ಡ್ ಮಾಡಿದರು. ಅತ್ತ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದ ರಿಝ್ವಾನ್ 49 ರನ್ ಗಳಿಸಿದ್ದಾಗ ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಶಬಾದ್ ಖಾನ್ ಕೂಡ 2 ರನ್ಗೆ ಔಟಾದರು.

155 ರನ್ಗೆ 3ನೇ ವಿಕೆಟ್ ಕಳೆದುಕೊಂಡ ಪಾಕಿಸ್ತಾನ 171 ರನ್ ಆಗುವ ಹೊತ್ತಿಗೆ 7 ವಿಕೆಟ್ ಪತನಗೊಂಡಿತು. ದಿಢೀರ್ ಕುಸಿತದಿಂದ ಬಾಬರ್ ಪಡೆ ಮೇಲೇಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 42.5 ಓವರ್ಗಳಲ್ಲಿ 191 ರನ್ಗಳಿಗೆ ಆಲೌಟ್ ಆಯಿತು. ಭಾರತ ಪರ ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ತಲಾ 2 ವಿಕೆಟ್ ಕಿತ್ತರು.

Leave a Reply

Your email address will not be published. Required fields are marked *

error: Content is protected !!