9

ಬಳ್ಳಾರಿ: ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ವಿವಿಧ ಬಗೆಯ ಪ್ರಕರಣಗಳು ರಾಜಿ ಸಂಧಾನ
11,634 ಪ್ರಕರಣ ಇತ್ಯರ್ಥ, ರೂ.51,03,97,305 ಮೊತ್ತ ಪರಿಹಾರ ವಸೂಲು

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 09- ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಒಳಗೊಂಡು ಒಟ್ಟು 31 ನ್ಯಾಯಾಲಯಗಳಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್ ಸುಸೂತ್ರವಾಗಿ ನಡೆದು, ವಿವಿಧ ವ್ಯಾಜ್ಯಗಳ ಪ್ರಕರಣಗಳು ವಿಲೇವಾರಿಯಾದವು.
ಅದಾಲತ್ ನಲ್ಲಿ ಒಟ್ಟು 29 ಬೆಂಚ್ ಗಳನ್ನು ಹಾಕಲಾಗಿತ್ತು. ವ್ಯಾಜ್ಯಪೂರ್ವ ಹಾಗೂ ಬಾಕಿಯಿರುವಂತಹ ಪ್ರಕರಣಗಳಲ್ಲಿ ಇತ್ಯರ್ಥವಾಗುವಂತಹ 15,336 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಆ ಪೈಕಿ 11,634 ಪ್ರಕರಣಗಳನ್ನು ಇತ್ಯರ್ಥಪಡಿಸಿ, ಅದರಿಂದ ಒಟ್ಟು ರೂ.51,03,97,305.1 ಮೊತ್ತ ಪರಿಹಾರ ವಸೂಲು ಮಾಡಲಾಗಿದೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಜಿ.ಶಾಂತಿ ಅವರು, ಖುದ್ದಾಗಿ ಪ್ರಕರಣಗಳ ವಿಲೇವಾರಿ ಮಾಡುವಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅದರಂತೆ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿರುವ ಎಲ್ಲಾ ನ್ಯಾಯಾಲಯಗಳಲ್ಲಿಯೂ ಸಹ ಬಾಕಿಯಿರುವ ಪ್ರಕರಣಗಳ ಕುರಿತಾಗಿ ಲೋಕ್-ಅದಾಲತ್‌ ಮೂಲಕ ರಾಜಿ ಸಂಧಾನ ನಡೆಯಿತು.
ಸಾರ್ವಜನಿಕರು-ಕಕ್ಷಿದಾರರು ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿಕೊಳ್ಳುವುದು ಉತ್ತಮ ಜೀವನ ನಡೆಸಲು ಒಂದು ಸದಾವಕಾಶ ಎಂದು ನ್ಯಾಯಾಧೀಶರಾದ ಕೆ.ಜಿ.ಶಾಂತಿ ಅವರು ತಿಳಿಸಿದರು.
ತ್ವರಿತ ನ್ಯಾಯಕ್ಕಾಗಿ ಕಕ್ಷಿದಾರರು ಮುತುವರ್ಜಿ ವಹಿಸಿಕೊಂಡು, “ರಾಷ್ಟ್ರೀಯ ಲೋಕ್ ಅದಾಲತ್”ನಲ್ಲಿ ಭಾಗವಹಿಸಿದರೆ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆ ಹರಿಸಿಕೊಂಡು ಸಾಮರಸ್ಯ ಜೀವನ ನಡೆಸಬಹುದು ಎಂದರು.
ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿಗೆ ತೆಗೆದುಕೊಂಡಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನ್ಯಾಯಾಲಯದ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಯ ಸಹಕಾರದೊಂದಿಗೆ ಮುಂದಿನ ದಿನಮಾನಗಳಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಕಾರ್ಯಪ್ರವೃತ್ತರಾಗುತ್ತಾರೆ ಎಂದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಮಹಿಳೆಯರ ಪ್ರೋತ್ಸಾಹಕ್ಕಾಗಿ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ಇತ್ಯರ್ಥ ಪಡಿಸಲು ರಚಿಸಿರುವ ಬೆಂಚ್ ಗಳಲ್ಲಿ ನ್ಯಾಯಾಧೀಶರೊಂದಿಗೆ ಮಹಿಳಾ ವಕೀಲರು ಇದ್ದದ್ದು ವಿಶೇಷವಾಗಿ ಕಂಡುಬಂತು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ರಾಜೇಶ್ ಎನ್.ಹೊಸಮನೆ ಸೇರಿದಂತೆ ವಿವಿಧ ನ್ಯಾಯಾಲಯದ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಹಾಗೂ ಕಕ್ಷಿದಾರರು ಇದ್ದರು.

Leave a Reply

Your email address will not be published. Required fields are marked *

error: Content is protected !!