ಉಸ್ತುವಾರಿ ಸಚಿವರನ್ನು ಜಿಲ್ಲೆಯಿಂದ ತೊಲಗಿಸಿ ಅಂಗನವಾಡಿಯಲ್ಲಿ ಅಕ್ರಮ ಸ್ವಪಕ್ಷದವರೇ ಆರೋಪ : ಚೆನ್ನಬಸವನಗೌಡ ಪಾಟೀಲ್
ಕರುನಾಡ ಬೆಳಗು ಸುದ್ದಿ
ವಿಜಯನಗರ,11- ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ತಿಂಗಳಲ್ಲೇ ಸರ್ಕಾರದ ಅಸಲಿ ಬಣ್ಣ ಬಯಲಾಗಿದೆ. ಸುಳ್ಳು ಗ್ಯಾರಂಟಿಗಳನ್ನು ಜನರಿಗೆ ನೀಡಿ ರಾಜ್ಯವನ್ನು ಬಡತನದತ್ತ ತಳ್ಳುತ್ತಿದೆ ಎಂದು ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಹೊಸಪೇಟೆ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತ, ಜಿಲ್ಲಾ ಉಸ್ತುವಾರಿ ಸಚಿವರನ್ನು ಜಿಲ್ಲೆಯಿಂದ ತೊಲಗಿಸಿ ಎಂದು ಆಡಳಿತ ಪಕ್ಷದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೇಳಿದ್ದಾರೆ. ಈ ಸರ್ಕಾರ ಅಥವಾ ಸಿಎಂಗೆ ಮಾನ ಮರ್ಯಾದೆ ಇದ್ದರೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ ವಾಪಾಸ್ ಕರೆಸಿಕೊಳ್ಳಬೇಕು ಎಂದು ಪಕ್ಷದ ಮೂಲಕ ಮನವಿ ಮಾಡುತ್ತೇನೆ. ಸಚಿವ ಜಮೀರ್ ಕಲೆಕ್ಷನ್ ಗಾಗಿ ಪ್ರತಿ ಇಲಾಖೆಯಲ್ಲೂ ಏಜೆಂಟ್ ಗಳನ್ನು ಇಟ್ಟಿದ್ದಾರೆ ಮತ್ತು ಅಂಗನವಾಡಿಯಲ್ಲಿ ಮೂರು ತಿಂಗಳ ರೇಷನ್ ಕೂಡದೆ ಸುಮಾರು 5 ಕೋಟಿ ಅಕ್ರಮ ನಡೆದಿದೆ ಸಮಗ್ರ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ನ ಸ್ವಪಕ್ಷದವರೇ ಅಗ್ರಹಿಸುತ್ತಿದ್ದಾರೆ ಎಂದರು.
ಮುಂಬರುವ ಲೋಕಸಭಾ ಚುನಾವಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಪಕ್ಷವನ್ನು ಗೆಲ್ಲಿಸೋಣ. ಸದಸ್ಯತ್ವ ಅಭಿಯಾನ ಸೇರಿ ಅನೇಕ ಕಾರ್ಯಗಳನ್ನು ಈಗಾಗಲೇ ಮಾಡಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಬರುವ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಮಹಾ ಘಟಬಂಧನದ ಅಜೆಂಡಾವನ್ನು ವಿಫಲಗೊಳಿಸಿ ಮೋದಿಜಿ ಅವರ ಕೈಬಲಪಡಿಸೋಣ. ಮೋದಿಜಿಯನ್ನು ಮೂರನೇ ಬಾರಿ ಪ್ರಧಾನಿಯನ್ನಾಗಿ ಮಾಡೋಣ ಎಂದು
ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಮಾತನಾಡಿ, ಲೋಕಸಭಾ ಚುನಾವಣೆ ನಿಮಿತ್ತ ಚುನಾವಣಾ ನಿರ್ವಹಣಾ ಸಮಿತಿ ರಚಿಸಲಾಗಿದೆ. ಅವರೇ ಸುಪ್ರೀಂ ಅಲ್ಲ ನಮಗೆಲ್ಲ ಪಕ್ಷವೇ ಸುಪ್ರೀಂ ಆಗಿದೆ. ಪ್ರತಿಯೊಬ್ಬರಿಗೂ ಒಂದು ಮಂಡಲದ ಜವಾಬ್ದಾರಿ ನೀಡಲಾಗುತ್ತದೆ. ಅವರೆಲ್ಲ ಮಂಡಲದಲ್ಲಿ ಪ್ರವಾಸ ಮಾಡಿ ಮಂಡಲ ಅಧ್ಯಕ್ಷರಿಗೆ ವರದಿ ಮಾಡುತ್ತಾರೆ. ನಮ್ಮ ಸಮಿತಿ ಕೇವಲ ಸಲಹೆಗಳನ್ನು ಮಾತ್ರ ನೀಡಲಿದೆ. ಉಳಿದಿದ್ದೆಲ್ಲ ಜಿಲ್ಲಾಧ್ಯಕ್ಷರು ಕಾರ್ಯಗತಗೊಳಿಸುತ್ತಾರೆ ಎಂದರು.
ದೇಶದಲ್ಲಿ ಮೋದಿಯವರು ಮೂರನೇ ಬಾರಿ ಪ್ರಧಾನಿ ಆಗುವುದನ್ನು ನಾವೆಲ್ಲ ಸೇರಿ ಮಾಡಬೇಕಿದೆ. ಬರುವ ಮೂರು ತಿಂಗಳಲ್ಲಿ ಸಕ್ರಿಯರಾಗಿ ಜವಾಬ್ದಾರಿಯಿಂದ ಕೆಲಸ ಮಾಡಿ ಪ್ರತಿ ಮತದಾರರನ್ನು ಭೇಟಿ ಮಾಡಿ ಪಕ್ಷ ಗೆಲ್ಲಿಸೋಣ ಎಂದು ಮನವಿ ಮಾಡಿದರು.
ಹಡಗಲಿ ಶಾಸಕ ಕೃಷ್ಣ ನಾಯ್ಕ್ ಮಾತನಾಡಿ, ನಾವು ಶಾಸಕರಾಗಿ ಎಂಟು ತಿಂಗಳಾಯಿತು. ಇದುವರೆಗೂ ಒಂದೇ ರೂಪಾಯಿಯ ಅನುದಾನ ಈ ಸರ್ಕಾರದಿಂದ ಬಂದಿಲ್ಲ. ಅನುದಾನ ಹಂಚಿಕೆಯ ಕುರಿತು ಇಲಾಖೆಗಳ ಅಧಿಕಾರಿಗಳನ್ನು ಕೇಳಿದರೆ ಅವರ ಬಳಿ ಉತ್ತರವಿಲ್ಲ. ಕೇವಲ ಘೋಷಣೆ ಮಾಡುತ್ತಾರೆ ಆದರೆ ಆರ್ಥಿಕ ಇಲಾಖೆಯಿಂದ ಒಂದೇ ಒಂದು ಕಡತಕ್ಕೆ ಅನುಮೋದನೆ ಸಿಗುತ್ತಿಲ್ಲ. ಇದೇ ಈ ಸರ್ಕಾರದ ದೊಡ್ಡ ಸಾಧನೆ.
ನಮ್ಮಗಳ ಮುಂದೆ ಮೋದಿಜಿಯವರನ್ನು ಮೂರನೇ ಬಾರಿಗೆ ಪಿಎಂ ಮಾಡುವ ಜವಾಬ್ದಾರಿ ಇದೆ. ಕೇಂದ್ರದಲ್ಲಿ ಮತ್ತೊಮ್ಮೆ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಎಲ್ಲರೂ ಸೇರಿ ಪಕ್ಷ ಸಂಘಟಿಸಿ ಲೋಕಸಭಾ ಚುನಾವಣೆ ಗೆಲ್ಲೋಣ ಎಂದರು.
ವಿಧಾನಸಭೆಯ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರೆ ಅಸಮಾಧಾನ ಹೊಂದಿದ್ದಾರೆ. ಈ ಸರ್ಕಾರದಿಂದ ಬಿಜೆಪಿ ಶಾಸಕರಿಗಷ್ಟೇ ಅಲ್ಲ ಕಾಂಗ್ರೆಸ್ ಶಾಸಕರಿಗೂ ಒಂದೇ ಒಂದು ಪೈಸೆ ಅನುದಾನವನ್ನು ನೀಡಿಲ್ಲ. ಇದು ಅಭಿವೃದ್ಧಿ ಕುಂಠಿತಗೊಳಿಸುವ ಕೆಲಸ. ಕೇಂದ್ರದಲ್ಲಿ ಮೂರನೆ ಬಾರಿಗೆ ಮೋದಿಜಿ ಪ್ರಧಾನಿಯಾಗುವುದ ಶತಃಸಿದ್ಧ ಎಂದರು.
ಕಾರಗಯಕಾರಿಣಿ ಸಭೆಯಲ್ಲಿ ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಬಲ್ಲಾಹುಣ್ಸಿ ರಾಮಣ್ಣ, ಸಂಜೀವರೆಡ್ಡಿ, ಜೀರೆ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಆರುಂಡಿ ಸುವರ್ಣಾ, ಜಿಲ್ಲಾ ಮಾಧ್ಯಮ ಸಂಚಾಲಕ ಬಸವರಾಜ ಕರ್ಕಿಹಳ್ಳಿ, ಸಹ ಸಂಚಾಲಕಿ ಅನುರಾಧ, ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್, ಸಿರಾಜ್ ಬಾವಿಹಳ್ಳಿ, ಸಾಲಿ ಸಿದ್ದಯ್ಯಸ್ವಾಮಿ, ಭಾರತಿ ಪಾಟೀಲ್, ಶಿವಶಂಕರ್, ಮಂಡಲಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಜಿಲ್ಲಾ ಹಾಗೂ ಮಂಡಲಗಳ ಪದಾಧಿಕಾರಿಗಳು ಹಾಜರಿದ್ದರು.
