ನಾಳೆ ಮಾರ್ಚ 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ
ನಿಷೇಧಾಜ್ಞೆ ಜಾರಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ 28- ಕೊಪ್ಪಳ ಜಿಲ್ಲೆಯಾದ್ಯಂತ ಮಾರ್ಚ್ ೧ ರಿಂದ ಮಾ.೨೦ ರವರೆಗೆ ನಡೆಯುವ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆ ನಿಮಿತ್ತ ಪರೀಕ್ಷಾ ಕೇಂದ್ರಗಳ ಸುತ್ತಲು ೨೦೦ ಮೀಟರ್ ಆವರಣವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ನಲಿನ್ ಅತುಲ್ ಅವರು ಆದೇಶ ಹೊರಡಿಸಿದ್ದಾರೆ.
ಮೊದಲ ಹಂತದ ದ್ವಿತೀಯ ಪಿಯುಸಿ ಪರೀಕ್ಷೆಯು ಮಾರ್ಚ್ ೧ರಿಂದ ಮಾರ್ಚ್ ೨೦ರ ವರೆಗೆ ಬೆಳಿಗ್ಗೆ ೧೦ ಗಂಟೆ ಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ಕೊಪ್ಪಳ ಜಿಲ್ಲೆಯ ಒಟ್ಟು ೨೪ ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, ಪರೀಕ್ಷೆಗಳನ್ನು ಸುಗಮ ಮತ್ತು ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀಟರ್ ಅಂತರದ ಪ್ರದೇಶದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ೨೦೨೩ರ ಕಲಂ ೧೬೩ ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ತಾಲ್ಲೂಕವಾರು ಪರೀಕ್ಷೆ ಕೇಂದ್ರಗಳ ವಿವರ: ಕೊಪ್ಪಳ ತಾಲೂಕಿನಲ್ಲಿ ೬ ಪರೀಕ್ಷಾ ಕೇಂದ್ರಗಳು, ಗಂಗಾವತಿ ತಾಲ್ಲೂಕಿನಲ್ಲಿ ೯ ಪರೀಕ್ಷಾ ಕೇಂದ್ರಗಳು, ಕುಷ್ಟಗಿ ತಾಲ್ಲೂಕಿನಲ್ಲಿ ೪ ಪರೀಕ್ಷಾ ಕೇಂದ್ರಗಳು ಯಲಬುರ್ಗಾ ತಾಲ್ಲೂಕಿನಲ್ಲಿ ೨ ಪರೀಕ್ಷಾ ಕೇಂದ್ರಗಳು ಕುಕನುರು ತಾಲ್ಲೂಕಿನಲ್ಲಿ ೧ ಪರೀಕ್ಷಾ ಕೇಂದ್ರ, ಕಾರಟಗಿ ತಾಲ್ಲೂಕಿನಲ್ಲಿ ೧ ಪರೀಕ್ಷಾ ಕೇಂದ್ರ, ಕನಕಗಿರಿ ತಾಲ್ಲೂಕಿನಲ್ಲಿ ೧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ.
ನಿಷೇಧಾಜ್ಞೆ : ಜಾರಿಯನ್ವಯ ಪರೀಕ್ಷಾ ಕೇಂದ್ರಗಳ ಸುತ್ತಲೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ. ಮೊಬೈಲ್, ಪೇಜರ್, ಜರಾಕ್ಸ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಹಾಗೂ ನಿಯೋಜಿತ ಶಿಕ್ಷಕರನ್ನು ಜಾಗೃತ ದಳದವರನ್ನು ಹೊರತುಪಡಿಸಿ ಇನ್ನುಳಿದವರಿಗೆ ಪರವಾನಿಗೆ ಇಲ್ಲದೆ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಮಾಡುವುದನ್ನು ನಿಷೇಧಿಸಿದೆ. ಪರೀಕ್ಷಾ ಕೇಂದ್ರಗಳ ಸುತ್ತಲೂ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ. ಈ ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
