
ಸಮಾಜಕ್ಕೆ ಒಳಿತಾಗುವ ಬರಹ ಮೂಡಿ ಬರಲಿ
ಕರುನಾಡ ಸುದ್ದಿ ಕೊಪ್ಪಳ: ಸಪ್ತ ಸ್ವರಗಳನ್ನು ಬಳಸಿ ಉತ್ತಮ ಸಂಗಿತಗಾರ ಸಾವಿರಾರು ರಾಗಗಳನ್ನು ಸಂಯೋಜಿಸುತ್ತಾನೆ. ಅದರಂತೆ ಒಬ್ಬ ಪತ್ರಕರ್ತ ಇರುವ ಮೂಲಾಕ್ಷರಗಳನ್ನೇ ಬಳಸಿ ಸಾಮಾಜಿಕ ಪ್ರಜ್ಞೆ ಮೆರೆಯುತ್ತಾನೆ. ಈ ನಿಟ್ಟಿನಲ್ಲಿ ಸಂತೋಷ ದೇಶಪಾಂಡೆ ನೇತೃತ್ವದಲ್ಲಿ ಮೂಡಿ ಬಂದಿರುವ ಕರುನಾಡ ಬೆಳಗು ದಿನ ಪತ್ರಿಕೆ ಸಮಾಜ ಜಾಗೃತಿ ಮೂಡಿಸವಲ್ಲಿ ಯಶಸ್ವಿಯಾಗಲಿ ಎಂದು ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಆಶಿಸಿದರು.
ನಗರದ ಗವಿಮಠ ಆವರಣದಲ್ಲಿ ಸೋಮವಾರ ಕರುನಾಡ ಬೆಳಗು ದಿನ ಪತ್ರಿಕೆ, ವೆಬ್ ಪತ್ರಿಕೆ ಹಾಗೂ ಯೂಟ್ಯೂಬ್ ಚಾನಲ್ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.
ನಾವು, ನೀವೆಲ್ಲ ಕಲಿತಿರುವುದು ಕನ್ನಡ ಮೂಲಾಕ್ಷರಗಳನ್ನೇ. ಕವಿ ಕವಿತೆ ಕಟ್ಟಿದರೆ, ಕಥೆಗಾರ ಅದ್ಭುತ ಕಥೆ ಸೃಷ್ಟಿಸುತ್ತಾನೆ. ನಾವು, ನೀವೆಲ್ಲ ಮೂಲಾಕ್ಷರ ಕಲಿತರೂ ಭಾಷೆಗೆ ಮೂಲವಾಗಿದ್ದೇವೆ. ಆದರೆ, ಒಬ್ಬ ಉತ್ತಮ ಪತ್ರಕರ್ತ ಇವೇ ಅಕ್ಷರದಿಂದ ಸಮಾಜದ ಮೇಲೆ ಬೆಳಕು ಚೆಲ್ಲುತ್ತಾನೆ. ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾನೆ. ಸಂತೋಷ ದೇಶಪಾಂಡೆ ಈಗಾಗಲೇ ಹಲವು ಸಾಮಾಜಿಕ ಹೋರಾಟ, ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿದ್ದಾನೆ. ನೂತನ ಪತ್ರಿಕೆ ಆರಂಭಿಸಿದ್ದು, ಸಮಾಜಕ್ಕೆ ಒಳಿತಾಗುವ ಇನ್ನಷ್ಟು ಅತ್ಯುತ್ತಮ ಬರಹಗಳು ಮೂಡಿ ಬರಲಿ ಎಂದು ಹರಸಿದರು.
ಹಿರಿಯ ಪತ್ರಕರ್ತ ಸೋಮರಡ್ಡಿ ಅಳವಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಾಗರಿಕ ಕನ್ನಡ ದಿನ ಪತ್ರಿಕೆ ಸಂಪಾದಕ ಅಜಿತ್ ಕುಮಾರ್ ಹೊಂಬಾಳೆ ಪತ್ರಿಕೆ ಬಿಡುಗಡೆ ಮಾಡಿದರು. ಕರುನಾಡ ಬೆಳಗು ಪತ್ರಿಕೆ ಸಂಪಾದಕ ಸಂತೋಷ ದೇಶಪಾಂಡೆ ಅನಿಸಿಕೆ ಹಂಚಿಕೊಂಡರು.