
ಸರ್ಕಾರದ ಯೋಜನೆಗಳು ಅರ್ಹರಿಗೆ ಸಕಲಕ್ಕೆ ತಲುಪಲಿ
ಅಧಿಕಾರಿಗಳಿಗೆ ಸಂಸದ ರಾಜಶೇಖರ ಹಿಟ್ನಾಳ ಸೂಚನೆ
ಹಿರೇವಂಕಲಕುಂಟಾದಲ್ಲಿ ಹೋಬಳಿ ಮಟ್ಟದ ಪ್ರಗತಿ ಪರಿಶೀಲನಾ ಸಭೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,09- ಸರ್ಕಾರದ ಜನಪರ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಕಾಲಕ್ಕೆ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಶ್ರೀಬೀರಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಜನರ ಶ್ರೇಯೋಭಿವೃದ್ಧಿಗೆ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಸಾಮಾನ್ಯರಿಗೆ ತಲುಪಿಸುವ ಕೆಲಸವಾಗಬೇಕಿದೆ. ಗ್ರಾ.ಪಂ. ಹಂತದ ಚುನಾಯಿತ ಜನಪ್ರತಿನಿಧಿಗಳು ಜನರ ಮಧ್ಯೆ ಇದ್ದು, ಕೆಲಸ ಮಾಡುವುದರಿಂದ ಸರ್ಕಾರಗಳ ನಾನಾ ಇಲಾಖೆಗಳ ಯೋಜನೆ ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಹಳ್ಳಿಗಳಲ್ಲಿ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳಿಗೆ ಯೋಜನೆಗಳ ಮಾಹಿತಿ ಕೊರತೆ ಇದೆ. ಪರಿಣಾಮ ಜನಸಾಮಾನ್ಯರು ಇಲಾಖೆಗಳ ಸೌಲಭ್ಯಗಳನ್ನು ಬಯಸಿ ಅಲೆದಾಡುವ ಪರಿಸ್ಥಿತಿಯನ್ನು ಅರಿತುಕೊಂಡು ಪ್ರತಿ ಆರು ತಿಂಗಳಿಗೊಮ್ಮೆ ಹೋಬಳಿ ಹಂತದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿಯವರ ದೂರದೃಷ್ಟಿಯ ಫಲವಾಗಿ ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕಿನ ೩೯೦ ಗ್ರಾಮಗಳಿಗೆ ಶಾಶ್ವತ ನೀರು ಪೂರೈಕೆಯಾಗಬೇಕು ಎನ್ನುವ ಜನಪರ ಕಾಳಜಿ ಇಟ್ಟುಕೊಂಡು ೭೬೩ ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿವ ನೀರಿನ ಯೋಜನೆ ಮಂಜೂರು ಮಾಡಿ ಅನುಷ್ಠಾನ ಮಾಡಿದ್ದಾರೆ. ಇದರ ಫಲವಾಗಿ ಜನಸಾಮಾನ್ಯರಿಗೆ ಕುಡಿವ ನೀರಿನ ದಾಹವನ್ನು ನೀಗಿಸಲು ಅನುಕೂಲವಾಗಿದೆ. ಜೆಜೆಎಂ ಯೋಜನೆಯಡಿ ಕೆಲ ಗುತ್ತಿಗೆದಾರರು ಅವೈಜ್ಞಾನಿಕವಾಗಿ ಅಪೂರ್ಣ ಕಾಮಗಾರಿ ನಿರ್ವಹಿಸಿ ಲೋಪ ಎಸಗಿರುವ ಹಾಗೂ ಅಪೂರ್ಣ ಕಾಮಗಾರಿಗೆ ಕಾಮಗಾರಿ ಧೃಢೀಕರಣ ಪತ್ರ ಪಡೆದುಕೊಂಡು ಪೂರ್ಣ ಪ್ರಮಾಣದ ಬಿಲ್ ಪಾವತಿಸಿಕೊಂಡಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದು, ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
ಅಪೂರ್ಣಗೊಂಡ ಕಾಮಗಾರಿಗಳ ಮಾಹಿತಿ ಸಂಗ್ರಹಿಸಿ ಪುನಃ ಟೆಂಡರ್ ಕರೆದು ವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸುವದಕ್ಕೆ ಕ್ರಮ ಕೈಗೊಳ್ಳಲಾಗುವದು. ಜೆಜೆಎಂ ಯೋಜನೆಯಡಿ ಕುಡಿವ ನೀರಿನ ನಿರ್ವಹಣೆಗಾಗಿ ಪ್ರತಿ ಗ್ರಾಮ ಪಂಚಾಯತಿಗೆ ಅನುದಾನ ಬಿಡುಗಡೆ ಮಾಡುವದಕ್ಕೆ ಅಧಿಕಾರಿಗಳೊಂದಿಗೆ ಮಾತನಾಡಲಾಗಿದೆ. ಸಾಧ್ಯವಾದಷ್ಟು ಜನ ವಸತಿ ಪ್ರದೇಶಗಳಿಗೆ ಜೆಜೆಎಮ್ ಯೋಜನೆಯಡಿ ೨೪ ಗಂಟೆ ನೀರು ಪೂರೈಸುವದಕ್ಕೆ ಅಧಿಕಾರಿಗಳು ಕ್ರಮ ವಹಿಸಬೇಕು. ಬೇಸಿಗೆ ಹಿನ್ನಲೆಯಲ್ಲಿ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಗಮನ ಹರಿಸಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವರದಾನ:– ಶಾಸಕ ಬಸವರಾಜ ರಾಯರೆಡ್ಡಿಯವರ ರೈತ ಪರವಾದ ಕಾಳಜಿಯಿಂದ ಕೆರೆ ತುಂಬಿಸುವ ಯೋಜನೆ ಜಾರಿಯಾದ ಹಿನ್ನಲೆಯಲ್ಲಿ ೨೮ ಕೆರೆಗಳು ಭರ್ತಿಯಾಗಿವೆ.ಇದರಿಂದ ರೈತರ ಕೊಳವೆ ಬಾವಿಯಲ್ಲಿ ಅಂತರ್ಜಲ ವೃದ್ದಿಯಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಹೆಚ್ಚು ಅನುಕೂಲವಾಗಿದೆ. ಕೆರೆ ತುಂಬಿ ಹರಿದು ಹೋಗುವ ಹೆಚ್ಚುವರಿ ನೀರನ್ನು ತಡೆಗಟ್ಟಿ ಕೃಷಿಹೊಂಡ ನಿರ್ಮಾಣ ಮಾಡಿಕೊಳ್ಳುವ ಮೂಲಕ ಸಂಗ್ರಹ ಮಾಡಿಕೊಳ್ಳುವದಕ್ಕೆ ರೈತರ ಸಂಕಲ್ಪ ಮಾಡಬೇಕು. ಒಣ ಬೇಸಾಯದಿಂದ ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಮುಂದೆ ಬರುತ್ತಿದ್ದಾರೆ. ಸಾಧ್ಯವಾದರೇ ದೊಡ್ಡ ದೊಡ್ಡ ಹಳ್ಳ, ನಾಲಾಗಳಿಗೆ ಚೆಕ್ ಡ್ಯಾಂ ನಿರ್ಮಾಣ ಮಾಡುವದಕ್ಕೆ ಸಚಿವರ ಗಮನ ಸೆಳೆಯಲಾಗುವದು.ಕೆರೆ ತುಂಬಿಸುವ ಯೋಜನೆಯಿಂದ ರೈತರ ಬದುಕು ಹಸನವಾಗುತ್ತಿರುವದಕ್ಕೆ ಪ್ರತಿಯೊಬ್ಬರು ಹೆಮ್ಮೆ ಪಡಬೇಕಾಗಿದೆ ಎಂದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣ ಮಾಡಿಕೊಂಡ ಮನೆಗಳ ಫಲಾನುಭವಿಗಳ ಖಾತೆಗೆ ಹಲವು ವರ್ಷಗಳಿಂದ ಬಿಲ್ ಪಾವತಿಯಾಗದಿರುವದು ನನ್ನ ಗಮನಕ್ಕೆ ಬಂದಿದೆ. ಇದನ್ನು ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಯತ್ನಿಸಲಾಗುವದು ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಹಿರೇವಂಕಲಕುಂಟಾ ಗ್ರಾಪಂ ಅಧ್ಯಕ್ಷೆ ಹುಲಿಗೇಮ್ಮ ತಳವಾರ, ದಿಶಾ ಸಮಿತಿ ಸದಸ್ಯೆ ಡಾ.ನಂದಿತಾ ದಾನರೆಡ್ಡಿ, ತಹಶೀಲ್ದಾರ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರ, ಪ್ರಮುಖರಾದ ಕೆರಿಬಸಪ್ಪ ನಿಡಗುಂದಿ ಸೇರಿದಂತೆ ಇನ್ನಿತರರು ಇದ್ದರು.ನಾನಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ತಮ್ಮ ಇಲಾಖೆಯ ಪ್ರಗತಿ ವರದಿ ಮಂಡನೆ ಮಾಡಿದರು.