
ಸಾಲಭಾದೆ: ಯುವ ರೈತ ಆತ್ಮಹತ್ಯೆ
ಕರುನಾಡ ಬೆಳಗು ಸುದ್ದಿ
ಕುಕನೂರು16-ಸಾಲಭಾದೆ ತಾಳದೆ ಯುವ ರೈತ ನೊಬ್ಬ ನೇಣಿಗೆ ಶರಣಾದ ಘಟನೆ ಕುಕುನೂರು ತಾಲೂಕಿನ ಮಂಡಲಗಿರಿ ಗ್ರಾಮದಲ್ಲಿ ಸಂಭವಿಸಿದೆ.
ರಾಜ್ಯದ ಬಹುತೇಕ ಕಡೆಗಳಲ್ಲಿ ಬರ ತಾಂಡವವಾಡುತ್ತಿದ್ದು ಅದರಲ್ಲಿಯೂ ರೈತನ ಸಾಲ ಹಾಗೂ ಬಡ್ಡಿ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು ರೈತ ವರ್ಗ ಕಂಗಾಗಲಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ತಾಲೂಕಿನ ಮಂಡಲಗಿರಿ ಗ್ರಾಮದ ಪ್ರವೀಣ ರಾಮಣ್ಣ ಕುರಿ (24) ಬುಧವಾರ ತಡರಾತ್ರಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಮಂಡಲಗಿರಿ ಗ್ರಾಮದಿಂದ ಸಿದ್ನೆಕೊಪ್ಪ ರಸ್ತೆಯಲ್ಲಿರುವ ದಂಡಿ ದುರ್ಗಮ್ಮನ ದೇವಸ್ಥಾನದ ಬಳಿ ಇರುವ ತಮ್ಮ ಕೃಷಿ ಜಮೀನಿನಲ್ಲಿರುವ ಬೇವಿನಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಮೃತ ಪ್ರವೀಣ ಕುರಿ ಅವರ ಸಹೋದರ ಮಂಜುನಾಥ ಕುರಿ ವರದಿಗಾರರೊಂದಿಗೆ ಮಾತನಾಡುತ್ತಾ ಕೃಷಿ ಚಟುವಟಿಕೆ ಸಲುವಾಗಿ ಮಾಡಿದ ಸಾಲ ವಿಪರೀತವಾಗಿದ್ದು ನಿನ್ನೆ ಮಧ್ಯಾಹ್ನ ಮನೆಯಲ್ಲಿ ಸಾಲದ ಬಗ್ಗೆ ಗಂಭೀರ ಚರ್ಚೆ ನಡೆಸಿರುವುದಾಗಿ ನಂತರ ಸಾಯಂಕಾಲದಿಂದ ನಾಪತ್ತೆಯಾಗಿದ್ದ ಸಹೋದರ ಇಂದು ಬೆಳಿಗ್ಗೆ ಶವವಾಗಿ ದೊರೆತಿರುವುದು ನಮ್ಮ ದುರಾದೃಷ್ಟ ಎಂದು ವರದಿಗಾರರಿಗೆ ತಿಳಿಸಿರುತ್ತಾರೆ.
ಮೃತ ಪ್ರವೀಣ ಕುರಿ ಕಳೆದ ವಾರ ಇದೇ ಮೇ ಹತ್ತರಂದು ದಾಂಪತ್ಯ ಜೀವನಕ್ಕೆ ಪಾದರ್ಪಣೆ ಮಾಡಿದ್ದರು.ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.