
ಸಿಎಸ್ಆರ್ ನಿಧಿ ಬಳಸಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ : ನಲಿನ್ ಅತುಲ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 25- ಸಿ.ಎಸ್.ಆರ್. ನಿಧಿ ಬಳಸಿ ಶಾಲೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.
2024-25ನೇ ಸಾಲಿನಲ್ಲಿ ಕೈಗೊಳ್ಳುವ ಕಾರ್ಯಕ್ರಮಗಳ ವಿವರದ ಕುರಿತು ಕ್ರಿಯಾ ಯೋಜನೆ ಕುರಿತು ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಕಂಪನಿ ಮುಖ್ಯಸ್ಥರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಿ.ಎಸ್.ಆರ್. ನಿಧಿ ಬಳಸಿ ಅವಶ್ಯವಿರುವ ಶಾಲೆಗಳಲ್ಲಿ ಹೆಚ್ಚಿನ ಕೊಠಡಿಗಳು, ಪ್ರಯೋಗಾಲಯ, ವೃತ್ತಿ ಶಿಕ್ಷಣ, ಸುಸಜ್ಜಿತ ಶೌಚಾಲಯ ಮೂಲಭೂತ ಸೌಕರ್ಯ ಕಲ್ಪಿಸಿ, ಅಂತಹ ಶಾಲೆಗಳನ್ನು ಅಭಿವೃದ್ಧಿ ಮಾಡಲಾಗುವುದು. ಹೆಚ್ಚಿನ ವಿದ್ಯಾರ್ಥಿಗಳು ಇರುವ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಆಯ್ಕೆ ಮಾಡಲಾಗುವುದು. ಇದಲ್ಲದೇ ಈ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ, ಬರ ಸಮಯದಲ್ಲಿ ಕುಡಿಯುವ ನೀರಿನ ಪೂರೈಕೆ, ರಸ್ತೆಗಳ ದುರಸ್ತಿ ಹೀಗೆ ಇತರ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಎಲ್ಲಾ ಕಂಪನಿಗಳು ಸಹಕರಿಸಬೇಕು ಎಂದರು.
2022-23, 2023-24 ನೇ ಸಾಲಿನಲ್ಲಿ ಸಿ.ಎಸ್.ಆರ್. ಅನುದಾನ ಅಡಿಯಲ್ಲಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಎಸ್.ಎಂ.ಚವ್ಹಾಣ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ ಶಿವಕುಮಾರ ಸೇರಿದಂತೆ ಕೊಪ್ಪಳ ಜಿಲ್ಲೆಯ ಕಂಪನಿಗಳಾದ ಕಿರ್ಲೋಸ್ಕರ್, ಕಲ್ಯಾಣಿ, ಮುಕುಂದ ಸುಮಿ, ಎಂ.ಎಸ್. ಮೆಟಲ್, ಕಾಮಿನಿ ಐರನ್, ಭದ್ರಶ್ರೀ, ವನ್ಯ ಸ್ಟೀಲ್, ಧ್ರುವ ದೇಶ, ಪಿಬಿಎಸ್, ಕೊರಮಂಡಲ ಇಂಟರ್‌ನ್ಯಾಷನಲ್ ಲಿ., ಎಂ.ಎಸ್.ಪಿ.ಎಲ್. ಮುಂತಾದ ಕಂಪನಿ ಮುಖ್ಯಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.