ಉತ್ಕೃಷ್ಟ ಗ್ರಂಥಗಳನ್ನು ಜನರಿಗೆ ತಲುಪಿಸಿದ ಕೀರ್ತಿ
ಹಂಪಿಯ ಕನ್ನಡ ವಿಶ್ವ ವಿದ್ಯಾಲಯಕ್ಕಿದೆ: ಕುಲಪತಿ ಡಾ.ಬಿ.ಕೆ.ರವಿ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ)ಜ.09. : ಅನೇಕ ಉತ್ಕೃಷ್ಟ ಗ್ರಂಥಗಳನ್ನು ಜನರಿಗೆ ತಲುಪಿಸುವಂತಹ ಕೀರ್ತಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಬಿ.ಕೆ.ರವಿ ಅವರು ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ನುಡಿಹಬ್ಬ-32ರ ಪ್ರಯುಕ್ತ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದಿಂದ ಜನವರಿ 09ರಂದು ಮಂಟಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 51 ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ರಾಷ್ಟ್ರದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಹೊಸ ಹೊಸ ಪ್ರಯೋಗಗಳನ್ನು ಮಾಡಿದ ಕೀರ್ತಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಭಾಜನವಾಗಿದೆ. ಗ್ರಾಮೀಣ ಮತ್ತು ಇತರ ಬೇರೆ ಭಾಗಗಳ ಜ್ಞಾನವನ್ನು ದಾಖಲೆ ಮಾಡುವಂತಹ ಹಾಗೂ ಈ ನಾಡಿನ ಅನೇಕ ವಿಷಯಗಳ ಬಗ್ಗೆ ಅಧ್ಯಯನ ಮಾಡುವ ವಿನೂತನ ವಿವಿಯಾಗಿದೆ. ಕನ್ನಡ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳು, ಸಂಶೋಧನೆಗಳು ನೋಡಿದರೆ ಇದು ಕೇವಲ ಪದವಿ, ಸ್ನಾತಕೋತ್ತರ ಪದವಿಯನ್ನು ನೀಡುವ ಅಥವಾ ಪಾಠ ಬೋಧಿಸುವ ವಿವಿಯಲ್ಲ. ದೇಶದಲ್ಲೇ 1600 ಪುಸ್ತಕಗಳನ್ನು ಪ್ರಕಟಣೆ ಮಾಡಿರುವ ಪ್ರಸಾರಾಂಗ ಎಲ್ಲಾದರೂ ಇದೆ ಎಂದರೆ ಅದು ಕನ್ನಡ ವಿವಿಯಲ್ಲಿದೆ. ಇದರ ಜೊತೆಗೆ ಭಾಷೆ, ಹಸ್ತಪ್ರತಿ, ಲಿಪಿಗಳು, ಬುಡಕಟ್ಟು ಅಧ್ಯಯನ, ಸಾಮಾಜಿಕ ಕ್ಷೇತ್ರ, ಸಂಸ್ಕೃತಿ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಸಂಶೋಧನೆಗಳನ್ನು ನೀಡುತ್ತಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ ಪರಮಶಿವಮೂರ್ತಿ ಅವರು ಮಾತನಾಡಿ, ಪುಸ್ತಕದ ಬಿಡುಗಡೆ ಮಾಡುವುದು ಒಂದು ಪುಣ್ಯದ ಕೆಲಸವಾಗಿದೆ. ನಮ್ಮ ವಿವಿಯ ಅಧ್ಯಾಪಕರನ್ನು ಒಳಗೊಂಡಂತೆ ನಾಡಿನ ವಿವಿದ ವಿದ್ವಾಂಸರು ರಚಿಸಿದ 51 ಅಮೂಲ್ಯ ಪುಸ್ತಕಗಳು ಈ ದಿನ ಬಿಡುಗಡೆ ಮಾಡಲಾಗಿದೆ. ಪಸ್ತಕಗಳನ್ನು ಓದುವುದು ಆಗದಿದ್ದರೆ ಅವುಗಳ ತಲೆ ಬರಹಗಳನ್ನು ಓದಿದರೆ ಮನಸ್ಸಿಗೆ ಎಷ್ಟೋ ನೆಮ್ಮದಿ ಸಿಗುತ್ತದೆ. ನಮ್ಮಲ್ಲಿರುವ ಅಹಂ ಅನ್ನು ತ್ಯಜಿಸುವ ಕೆಲಸವನ್ನು ಪುಸ್ತಕಗಳು ಮಾಡುತ್ತವೆ. ಬರೆದ ವ್ಯಕ್ತಿ ಇಲ್ಲದಿದ್ದರೂ ಸಹ ಬರವಣಿಗೆ ಅವರ ವಿಚಾರಗಳು ದೀರ್ಘಕಾಲ ಕೆಲಸವನ್ನು ಮಾಡುತ್ತಾ ಹೊಗುತ್ತವೆ. ವಿಶ್ವವಿದ್ಯಾಲಯಗಳನ್ನು ಪೋಷಿಸುವ ಜವಾಬ್ದಾರಿ ಕೇವಲ ಸರಕಾರಗಳದ್ದು ಮಾತ್ರವಲ್ಲದೇ ಸಾರ್ವಜನಿಕರದ್ದೂ ಆಗಿದೆ ಎಂದರು.
ಧಾರವಾಡದ ಹಿರಿಯ ಇತಿಹಾಸತಜ್ಞರು ಹಾಗೂ ಸಂಸ್ಕೃತಿ ಚಿಂತಕರಾದ ಪ್ರೊ. ಲಕ್ಷ್ಮಣ್ ತೆಲಗಾವಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಜಾಜಿ ದೇವೇಂದ್ರಪ್ಪ ಹಾಗೂ ಕಂಪ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಜೆ.ಕೃಷ್ಣ ಅವರು ಬಿಡುಗಡೆಯಾದ ಪುಸ್ತಕಗಳ ಬಗ್ಗೆ ಮಾತನಾಡಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿಜಯ್ ಪೂಣಚ್ಚ ತಂಬಂಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಸಾರಾಂಗ ವಿಭಾಗದ ನಿರ್ದೇಶಕರಾದ ಡಾ. ಶೈಲಜ ಇಂ. ಹಿರೇಮಠ ಅವರು ಸ್ವಾಗತಿಸಿದರು. ಪ್ರಸಾರಾಂಗ ವಿಭಾಗದ ಸಹಾಯಕ ಕುಲಸಚಿವರಾದ ಎಂ.ಎಂ.ಶಿವಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
ಕನ್ನಡ ವಿವಿಯ ನುಡಿ ಹಬ್ಬ 32ರಮಾಹಿತಿ ಕೇಂದ್ರದ ಸಂಚಾಲಕರಾದ ಡಾ.ಮೀನಾಕ್ಷಿ ಸೇರಿದಂತೆ ಇತರರು ಇದ್ದರು.ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಗೂ ನಾಡಗೀತೆಯನ್ನು ಪ್ರಸ್ತುತ ಪಡಿಸಿದವರು.ಸಮಾರಂಭದಲ್ಲಿ ಹಲವು ಗಣ್ಯರು, ವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
