13ರಂದು ಶ್ರೀಅವಿನಾಳೇಶ್ವರ ಜಾತ್ರಾ ಮಹೋತ್ಸವ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 11- ತಾಲೂಕಿನ ಬೆಳವಿನಾಳ ಗ್ರಾಮದ ಶ್ರೀಅವಿನಾಳೇಶ್ವರ ಜಾತ್ರಾ ಮಹೋತ್ಸವ ಮತ್ತು 6ನೇ ವರ್ಷದ ಮಹಾರಥೋತ್ಸವ ದಿ.13 ರಂದು ಸಂಜೆ 5-30ಕ್ಕೆ ವಿಜೃಂಭಣೆಯಿಂದ ಜರಗುವುದು.
ಬೆಳಿಗ್ಗೆ 6 ಗಂಟೆಗೆ ಸುಪ್ರಭಾತ, 7 ಗಂಟೆಗೆ ಪಂಚಾಮೃತ ಅಭಿಷೇಕ, 8ಗಂಟೆಗೆ ಎಲಿಪೂಜೆ ಮತ್ತು ಅಲಂಕಾರ, 8-30ಕ್ಕೆ ಪವಮಾನ ಹೋಮ, ಮಧ್ಯಾಹ್ನ 12 ಗಂಟೆಗೆ ಉಚ್ಚಾಯ ಮತ್ತು ಗಿಡ ತರುವುದು. ಮಧ್ಯಾಹ್ನ 2 ಗಂಟೆಗೆ ಗಂಗಾಪೂಜೆ, ನಂತರ ಸಂಜೆ 4-30 ಗಂಟೆಗೆ ಅಗ್ನಿಹೊಂಡ, ಸಕಲ ಭಕ್ತರಿಂದ ಭಾಜಾಭಜಂತ್ರಿ, ಡೊಳ್ಳು ಕುಣಿತದ ಮಜಲುಗಳೊಂದಿಗೆ ಶ್ರೀಅವಿನಾಳೇಶ್ವರ ಮಹಾರಥೋತ್ಸವ ಭಕ್ತರಿಂದ ವಿಜೃಂಭಣೆಯಿಂದ ಜರುಗುವುದು.
ಸಂಜೆ 4ಗಂಟೆಗೆ ಧಾರ್ಮಿಕ ಸಭೆಗೆ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಮೈನಳ್ಳಿ-ಬಿಕನಳ್ಳಿ-ಬಿಸರಳ್ಳಿ ಶ್ರೀಮದ್ ಉಜ್ಜಯಿನಿ, ಶಾಖಾ ಹಿರೇಮಠ ಶ್ರೀಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಶ್ರೀ ಕಾಲಜ್ಞಾನ ಬ್ರಹ್ಮಸದ್ಗುರು ಶ್ರೀ ಶರಣಬಸವ ಮಹಾಸ್ವಾಮಿಗಳು ತಳ್ಳಿಹಾಳ ಗಜೇಂದ್ರಗಡ, ಹಿರೇಸಿಂದೋಗಿ ಕಪ್ಪತ್ತಮಠದ ಶ್ರೀಚಿದಾನಂದ ಮಹಾಸ್ವಾಮಿಗಳು, ಶ್ರೀಜಡೇಶ್ವರ ಸುಕ್ಷೇತ್ರ, ಹಾಲವರ್ತಿಯ ಕಾಗಿನೆಲೆ ಕನಕಗುರು ಪೀಠದ ಶಾಖಾಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮಿಗಳು ನೇತೃತ್ವವನ್ನು ವಹಿಸುವರು.
ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಈ ಎಲ್ಲ ಕಾರ್ಯಕ್ರಮಗಳಿಗೆ ಆಗಮಿಸಿ ತನು-ಮನ-ಧನದಿಂದ ತಮ್ಮ ಸೇವೆಯನ್ನು ಸಲ್ಲಿಸಿ ಶ್ರೀಅವಿನಾಳೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ಗ್ರಾಮದ ಸಕಲ ಸದ್ಬಕ್ತ ಮಂಡಳಿ ಮತ್ತು ಗ್ರಾಮದ ಗುರು-ಹಿರಿಯರು ವಿನಂತಿಸಿದ್ದಾರೆ.
