
7 ರಂದು ಸಂವೇದನಾಶೀಲ ತರಬೇತಿ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 5- ಭಾರತ ಸರ್ಕಾರದ ಅಂಗ ಸಂಸ್ಥೆಯಾದ ಭಾರತೀಯ ಮಾನಕ ಬ್ಯೂರೋ(ಬಿಐಎಸ್) ಅವರಿಂದ ಭಾರತೀಯ ಗುಣಮಟ್ಟದ ಕುರಿತು ಅರಿವು ಮೂಡಿಸುವ ಸಂವೇದನಾಶೀಲ ತರಬೇತಿ ಕಾರ್ಯಕ್ರಮವನ್ನು ಆಗಸ್ಟ್ 07 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ತರಬೇತಿಯಲ್ಲಿ ಸಾರ್ವಜನಿಕ ಸಂಗ್ರಹಣೆಯಲ್ಲಿ ಗುಣಮಟ್ಟ, ಭಾರತೀಯ ಮಾನದಂಡಗಳಂತೆ ಗುಣಮಟ್ಟದ ಸರ್ಕಾರದ ಯೋಜನೆಗಳು, ಸರ್ಕಾರದ ಕಾಮಗಾರಿಗಳು, ಗ್ರಾಹಕ ವಸ್ತುಗಳ ಗುಣಮಟ್ಟ, ಆರೋಗ್ಯ ಸೇವೆಯ ಗ್ರಾಹಕ ವಸ್ತುಗಳು, ಉತ್ಪನ್ನಗಳು, ಸುರಕ್ಷತಾ ವಸ್ತುಗಳ ಗುಣಮಟ್ಟ, ಉಪಕರಣಗಳ ಪ್ರಮಾಣಿತ ಗುಣಮಟ್ಟ, ಸುಧಾರಣೆ ಹಾಗೂ ಇದಕ್ಕೆ ಸಂಬAಧಪಟ್ಟ ವಿಷಯಗಳ ಕುರಿತು ಬಿಐಎಸ್‌ನ ಅಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅರಿವು ಮೂಡಿಸಿ ಮಾರ್ಗದರ್ಶನ ನೀಡಲಿದ್ದಾರೆ.
ಆದ್ದರಿಂದ ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ತರಬೇತಿ ಕಾರ್ಯಕ್ರಮಕ್ಕೆ ಹಾಜರಾಗಿ, ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.