ಮೆಕ್ಕೆಜೋಳದಲ್ಲಿನ ಕೀಟ ಭಾದೆ, ರೋಗದ ನಿಯಂತ್ರಣಕ್ಕೆ ಸಲಹೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 5- ಪ್ರಸಕ್ತ ಮುಂಗಾರು ಹಂಗಾಮಿನ ಮೆಕ್ಕೆಜೋಳದಲ್ಲಿ ಕಂಡು ಬರುತ್ತಿರುವ ವಿವಿಧ ಕೀಟ ಭಾದೆ ಹಾಗೂ ರೋಗದ ನಿಯಂತ್ರಣಕ್ಕೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ರೈತರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಸಕಾಲದಲ್ಲಿ ಆಗಿದ್ದು, ಆರಂಭ ಹಂತದಲ್ಲಿ ರೈತರಿಗೆ ಹರ್ಷ ತಂದಿತ್ತು. ರೈತರು ಮೊದಲ ಬಾರಿಗೆ ಹೆಸರು ಬೆಳೆಯನ್ನು ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಿದರು. ಅದೇ ರೀತಿ ಈ ಮುಂಗಾರಿನಲ್ಲಿ ಅತಿ ಹೆಚ್ಚಿನ ಪ್ರದೇಶದಲ್ಲಿ ಮೆಕ್ಕೆಜೋಳವನ್ನು ಬಿತ್ತನೆ ಮಾಡಿದ್ದಾರೆ. ಆದರೆ ನಂತರ ಮೂರು ನಾಲ್ಕು ವಾರಗಳ ಕಾಲ ಮಳೆ ಬಾರದೆ ಬೆಳೆಗಳು ಒಣಗುತ್ತ ಬಂದವಲ್ಲದೆ ಗಾಯದ ಮೇಲೆ ಬರೆ ಎಳೆದಂತೆ ಕೀಟ ರೋಗಗಳ ಬಾಧೆ ಹೆಚ್ಚಾಗಿ ರೈತರು ಆತಂಕ ಪಡುವಂತಾಯಿತು.
ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಮತ್ತು ಕೃಷಿ ಇಲಾಖೆ ಹಾಗೂ ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದಿದ ವಿಜ್ಞಾನಿಗಳು ಆಗಮಿಸಿ ಹೆಸರು ಬೆಳೆ ಸಮೀಕ್ಷೆ ಮಾಡಿ ಬೆಳೆಯು ಕುಡಿ ಸಾಯುವ ರೋಗಕ್ಕೆ ಬಲಿಯಾಗಿದ್ದು, ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲು ಸೂಚಿಸಿರುತ್ತಾರೆ.
ಈಗ ಮೆಕ್ಕೆಜೋಳದಲ್ಲಿ ರಸ ಹೀರುವ ಕೀಟಗಳು ಅದರಲ್ಲೂ ಕರಿ ಹೇನು ಮತ್ತು ಇತರೆ ಕೀಟಗಳ ಭಾದೆ ಅಲ್ಲದೆ, ಬೂಜುತುಪ್ಪಟ ರೋಗದ ಬಾಧೆ ಕಂಡುಬಂದಿದ್ದು, ಇದರಿಂದ ರೈತರು ತೀವ್ರ ಆತಂಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ರೈತರಿಗೆ ಕೆಲವು ಸಲಹೆಗಳನ್ನು ನೀಡಿರುತ್ತಾರೆ. ರೈತರು ಯಾವಾಗಲೂ ಇಲಾಖೆ ಮತ್ತು ವಿಜ್ಞಾನಿಗಳನ್ನು ಸಂಪರ್ಕಿಸಿ ತಳಿ, ಉತ್ತಮ ಬೇಸಾಯ ಕ್ರಮಗಳನ್ನು ಅನುಸರಿಸಿ ಬಿತ್ತನೆ ಮಾಡಬೇಕು. ಕಡ್ಡಾಯವಾಗಿ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಸಮುದಾಯ ಪದ್ಧತಿಯಲ್ಲಿ ಸಸ್ಯ ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಬೇಕು.
ಮೆಕ್ಕೆಜೋಳದಲ್ಲಿನ ಕೀಟದ ಬಾಧೆಗೆ ರೋಗಾರ್ ಎನ್ನುವ ಕೀಟನಾಶಕವನ್ನು ಎರಡು ಮಿಲಿ 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಬೂಜು ತುಪ್ಪಟ್ ರೋಗದ ಬಾಧೆಗೆ ಆರಂಭ ಹಂತದಲ್ಲಿ ಬೀಜೋಪಚಾರ ಮಾಡಬೇಕು. ಬಿತ್ತಿದ ಒಂದು ತಿಂಗಳೊಳಗೆ ಮೆಟಲಾಕ್ಸಿಲ ಎನ್ನುವ ಶಿಲೀಂದ್ರನಾಶಕವನ್ನು ಎರಡುವರೆ ಗ್ರಾಂ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಈ ಎಲ್ಲಾ ಸಿಂಪರಣಾ ಕ್ರಮಗಳನ್ನು ಸಮುದಾಯ ರೀತಿಯಲ್ಲಿ ಮಾಡಿದಲ್ಲಿ ಪರಿಣಾಮಕಾರಿಯಾಗಿ ಕೀಟ ಮತ್ತು ರೋಗಗಳ ಹತೋಟಿ ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೈತರು ಕೃಷಿ ವಿಸ್ತರಣಾ ಕೇಂದ್ರದ ವಿಸ್ತರಣಾ ಮುಂದಾಳಾದ ಡಾ. ಎಂ.ವಿ.ರವಿ ಮೊ.ಸಂ: 9480247745 ಹಾಗೂ ಸಹಾಯಕ ಪ್ರಾಧ್ಯಾಪಕರಾದ ವಾಮನಮೂರ್ತಿ ಮೊ.ಸಂ: 8217696837 ಗೆ ಸಂಪರ್ಕಿಸುವAತೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಪ್ರಕಟಣೆ ತಿಳಿಸಿದೆ.
