WhatsApp Image 2024-05-15 at 9.19.57 PM

ಗಂಗಾವತಿ ಟ್ರಾಫಿಕ್ ಸಮಸ್ಯೆ ಪರಿಹರಿಸುವಂತೆ ಒತ್ತಾಯ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 16- ನಗರದಲ್ಲಿ ದಿನೆದಿನೇ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು, ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕೂಡಲೇ ನಗರ ಸಂಚಾರಿ ಪೊಲೀಸ್ ಠಾಣೆ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಜನಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಕೆ.ಗಣೇಶ ಮಚ್ಚಿ ಒತ್ತಾಯಿಸಿದ್ದಾರೆ.

ಈ ಕುರಿತಂತೆ ನಗರ ಸಂಚಾರಿ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಅವರಿಗೆ ಬುಧವಾರದಂದು ಮನವಿ ಸಲ್ಲಿಸಿ ಮಾತನಾಡಿದ ಗಣೇಶ ಮಚ್ಚಿ, ನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದ್ದು, ವ್ಯಾಪಾರ ವಹಿವಾಟಿಗಾಗಿ ನಗರಕ್ಕೆ ಆಗಮಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದರಿಂದ ಸಹಜವಾಗಿ ವಾಹನಗಳ ಸಂಚಾರವೂ ಮಿತಿಮೀರುತ್ತಿದೆ. ಇವುಗಳನ್ನು ನಿಯಂತ್ರಿಸುವಲ್ಲಿ ಟ್ರಾಫಿಕ್ ಸಿಗ್ನಲ್ ಗಳ ಪಾತ್ರ ಪ್ರಮುಖವಾಗಿದ್ದು, ನಗರದ ಯಾವೊಂದೂ ವೃತ್ತಗಳಲ್ಲಿ ಸಿಗ್ನಲ್ ಗಳು ಕಾರ್ಯನಿರ್ವಹಿಸುತ್ತಿಲ್ಲ. ಕೂಡಲೇ ನಗರದ ಸಿಬಿಎಸ್ ವೃತ್ತ ಮತ್ತು ನೀಲಕಂಠೇಶ್ವರ ವೃತ್ತದಲ್ಲಿರುವ ಸಿಗ್ನಲ್ ವ್ಯವಸ್ಥೆಯನ್ನು ಸರಿಪಡಿಸಬೇಕು.

ಈ ಕುರಿತಂತೆ ನಗರ ಸಂಚಾರಿ ಪೊಲೀಸ್ ಠಾಣೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು. ಕೇವಲ ವಾಹನಗಳ ತಪಾಸಣೆ ಹಾಗೂ ದಂಡ ವಸೂಲಿಯಲ್ಲಿ ಕಾಲಹರಣ ಮಾಡದೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ಇಲ್ಲಿಯವರೆಗೆ ಡ್ರಿಂಕ್ & ಡ್ರೈವ್ ಪ್ರಕರಣಗಳು ಎಷ್ಟು ದಾಖಲಾಗಿವೆ ಎಂಬುದರ ಬಗ್ಗೆ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು.

ವಾಹನ ಸವಾರರಿಗೆ ಕೇವಲ ದಂಡ ಹಾಕಿ ಹಣ ಪಡೆದು ರಸೀದಿ ನೀಡಿ ಸಾಗಹಾಕುವ ಪರಿಪಾಠ ಬಿಟ್ಟು ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳು ಮುಂದಾಗಬೇಕು. ಜತೆಗೆ ವಾಹನ ಸವಾರರಿಗೆ ಸಂಚಾರಿ ನಿಯಮಗಳ ಕುರಿತು ಅರಿವು ಮೂಡಿಸುವ ನಾಮಫಲಕಗಳನ್ನು ನಗರದ ಪ್ರಮುಖ ಭಾಗಗಳಲ್ಲಿ ಹಾಕಬೇಕು. ನಗರದ ಕೆಲ ಬಾರ್ & ರೆಸ್ಟೋರೆಂಟ್ ಗಳು ಹಾಗೂ ಇತರೆ ವ್ಯಾಪಾರಸ್ಥರು ಪುಟ್ ಪಾತ್ ಗಳನ್ನು ಅತಿಕ್ರಮಿಸಿದ್ದು, ಅವುಗಳನ್ನು ಕೂಡಲೇ ತೆರವುಗೊಳಿಸಿ ಜನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಜನಜಾಗೃತಿ ಸಮಿತಿಯ ಉಪಾಧ್ಯಕ್ಷ ಮೋಜೆಸ್ ಪಾಲ್ (ಮೋಹನ್), ರಾಜ್ಯ ಕಾರ್ಯದರ್ಶಿ ಸಂತೋಷ ಕುಮಾರ ಆಲ್ಕೋಡ್ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!