
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಡಾ.ಎಸ್.ಬಿ.ಹಂದ್ರಾಳರಿಂದ ವಿಶೇಷ ಯೋಗ ಶಿಬಿರ
ಕರುನಾಡ ಬೆಳಗು ಸುದ್ದಿ
ವಿಜಯನಗರ, 19- ಮಧುಮೇಹ ಎಂಬುದು ರೋಗ ಅಲ್ಲ, ಅದು ಅಶಿಸ್ತು ಜೀವನಕ್ರಮದ ಪ್ರತಿಬಿಂಬವಷ್ಟೇ. ಯೋಗ, ಸರಿಯಾದ ಆಹಾರ ಮತ್ತು ಶಿಸ್ತುಬದ್ಧ ಜೀವನ ಕ್ರಮದಿಂದ ನಮ್ಮನ್ನು ಮಧುಮೇಹ ಬಾಧಿಸದಂತೆ ಮಾಡಬಹುದು ಎಂದು ವೈದ್ಯರೂ ಆಗಿರುವ ಪತಂಜಲಿ ಯೋಗ ಸಮಿತಿಯ ಗದಗ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಡಾ.ಎಸ್.ಬಿ.ಹಂದ್ರಾಳ ಹೇಳಿದರು.
ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಬೆಳಿಗ್ಗೆ ಮಧುಮೇಹ ನಿಯಂತ್ರಣ ವಿಚಾರದಲ್ಲಿ ವಿಶೇಷ ಯೋಗ ಶಿಬಿರ ನಡೆಸಿಕೊಟ್ಟ ಅವರು, ಯೋಗ ಪ್ರಾತ್ಯಕ್ಷಿಕೆಗಳ ಮೂಲಕ ಡಯಾಬಿಟಿಸ್ ಅನ್ನು ಹೇಗೆ ದೂರ ಇರಬಹುದು ಎಂಬುದರ ಮಾರ್ಗದರ್ಶನ ನೀಡಿದರು.
ಬದಲಾದ ಜೀವನಶೈಲಿ, ಆಹಾರ ಪದ್ಧತಿ, ಅತಿಯಾದ ತೂಕ, ಒತ್ತಡದ ಜೀವನ, ನಿದ್ರಾಹೀನತೆ, ಅಜೀರ್ಣತೆ, ಮಲಬದ್ಧತೆ ಮೊದಲಾದ ಕಾರಣಗಳಿಂದ ಮಧುಮೇಹ ಉಂಟಾಗುತ್ತದೆ. ಟೈಪ್ 1 ಮಧುಮೇಹಕ್ಕೆ ಹೊರಗಿನಿಂದ ಇನ್ಸುಲಿನ್ ತೆಗೆದುಕೊಳ್ಳುವುದು ಅನಿವಾರ್ಯ, ಆದರೆ ಟೈಪ್ 2 ಮಧುಮೇಹವನ್ನು ವಿವಿಧ ಯೋಗಾಸನಗಳು, ಮುದ್ರೆ ಸಹಿತ ಪ್ರಾಣಾಯಾಮಗಳು, ಸರಿಯಾದ ಆಹಾರ ಕ್ರಮ, ಶಿಸ್ತಿನ ಜೀವನ ವಿಧಾನದಿಂದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದರು.
ಮಂಡೂಕಾಸನ, ಶಶಾಂಕಾಸನ, ವಕ್ರಾಸನ, ಪಶ್ಚಿಮೋತ್ತಾಸನ, ಗೋಮುಖಾಸನ ಮೊದಲಾದ ಆಸನಗಳಿಂದ ಮೇದೋಜೀರಕ ಗ್ರಂಥಿಗೆ ಒತ್ತಡ ಬಿದ್ದು ಇನ್ಸುಲಿನ್ ಉತ್ಪಾಧನೆಗೆ ಉತ್ತೇಜನ ನೀಡುವ ಬಗೆಯನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟ ಡಾ.ಹಂದ್ರಾಳ, ಪಾಲಕ್ ಸೊಪ್ಪು, ಹೂಕೋಸು, ದೊಣ್ಣೆ ಮೆಣಸಿನಕಾಯಿ, ಹೀರೆಕಾಯಿ, ಟೊಮೆಟೊ, ಕ್ಯಾರೆಟ್, ಬೀನ್ಸ್, ಸೌತೆಕಾಯಿ, ಬಟಾಣಿ, ಚೌಳಿಕಾಯಿ, ಹಾಗಲಕಾಯಿ ಸೇವನೆಯ ಮಹತ್ವ ತಿಳಿಸಿಕೊಟ್ಟರು. ಮಧುಮೇಹ ಇರುವವರು ಆಲೂಗೆಡ್ಡೆ, ಗೆಣಸು, ಬೀಟ್‌ರೂಟ್, ಕುಂಬಳಕಾಯಿ ಬಳಸದೆ ಇರುವುದು ಉತ್ತಮ ಎಂದರು.
ಸೇಬು, ಮೂಸಂಬಿ, ಕಿತ್ತಳೆಯಂತಹ ಹಣ್ಣುಗಳನ್ನು ತಿನ್ನಬೇಕು. ಚಿಕ್ಕು, ಬಾಳೆಹಣ್ಣು, ದ್ರಾಕ್ಷಿ, ಹಲಸು, ಮಾವುಗಳಿಂದ ದೂರ ಇದ್ದಷ್ಟು ಒಳಿತು ಎಂದ ಅವರು, ಹಸಿವಾದಾಗಲಷ್ಟೇ ಊಟ ಮಾಡುವುದು ಮುಖ್ಯ. ಬಹುಧಾನ್ಯವನ್ನು ಒಳಗೊಂಡ ತಾಲಿಪಟ್ ಅನ್ನು ಸೇವಿಸಿದರೆ ಉತ್ತಮ ಎಂದು ಸಲಹೆ ನೀಡಿದರು. ಕೊನೆಯಲ್ಲಿ ವಿವಿಧ ಮುದ್ರೆಗಳೊಂದಿಗೆ ಮೂರು ಬಗೆಯ ಪ್ರಾಣಾಯಾಮಗಳನ್ನು ಮಾಡುವುದರಿಂದ ಮಧುಮೇಹ ಹೇಗೆ ನಿಯಂತ್ರಣಕ್ಕೆ ಬರುತ್ತದೆ ಎಂಬುದನ್ನು ತಿಳಿಸಿಕೊಟ್ಟರು.
ಪಾರ್ಕ್ ಭರ್ತಿ : ಡಾ.ಹಂದ್ರಾಳ ಅವರ ಯೋಗ ಶಿಬಿರದಲ್ಲಿ ಏನಾದರೂ ಒಂದು ವಿಶೇಷ ಇದ್ದೇ ಇರುತ್ತದೆ. ಈ ಬಾರಿ ಅವರು ಮಧುಮೇಹಕ್ಕೆ ಕಾರಣ, ಅದರ ನಿಯಂತ್ರಣ ಕ್ರಮದ ಕುರಿತಂತೆ ಸುಲಭ ಮತ್ತು ಸರಳ ರೀತಿಯಲ್ಲಿ ಎಲ್ಲರೂ ಅನುಸರಿಸಬಹುದಾದ ದಾರಿ ತೋರಿಸಿಕೊಟ್ಟರು. ಉದ್ಯಾನದಲ್ಲಿ ಕಿಕ್ಕಿರಿದು ಸೇರಿದ್ದ ಯೋಗ ಸಾಧಕರು ಮತ್ತು ಅಭ್ಯಾಸಿಗಳು ಹಂದ್ರಾಳ ಅವರ ಹಾಸ್ಯಭರಿತ ಯೋಗ ಕಕ್ಷೆಗೆ ಖುಷಿಪಟ್ಟರು.
ಪತಂಜಲಿ ಯೋಗ ಸಮಿತಿಯ ಯುವ ರಾಜ್ಯ ಪ್ರಭಾರಿ ಕಿರಣ್ ಕುಮಾರ್, ಯೋಗ ಸಾಧಕರಾದ ರಾಜೇಶ್ ಕಾರ್ವಾ, ಎಫ್.ಟಿ.ಹಳ್ಳಿಕೇರಿ, ಅನಂತ ಜೋಶಿ. ಶ್ರೀರಾಮ, ಪ್ರಕಾಶ ಕುಲಕರ್ಣಿ, ಮಲ್ಲಿಕಾರ್ಜುನ, ಅಶೋಕ ಚಿತ್ರಗಾರ, ವಿಠೋಬಣ್ಣ, ಶಿವಮೂರ್ತಿ, ಶ್ರೀಧರ, ಮಂಗಳಮ್ಮ, ಪ್ರಮೀಳಮ್ಮ, ವೆಂಕಟೇಶ ವಿವಿಧ ಕೇಂದ್ರಗಳ ಸಂಚಾಲಕರು ಪಾಲ್ಗೊಂಡಿದ್ದರು.
ಸದಾ ಸಂತೋಷವಾಗಿರಿ
‘ಮನದಲ್ಲಿ ಮೂಡುವ ಚಿಂತೆಯೇ ನಮ್ಮ ರೋಗದ ಮೂಲವಾಗಿರುತ್ತದೆ. ನಾನು ಖುಷಿಯಿಂದ ಇದ್ದೇನೆ ಎಂದು ಭಾವಿಸುತ್ತಲೇ, ಜೀವನವನ್ನು ರಚನಾತ್ಮಕವಾಗಿ ತೆಗೆದುಕೊಂಡಾಗ ಅದು ಸುಗಮವಾಗಿಬಿಡುತ್ತದೆ. ಮನೆ, ಕೆಲಸದ ಸ್ಥಳಗಳಲ್ಲಿನ ಒತ್ತಡಗಳು ಎಷ್ಟೇ ಇರಲಿ, ಅದು ನಮ್ಮ ಮನಸ್ಸನ್ನು ಬಾಧಿಸದಂತೆ ನೋಡಿಕೊಳ್ಳಿ, ಸದಾ ಸಂತೋಷದಿಂದಿರಿ, ನಿಮ್ಮ ಹತ್ತಿರಕ್ಕೆ ಯಾವುದೇ ರೋಗ ಸುಳಿಯದು ಅಥವಾ ಕಾಯಿಲೆ ಬಂದರೂ ಅದು ನಿಮ್ಮ ನಿಯಂತ್ರಣದಲ್ಲೇ ಇರುವುದು ನಿಶ್ಚಿತ’ ಎಂದು ಡಾ.ಎಸ್.ಬಿ.ಹಂದ್ರಾಳ ಹೇಳಿದರು.