ತಹಶೀಲ್ದಾರ್ ವಿರುದ್ಧ ಕ್ರಮಕ್ಕಾಗಿ ಲೋಕಾಯುಕ್ತಗೆ ದೂರು
ಕರುನಾಡ ಬೆಳಗು ಸುದ್ದಿ
ಗಂಗಾವತಿ, 19- ಪಹಣಿಯಲ್ಲಿ ಮಾಲಿಕರ ಹೆಸರು ದಾಖಲಿಸುವಲ್ಲಿ ಉದ್ದೇಶ ಪೂರ್ವಕ ವಿಳಂಬ ಧೋರಣೆ ಅನುಸರಿಸುತ್ತಿರುವ ತಹಸೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅರ್ಜಿದಾರರೊಬ್ಬರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಮಂಥನ ಸಭಾಂಗಣದಲ್ಲಿ ಲೋಕಾಯುಕ್ತರು ಹಮ್ಮಿಕೊಂಡಿದ್ದ ಕನಕಗಿರಿ, ಕಾರಟಗಿ ಹಾಗೂ ಗಂಗಾವತಿ ತಾಲ್ಲೂಕು ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲು ಸ್ವೀಕಾರದಲ್ಲಿ ರಮೇಶ ಜೋಗಿನ್ ಎಂಬ ಅರ್ಜಿದಾರ ಕಂದಾಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದರು.
ಪೂರ್ವಜರ ಹೆಸರಲ್ಲಿರುವ ಆಸ್ತಿಗೆ ಪಹಣಿಯಲ್ಲಿ ಮಾಲಿಕರ ಹೆಸರು ಸೇರಿಸುವಲ್ಲಿ ಗಂಗಾವತಿ ತಹಸೀಲ್ದಾರ್ ಯು. ನಾಗರಾಜ್ ಮತ್ತು ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಉದ್ದೇಶ ಪೂರ್ವಕ ವಿಳಂಬ ಧೋರಣೆ ಹೊಂದಿದ್ದಾರೆ ಎಂದರು.
ದೂರಿನ ವಿವರಣೆ : ಗಂಗಾವತಿ ಗ್ರಾಮದ ಸರ್ವೆ ನಂಬರ್ 46/ ಅ ವಿಸ್ತೀರ್ಣ 16 ಎಕರೆ 11 ಗುಂಟೆ, ಭೂಮಿಯನ್ನು ದುಗೋಜಿ ರಾವ್ ಗುಂಜಳ್ಳಿ ಈರಪ್ಪ ಎಂಬುವವರಿಂದ 1954ನೇ ಸಾಲಿನಲ್ಲಿ ನಮ್ಮ ತಾತ ಭರಮಪ್ಪ ತಂದೆ ಅನಾಳಪ್ಪ ಜೋಗಿನ್ ಖರೀದಿಸಿದ್ದಾರೆ. ಈ ಸಂಬಂಧ ಎಲ್ಲಾ ಮೂಲ ಮತ್ತು ಪೂರಕ ದಾಖಲೆ ಸಲ್ಲಿಸಲಾಗಿದೆ. 1954 ರಿಂದ 1969 ರವರೆಗೆ ಪಹಣಿ ಪತ್ರಿಕೆಗಳು ಚಾಲ್ತಿಯಲ್ಲಿ ಇವೆ. 1969 ರಿಂದ 2020 ರವರೆಗೆ ಪಹಣಿಯಲ್ಲಿ ನಮ್ಮ ತಾತನ ಹೆಸರು ಸೇರಿಸಲು ಕಂದಾಯ ಇಲಾಖೆಯ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಈ ಹಿನ್ನೆಲೆ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಜರುಗಿಸಬೇಕು. ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೆ ತಹಸೀಲ್ ಕಚೇರಿ ಕೆಲ ನೌಕರರು ನಮ್ಮ ಮನವಿಗೆ ಸ್ಪಂದಿಸಿಲ್ಲ.
ಸಿಬ್ಬಂದಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದರು.
ತಹಸೀಲ್ದಾರ್ ಯು. ನಾಗರಾಜ್ ಮಾತನಾಡಿ ವಿವಾದಿತ ಜಮೀನಿನಲ್ಲಿ ಹೆಸರು ಸೇರ್ಪಡೆಗೆ ತಡೆ ಕೋರಿ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ.
ವಿಚಾರಣಾ ಹಂತದಲ್ಲಿ ಪ್ರಕರಣ ಬಾಕಿ ಇರುವ ಕಾರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ನ್ಯಾಯಾಲಯದಿಂದ ಸೂಕ್ತ ಆದೇಶ ಬಂದ ಬಳಿಕ ಕೈಗೊಳ್ಳಲಾಗುವುದು ಎಂದರು.
ಅಹವಾಲು ಸ್ವೀಕಾರ ಸಭೆಯಲ್ಲಿ ಕಂದಾಯ, ತಾಲ್ಲೂಕು ಪಂಚಾಯತ್, ನಗರಸಭೆ ಸೇರಿದಂತೆ ಒಟ್ಟು 14 ದೂರುಗಳು ದಾಖಲಾದವು. ಈ ಪೈಕಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸಂಬಂಧಿಸಿದ ಎರಡು ಪ್ರಕರಣಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಮಾಡಲಾಯಿತು.
ಮೂರು ಗಂಭೀರ ಸ್ವರೂಪದ ಪ್ರಕರಣಗಳನ್ನು ದೂರು ದಾಖಲಿಸಿ ತನಿಖೆ ಕೈಗೊಳ್ಳುವ ಸಂಬಂಧ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಯಿತು.
ಒಂಭತ್ತು ಪ್ರಕರಣಗಳಲ್ಲಿ ಸಂಬಂಧಿ ಇಲಾಖೆಯ ಅಧಿಕಾರಿಗಳು ಸಮಯಾವಕಾಶ ಕೋರಿದರು. ನಿಗಧಿತ ಕಲಾವಧಿಯಲ್ಲಿ ಪ್ರಕರಣಗಳನ್ನು ಇತ್ಯರ್ಥ ಮಾಡದೇ ಹೋದಲ್ಲಿ ಸಂಬಂಧಿತ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಕೊಪ್ಪಳ-ರಾಯಚೂರು ಲೋಕಾಯುಕ್ತ ಎಸ್ಪಿ ಶಶಿಧರ ಎಚ್ಚರಿಕೆ ನೀಡಿದರು.
ಕೊಪ್ಪಳದ ಪ್ರಭಾರಿ ಡಿವೈಎಸ್ಪಿ ಚಂದ್ರಪ್ಪ, ಇನ್ಸ್ಪೆಕ್ಟರ್ ಸುನಿಲ್ ಕುಮಾರ ಸಿಬ್ಬಂದಿ ಇದ್ದರು.
