ಮಳೆಯಿಂದ ಸಾರ್ವಜನಿಕರಿಗೆ ಅನಾನೂಕೂಲವಾಗದಂತೆ ಕೊಪ್ಪಳ ನಗರಸಭೆಯಿಂದ ಮುಂಜಾಗೃತಾ ಕ್ರಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 16- ಕಳೆದ ಮೂರನಾಲ್ಕು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಸಾರ್ವಜನಿಕರಿಗೆ ತೊಂದರೆ ಉಂಟಾದ ಸ್ಥಳಗಳಿಗೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು ಮುಂಬರುವ ದಿನಗಳಲ್ಲಿ ಯಾವುದೇ ಅನಾನೂಕೂಲ ಉಂಟಾಗದಂತೆ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೊಪ್ಪಳ ನಗರಸಭೆಯಿಂದ ಕೈಗೊಳ್ಳಲಾಗಿದೆ ಎಂದು ಪೌರಾಯುಕ್ತ ಗಣಪತಿ ಪಾಟೀಲ ತಿಳಿಸಿದ್ದಾರೆ.
ಮಳೆಯಿಂದ ಹಾನಿಗೊಳಗಾದ ಪ್ರದೇಶ, ವಾರ್ಡ್ ಗಳಿಗೆ ಸಂಸದರು, ಶಾಸಕರು, ನಗರಸಭೆ ಸದಸ್ಯರೊಂದಿಗೆ ಅಧಿಕಾರಗಳ ತಂಡವು ಭೇಟಿ ನೀಡಿ, ಆಗಿರುವ ತೊಂದರೆ, ಹಾನಿ ಕುರಿತು ಪರಿಶೀಲನೆ ಮಾಡಿರುವರು ಹಾಗೂ ಅಗತ್ಯ ಮುಂಜಾಗೃತ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಿರುವುರು, ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನಿಂತಿರುವ ನೀರನ್ನು ಹೊರತೆಗೆಯುವ ಕಾರ್ಯಕ್ಕಾಗಿ ಸಕ್ಕಿಂಗ್ ಮಷಿನ್ಗಳ ಸಹಾಯದಿಂದ ಸದರಿ ಕಾರ್ಯವನ್ನು ನಿರ್ವಹಿಸಲಾಗುತ್ತಿತ್ತು. ಹಾಗೂ ಚರಂಡಿಗಳ ಸ್ವಚ್ಛತಾ ಕಾರ್ಯದಲ್ಲಿ ನಗರಸಭೆಯ ಪೌರಕಾರ್ಮಿಕಕರು ಹಾಗೂ ಜೆ.ಸಿ.ಬಿ ಗಳ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಅಗತ್ಯ ಕ್ರಮವಹಿಸಲಾಗಿದೆ ಎಂದು ತಿಳಿಸಿರುವರು.
ನೀರು ನಿಂತಿರುವ ಪ್ರದೇಶಗಳಿಗೆ ಭೇಟಿ ನೀಡಿ ತಗ್ಗು ಪ್ರದೇಶಗಳಲ್ಲಿ ನಿಂತಿರುವ ನೀರುನ್ನು ಸರಾಗವಾಗಿ ಹರಿದುಹೋಗುವಂತೆ ಪರ್ಯಾಯ ವ್ಯವಸ್ಥೆ ಮಾಡಿ ತುರ್ತು ಕ್ರಮ ಕೈಗೊಳ್ಳಲಾಗಿದ್ದು, ರೈಲ್ವೇ ಸ್ಟೇಶನ್ ಹತ್ತಿರ ರೈಲ್ವೇ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದ್ದು, ಸದರಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಚರಂಡಿಯನ್ನು ಮುಚ್ಚಿರುವುದರಿಂದ ಮಳೆ ನೀರು ನಿಂತು ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು. ಹಾಗೂ ಕುವೆಂಪು ನಗರದಲ್ಲಿ ಗುಡ್ಡದಿಂದ ರಬಸವಾಗಿ ಹರಿದು ಬಂದ ಮಳೆ ನೀರು ಕುವೆಂಪು ನಗರದ ಕೆಲವು ಮನೆಗಳಲ್ಲಿ ನೀರು ನಿಂತಿರುವ ಸ್ಥಳಕ್ಕೆ ತುರ್ತಾಗಿ ನಗರಸಭೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ. ರಾತ್ರಿ ವೇಳೆಯಲ್ಲಿ ಎಲ್ಲಾ ಮನೆಗಳ ನೀರನ್ನು ಹೊರಹಾಕಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಂಡಿದೆ.
ಇನ್ನೂ ಕಲ್ಯಾಣನಗರ, ಗಣೇಶ ನಗರಗಳಲ್ಲಿ ಇದೇ ರೀತಿ ಸಮಸ್ಯೆ ಉಂಟಾಗಿದ್ದು, ಇಲ್ಲಿಯೂ ಕೂಡ ನಗರಸಭೆ ಸಿಬ್ಬಂದಿಗಳು ಹಾಗೂ ಜಿ.ಸಿ.ಬಿ. ಗಳು ಮತ್ತು ಸಕ್ಕಿಂಗ್ ಮಷಿನ್ಗಳ ಮುಖಾಂತರ ನೀರನ್ನು ಪರ್ಯಾಯವಾಗಿ ಬೇರೆ ಕಡೆಗೆ ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿದೆ. ಯಾವುದಾದರೂ ಮನೆಗಳು ಬಿದ್ದಲ್ಲಿ ಕೂಡಲೇ ಪರಿಹಾರ ಒದಗಿಸಲು ಕ್ರಮವಹಿಸಲಾಗಿರುತ್ತದೆ ಎಂದು ಪೌರಾಯುಕ್ತರಾದ ಗಣಪತಿ ಪಾಟೀಲರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
