ಮೂರು ದಿನ ಮುಂದೂಡಿದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 16-: ಅಂಗನವಾಡಿ ಕೇಂದ್ರಗಳಲ್ಲೇ ಎಲ್ಕೆಜಿ, ಯುಕೆಜಿ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಐಟಿಯುಸಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಮೂರು ದಿನಗಳ ಕಾಲ ಮುಂದೂಡಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯ ಸ್ಥಳಕ್ಕೆ ಇಂದು ಭೇಟಿ ನೀಡಿದ ತಹಶೀಲ್ದಾರ್ ಅವರು, ಬೇಡಿಕೆಗಳ ಈಡೇರಿಕೆಗಾಗಿ ಸಲ್ಲಿಸಿದ ಮನವಿ ಪತ್ರವನ್ನು ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮುಷ್ಕರವನ್ನು ಹಿಂಪಡೆಯಲಾಗಿದೆ.
ಜೂ.16ರ ಭಾನುವಾರ ಮತ್ತು ಜೂ.17 ರ ಸೋಮವಾರ ಸರ್ಕಾರಿ ರಜೆ ಮತ್ತು ಬಕ್ರೀದ್ ಹಬ್ಬದ ನಿಮಿತ್ತ ರಜೆ ಇರಲಿದೆ. ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸಿ ಮೂರು ದಿನದೊಳಗೆ ಬೇಡಿಕೆ ಈಡೇರಿಸುವ ನಂಬಿಕೆ ಇದೆ. ಹೀಗಾಗಿ ಮೂರು ದಿನಗಳ ಕಾಲ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಿಂಪಡೆಯಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾಧ್ಯಕ್ಷೆ ಎಸ್. ಅರ್ಕಾಣಿ ತಿಳಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಮಕ್ಕಳ ಆರೋಗ್ಯ ಪಾಲನೆ ಮತ್ತು ಅಕ್ಷರಾಭ್ಯಾಸದ ಜೊತೆಗೆ ಸರ್ಕಾರದ ಕುಟುಂಬ ಯೋಜನೆಗಳ ಮೂಲಕ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅಂಗನವಾಡಿ ಕೇಂದ್ರಗಳಲ್ಲಿಯೇ ರಾಜ್ಯ ಸರ್ಕಾರ ಎಲ್ ಕೆ ಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿತ್ತು.
ಅಂಗನವಾಡಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಎಲ್ ಕೆ ಜಿ, ಮತ್ತು ಯುಕೆಜಿ ಪ್ರಾರಂಭಿಸಬೇಕು. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನ ಆಯ್ಕೆ ಮಾಡಿಕೊಳ್ಳಬೇಕು. ಅಂಗನವಾಡಿ ಬಾಡಿಗೆ ಕಟ್ಟಡಗಳಲ್ಲಿ, ಸ್ವಂತ ಕಟ್ಟಡಗಳಲ್ಲಿ ಎಲ್ ಕೆ ಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸಲು ಆವಕಾಶ ಕಲ್ಪಿಸಿಕೊಡಬೇಕು. ಮಕ್ಕಳಿಗೆ ಬೇಕಾಗುವ ಸಮವಸ್ತ್ರ, ಶೂ, ಬ್ಯಾಗ್, ಪಠ್ಯಪುಸ್ತಕಗಳನ್ನು ಅಂಗನವಾಡಿಗೆ ಪೂರೈಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಮಕ್ಕಳಿಗೆ ಶಿಕ್ಷಣ ಬೋಧಿಸಲು ಹೆಚ್ಚಿನ ತರಬೇತಿಯನ್ನು ನೀಡಬೇಕು.
ಎಸ್ಡಿಎಂಸಿ ಯೋಜನೆ ರದ್ದುಪಡಿಸಬೇಕು ಮತ್ತು ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಗೊಳಿಸಬೇಕು ಎನ್ನುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾನೂನು ಸಲಹೆಗಾರರದ ಎಆರ್ಎಂ ಇಸ್ಮಾಯಿಲ್, ಎಐಟಿಯುಸಿ ಅಧ್ಯಕ್ಷರಾದ ಹೆಚ್.ಎ.ಆದಿಮೂರ್ತಿ, ಪ್ರಧಾನ ಕಾರ್ಯದರ್ಶಿಳಾದ ಇ.ಮಂಗಮ್ಮ, ಜಿಲ್ಲೆ ಮತ್ತು ವಿವಿಧ ತಾಲೂಕುಗಳ ಪದಾಧಿಕಾರಿಗಳಾದ ಎರೆಮ್ಮ, ಸೌಭಾಗ್ಯ, ಟಿ.ಇಂದಿರಾ, ನಾಗರತ್ನಮ್ಮ, ಪಿ.ಕವಿತಾ, ಪಿ.ಡಿ.ಮೀನಾಕುಮಾರಿ, ಬಿ.ಕೆ.ಶಾರದಾ, ಸ್ವರೂಪರಾಣಿ, ರತ್ನಮ್ಮ, ಪಿ.ಕಲಾವತಿ, ಮಂಗಳಗೌರಿ, ಶಿವಗಂಗಮ್ಮ, ಪಿ.ಸತ್ಯಸಾವಿತ್ರಿ, ಟಿ.ಪುಷ್ಪಾವತಿ, ಜ್ಯೋತಿ, ಈರಮ್ಮ, ಕುಮಾರಿ, ಕು.ಪದ್ಮಾವತಿ, ಜಮೇಲಾ, ಗಂಗಮ್ಮ, ರೇಣುಕಾ, ಗೋವಿಂದಮ್ಮ, ಸುನೀತಾ, ಕೊಂಡಮ್ಮ, ಮಾರ್ಗರೇಟ್, ಶಕುಂತಲಾ .ಬಿ .ಕೆ., ವೀಣಾ, ಜಗಧೀಶ್ವರಿ, ಈರಮ್ಮ ಹಿರೇಮಠ, ಮಮತಾ, ಪದ್ಮ, ನೀಲಮ್ಮ ಇನ್ನಿತರರು ಇದ್ದರು.
