2c136fae-be38-4577-97e1-318669006cc9

ಮೊಬೈಲ್ ಆ್ಯಪ್ ಮೂಲಕ ಬೆಳೆ ಮಾಹಿತಿ ದಾಖಲಿಸಿ : ಟಿ.ಎಸ್ ರುದ್ರೇಶಪ್ಪ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 5- ಕೊಪ್ಪಳ ಜಿಲ್ಲೆಯಲ್ಲಿ ಆರಂಭವಾಗಿರುವ ಮುಂಗಾರು ಬೆಳೆ ಸಮೀಕ್ಷೆಯಲ್ಲಿ ರೈತರು ಮೊಬೈಲ್ ಆ್ಯಪ್ ಮೂಲಕ ಬೆಳೆ ಮಾಹಿತಿಯನ್ನು ಖುದ್ದಾಗಿ ದಾಖಲಿಸುವಂತೆ ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ಟಿ.ಎಸ್ ರುದ್ರೇಶಪ್ಪ ಅವರು ತಿಳಿಸಿದ್ದಾರೆ.

ರೈತರು ಬೆಳೆದ ಬೆಳೆಗಳ ಬಗ್ಗೆ ನಿಖರವಾಗಿ ಮಾಹಿತಿ ಪಡೆದುಕೊಳ್ಳಲು ಈಗಾಗಲೇ ಇ-ಆಡಳಿತ ವತಿಯಿಂದ ಅಭಿವೃದ್ಧಿಪಡಿಸಿರುವ ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ನಡೆಸುವ ಕಾರ್ಯ ಜಿಲ್ಲೆಯಲ್ಲಿ ಜೂನ್ 22ರಂದು ಮುಂಗಾರು ಬೆಳೆ ಸಮೀಕ್ಷೆ ಆರಂಭವಾಗಿದ್ದು, ರೈತರು ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಗಳ ವಿವರ ದಾಖಲಿಸಲು ಆಂಡ್ರಾಯ್ಡ್ ಆ್ಯಪ್ ಮೂಲಕ ವಿವರಗಳನ್ನು ತಾವೇ ಸ್ವತಃ ಮೊಬೈಲ್ ತಂತ್ರಾಶದ ಮೂಲಕ ದಾಖಲಿಸಬಹುದಾಗಿದೆ.

ರೈತರು ತಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇಸ್ಟೋರ್ ನಿಂದ ಬೆಳೆ ಸಮೀಕ್ಷೆ ಮುಂಗಾರು ಹಂಗಾಮಿನ Crop Survey Kharif 2024 ಆ್ಯಪ್‌ನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿಕೊಂಡು ಆ್ಯಪ್‌ನ್ನು ಡೌನ್ಲೋಡ್ ಮಾಡಿಕೊಳ್ಳಳಬಹುದು ಹಾಗೂ ಬೆಳೆ ವಿವರ ದಾಖಲಿಸಬಹುದಾಗಿದೆ.

ಬೆಳೆ ಸಮೀಕ್ಷೆ ದತ್ತಾಂಶ ಮಾಹಿತಿಯನ್ನು ಬೆಳೆ ವಿಸ್ತರಣೆ ಎಣಿಕೆ ಕಾರ್ಯದಲ್ಲಿ, ಬೆಳೆ ಕಟಾವು ಪ್ರಯೋಗದಲ್ಲಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ, ಬೆಳೆಹಾನಿ ವರದಿ ಸಿದ್ದಪಡಿಸಲು, ಬೆಳೆ ವಿಮಾ ಯೋಜನೆ, ಬೆಂಬಲ ಬೆಲೆ ಯೋಜನೆ, ಆರ್.ಟಿ.ಸಿ ಯಲ್ಲಿ ಬೆಳೆ ವಿವರ ದಾಖಲಿಸಲು, ರಾಷ್ಟ್ರೀಯ ಹಾಗೂ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಮಂಜೂರು ಮಾಡಲು ಬೆಳೆ ಸಮೀಕ್ಷೆ ಮಾಹಿತಿಯನ್ನು ಉಪಯೋಗಿಸಲಾಗುತ್ತಿದೆ. ಜಿಲ್ಲೆಯಲ್ಲಿ 434326 ಬೆಳೆ ತಾಕುಗಳಿದ್ದು, ಈ ತಾಕುಗಳಿಗೆ ರೈತರು ಬೆಳೆಗಳ ಮಾಹಿತಿಯನ್ನು ಸ್ವಯಂ ದಾಖಲಿಸಬೇಕೆಂದು ವಿನಂತಿಸಲಾಗಿದೆ.

ರೈತರೇ ತಾವೇ ಸ್ವತಹ ಬೆಳೆ ಸಮೀಕ್ಷೆ ಆ್ಯಪ್ ಮೂಲಕ ತಾವು ಬೆಳೆದ ಮಾಹಿತಿ ನಿಖರವಾಗಿ ನೀಡಬಹುದಾಗಿದೆ. ಇದರಿಂದ ಮುಂಬರುವ ವ್ಯತ್ಯಾವನ್ನು ತಡೆಯಬಹುದಾಗಿದೆ. ರೈತರ ಬೆಳೆ ಸಮೀಕ್ಷೆ ಕೈಗೊಳ್ಳಲು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಪಿಆರ್‌ಗಳನ್ನು ಅಥವಾ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!