WhatsApp Image 2024-07-12 at 6.17.06 PM

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಹೊಸಪೇಟೆ ನಗರ ಸಂಚಾರ : ಉಪ ಕಾರಾಗೃಹ, ಬಸ್ ನಿಲ್ದಾಣ, ಆಸ್ಪತ್ರೆಯಲ್ಲಿನ ಸ್ಥಿತಿಗತಿ ಪರಿಶೀಲನೆ

ಕರುನಾಡ ಬೆಳಗು ಸುದ್ದಿ

ವಿಜಯನಗರ, 12- ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ.ಟಿ.ಶ್ಯಾಮ್ ಭಟ್ ಹಾಗೂ ಆಯೋಗದ ಸದಸ್ಯರಾದ ಎಸ್.ಕೆ.ವಂಟಿಗೋಡಿ ಅವರು ಪೂರ್ವನಿಗದಿಯಂತೆ ಪರಿವೀಕ್ಷಣೆ ಕಾರ್ಯಕ್ರಮದಡಿ ಜುಲೈ 11ರಂದು ಹೊಸಪೇಟೆ ನಗರ ಸಂಚಾರ ನಡೆಸಿದರು.

ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲನಲ್ಲಿ ಜುಲೈ 11ರಂದು ಬೆಳಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ, ದೂರುಗಳ ವಿಚಾರಣೆ ನಡೆಸಿದ ಬಳಿಕ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿ ಎ.ದಿನೇಶ್ ಸಂಪತ್‌ರಾಜ್ ಹಾಗೂ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಅರುಣ್ ಪೂಜಾರ ಅವರೊಂದಿಗೆ ಅಧ್ಯಕ್ಷರು ಮತ್ತು ಸದಸ್ಯರು ನಗರ ಪರಿವೀಕ್ಷಣೆ ಕೈಗೊಂಡರು.

ಮೊದಲಿಗೆ ಹೊಸಪೇಟೆ ತಾಲೂಕು ಉಪ ಕಾರಾಗೃಹಕ್ಕೆ ಭೇಟಿ ನೀಡಿದರು. ಕಾರಾಗೃಹದಲ್ಲಿದ್ದ ಕೈದಿಗಳೊಂದಿಗೆ ಮಾತನಾಡಿದರು. ವಕೀಲರೊಂದಿಗೆ ಕಾಲಕಾಲಕ್ಕೆ ವಿಚಾರಣೆಗೆ ಹಾಜರಾಗುತ್ತೀರಾ? ಯೋಗ ಧ್ಯಾನ ಮಾಡುತ್ತೀರಾ? ಎಂದು ಕೇಳಿ ಮಾಹಿತಿ ಪಡೆದರು. ಉಪ ಕಾರಾಗೃಹದಲ್ಲಿ 36 ಪುರುಷರು ಹಾಗೂ ನಾಲ್ವರು ಮಹಿಳೆಯರು ಸೇರಿ 40 ಜನ ಕೈದಿಗಳಿದ್ದಾರೆ. 12 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಸಹಾಯಕ ಜೈಲರ್ ಎಸ್.ಹೆಚ್. ಕಾಳಿ ಅವರು ಮಾಹಿತಿ ನೀಡಿದರು.

ಬಳಿಕ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದರು. ಹುಲಿಗಿ, ಕೊಪ್ಪಳ ಬಸ್ ನಿಲುಗಡೆಯ ಹತ್ತಿರದಲ್ಲಿರುವ ಕುಡಿಯುವ ನೀರು ಪೂರೈಕೆಯ ಸ್ಥಳ ವೀಕ್ಷಿಸಿ, ಅಲ್ಲಿ ಪಾಚಿಗಟ್ಟಿರುವುದನ್ನು ಕಂಡು ಸರಿ ಮಾಡಲು ತಿಳಿಸಿದರು. ಬಸ್ ನಿಲ್ದಾಣದಲ್ಲಿನ ಸ್ವೀಟ್‌ಮಾರ್ಟ್ ಸೇರಿದಂತೆ ವಿವಿಧ ಅಂಗಡಿಗಳ ಮಾಲೀಕರೊಂದಿಗೆ ಮಾತನಾಡಿ ನಿಗದಿಪಡಿಸಿದ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಲು ತಿಳಿಸಿದರು.

ತಿಂಡಿ ತಿನಿಸುಗಳನ್ನು, ನೀರಿನ ಬಾಟಲ್‌ಗಳನ್ನು ಹೆಚ್ಚಿಗೆ ಬೆಲೆಗೆ ಮಾರಾಟ ಮಾಡುವುದು, ಅವಧಿ ಮೀರಿದ ತಿಂಡಿ ತಿನಿಸುಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಸ್ ನಿಲ್ದಾಣದ ನೆಲಮಹಡಿಯ ಕಚೇರಿಗೆ ತೆರಳಿ ಅಲ್ಲಿದ್ದ ಮುರುಕಲು ಟೇಬಲ್, ಖುರ್ಚಿಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕರ ಕಚೇರಿಯಲ್ಲಿ ಈ ರೀತಿ ಅವ್ಯವಸ್ಥೆ ಸರಿಯಲ್ಲ. ಅಗತ್ಯವಿದ್ದರು ಸಹ ಕಚೇರಿಗೆ ಹೊಸ ಸಾಮಗ್ರಿ ಏಕೆ ಖರೀದಿಸಿಲ್ಲ? ಪಾಸುಕೊಡಲು ನೇಮಿಸಿದ ಖಾಸಗಿ ಏಜೆನ್ಸಿಯವರಿಗೆ ಕೂಡಲು ಖುರ್ಚಿ ಮತ್ತು ಟೇಬಲ್ ಯಾಕೆ ನೀಡಿಲ್ಲ. ಪತ್ರಗಳನ್ನು ಕಚೇರಿಯಲ್ಲಿ ಎಲ್ಲೆಂದರಲ್ಲಿ ಏಕೆ ಇಟ್ಟಿದ್ದೀರಿ? ಎಂದು ಸಹಾಯಕ ಸಂಚಾರಿ ನಿರೀಕ್ಷಕರು ಮತ್ತು ಡಿಟಿಓ ಅವರಿಗೆ ತರಾಟೆಗೆ ತೆಗೆದುಕೊಂಡರು. ಈ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಕಾಲೇಜು ವಿದ್ಯಾರ್ಥಿಗಳು ಪಾಸು ಪಡೆಯಲು ಸಾಲಾಗಿ ನಿಂತಿರುವುದನ್ನು ನೋಡಿದರು. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ತೊಂದರೆಯಾಗದ ಹಾಗೆ ವಿಳಂಬವಾಗದ ಹಾಗೆ ಕ್ಷಿಪ್ರಗತಿಯಲ್ಲಿ ಪಾಸುಗಳ ಪೂರೈಕೆಗೆ ವ್ಯವಸ್ಥೆ ಮಾಡಬೇಕು ಎಂದು ಸಾರಿಗೆ ಇಲಾಖೆಯ ಮೋತಿಲಾಲ್ ಲಮಾಣಿ ಮತ್ತು ಆರ್.ಪಿ.ವಾಜಂತ್ರಿ ಅವರಿಗೆ ನಿರ್ದೇಶನ ನೀಡಿದರು.

ಬಳಿಕ ತಂಡವು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿತು. ಆಸ್ಪತ್ರೆಯಲ್ಲಿನ ವೈದ್ಯಕೀಯ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯಲ್ಲಿ ಸದ್ಯ 12 ಜನ ತಜ್ಞ ವೈದ್ಯರಿದ್ದಾರೆ. ಒಂದು ರೆಡಿಯಾಲಜಿ ಹುದ್ದೆ ಖಾಲಿಯಿದೆ. 6 ಗ್ರೂಪ್ ಡಿ., 26 ನರ್ಸ್ಗಳು ಇದ್ದಾರೆ. ಹೆಚ್ಚುವರಿ 10 ಜನ ನರ್ಸಗಳು ಮತ್ತು ಕನಿಷ್ಟ 6 ಜನ ಗ್ರೂಪ್ ಡಿ ಸಿಬ್ಬಂದಿ ಬೇಕಿರುತ್ತಾರೆ ಎಂದು ಡಿಎಚ್‌ಓ ಡಾ.ಶಂಕರ ನಾಯಕ ಅವರು ತಿಳಿಸಿದರು.

ಈ ವೇಳೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಲೀಮ್ ಪಾಶಾ, ನಗರಸಭೆ ಪೌರಾಯುಕ್ತರಾದ ಮನೋಹರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಹೆಚ್.ಎಸ್.., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಮಚಂದ್ರಪ್ಪ ಕೆ.ಬಿ., ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶಾಶುಮೋದ್ದಿನ್ ಹಾಗೂ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!