ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಪೋನ್ ವಿತರಣೆ
ಕರುನಾಡ ಬೆಳಗು ಸುದ್ದಿ
ವಿಜಯನಗರ, 13- ಅಂಗನವಾಡಿ ಮೇಲ್ವಿಚಾರಕರು ಮತ್ತು ಸಹಾಯಕಿಯರಿಗೆ ಮೊಬೈಲ್ ಫೋನ್ ವಿತರಣೆ ಕಾರ್ಯಕ್ರಮವು ಜುಲೈ 12ರಂದು ನಡೆಯಿತು.
ಹೊಸಪೇಟೆಯ ಟೌನ್ ರೀಡಿಂಗ್ ಹಾಲ್ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆದ ಕಾರ್ಯಕ್ರಮವನ್ನು ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಉದ್ಘಾಟಿಸಿ ಮಾತನಾಡಿ, ಶಿಕ್ಷಣದ ವಿವಿಧ ಹಂತಗಳಲ್ಲಿ ಶಾಲಾ ಪೂರ್ವ ಶಿಕ್ಷಣ ಹಂತ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳ ಮನಸು ಸಾಕಷ್ಟು ಮೃದುವಾಗಿರುತ್ತದೆ. ಅಂಗನವಾಡಿಗಳಲ್ಲಿ ಮಕ್ಕಳಿಗೆ ಅನುಕೂಲಕರ ಶಿಕ್ಷಣ ಲಭ್ಯವಾದಲ್ಲಿ ಅವರ ಭವಿಷ್ಯ ಉಜ್ವಲವಾಗಲಿದೆ.
ಈ ನಿಟ್ಟಿನಲ್ಲಿ ಅಂಗನವಾಡಿಗಳನ್ನು ಸಬಲೀಕರಣಗೊಳಿಸಲಾಗುತ್ತದೆ. ವೈಜ್ಞಾನಿಕವಾಗಿ ನಾವು ಸಾಕಷ್ಟು ಮುಂದುವರೆಯುತ್ತಿದ್ದೇವೆ. ತಾಂತ್ರಿಕ ಸಾಧನಗಳ ಮೂಲಕವು ಸಹ ಪ್ರಚಲಿತ ಮಾಹಿತಿ ಪಡೆದುಕೊಂಡು ಪ್ರಸ್ತುತ ಕಾಲಕ್ಕೆ ಹೊಂದಿಕೊAಡು ಉತ್ತಮವಾಗಿ ಮಕ್ಕಳಿಗೆ ಮಾರ್ಗದರ್ಶನ ಮಾಡುವ ನಿಟ್ಟಿನಲ್ಲಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಅಂಗನವಾಡಿಗಳಲ್ಲಿನ ಮೇಲ್ವಿಚಾರಕಿಯರು ಮತ್ತು ಸಹಾಯಕಿಯರಿಗೆ ಮೊಬೈಲ್ ಪೋನ್ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದೆ ವೇಳೆ ಶಾಸಕರು ಅಂಗನವಾಡಿ ಮೇಲ್ವಿಚಾರಕಿಯರು ಮತ್ತು ಸಹಾಯಕಿಯರ ಅಹವಾಲನ್ನು ಸಹ ಆಲಿಸಿದರು. ಅಂಗನವಾಡಿ ನೌಕರರರಿಗೆ ಏನೇ ಸಮಸ್ಯೆಗಳಿರಲಿ ಅದನ್ನು ಪರಿಶೀಲಿಸಿ ನಿಯಮಾನುಸಾರ ಆದ್ಯತೆಯ ಮೇರೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶ್ವೇತಾ ಅವರು ಮಾತನಾಡಿದರು.
ಸಮಾರಂಭದಲ್ಲಿ ಹೂಡಾ ಅಧ್ಯಕ್ಷರಾದ ಇಮಾಮ್ ನಿಯಾಜಿ, ತಹಸೀಲ್ದಾರರಾದ ವಿಶ್ವಜಿತ್ ಮೆಹತಾ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹರೀಶ್, ಹೊಸಪೇಟೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂದು ಅಂಗಡಿ, ಜಿಲ್ಲಾ ನಿರೂಪಣಾಧಿಕಾರಿಗಳು ಸೇರಿದಂತೆ ಇನ್ನೀತರರು ಇದ್ದರು.
